ಕಾಕಿ ಜನಸೇವಾ ಸಂಸ್ಥೆ ಸಭಾಭವನದಲ್ಲಿ ಡಿ. 23ರಂದು ನಡೆಯಲಿರುವ ಉಚಿತ ಸಾಮೂಹಿಕ ವಿವಾಹದಲ್ಲಿ ವಿವಾಹವಾಗಲಿರುವ ವಧು-ವರರ ಜೋಡಿಗಳಿಗೆ ಮದುವೆ ಬಟ್ಟೆ ವಿತರಿಸಲಾಯಿತು.
ರಾಣಿಬೆನ್ನೂರು: ಬಡವರಿಗೆ ಅನುಕೂಲವಾಗುವ ದೃಷ್ಟಿಯಿಂದ ನಗರದ ಹುಣಿಸಿಕಟ್ಟಿ ರಸ್ತೆಯಲ್ಲಿ ಜೆಸಿ ಅರಮನೆ ನಿರ್ಮಿಸಲಾಗಿದ್ದು, ಅದನ್ನು ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಆಚರಣೆಯೊಂದಿಗೆ ಲೋಕಾರ್ಪಣೆ ಮಾಡಲಾಗುವುದು ಎಂದು ಕಾಕಿ ಜನಸೇವಾ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಕಾಕಿ ಹೇಳಿದರು.ನಗರದ ಕಾಕಿ ಜನಸೇವಾ ಸಂಸ್ಥೆ ಸಭಾಭವನದಲ್ಲಿ ಡಿ. 23ರಂದು ನಡೆಯಲಿರುವ ಉಚಿತ ಸಾಮೂಹಿಕ ವಿವಾಹದಲ್ಲಿ ವಿವಾಹವಾಗಲಿರುವ ವಧು-ವರರ ಜೋಡಿಗಳಿಗೆ ಮದುವೆ ಬಟ್ಟೆ ವಿತರಿಸಿ ಮಾತನಾಡಿದರು.
ಪ್ರತಿವರ್ಷ ಶ್ರೀ ನೀಲಕಂಠೇಶ್ವರ ಕಾರ್ತಿಕೋತ್ಸವ ಅಂಗವಾಗಿ ದೊಡ್ಡನಾಗಪ್ಪ ಹಾಗೂ ಸಣ್ಣನಾಗಪ್ಪ ಸ್ಮರಣಾರ್ಥವಾಗಿ ಉಚಿತ ಸಾಮೂಹಿಕ ವಿವಾಹ ನಡೆಸಲಾಗುತ್ತಿತ್ತು. ಈ ಬಾರಿ ಅದನ್ನು ಹುಣಿಸಿಕಟ್ಟಿ ರಸ್ತೆಯಲ್ಲಿರುವ ಹೊಸದಾಗಿ ನಿರ್ಮಿಸಿರುವ ಜೆಸಿ ವಾಣಿ ಅರಮನೆ ಕಲ್ಯಾಣ ಮಂಟಪದಲ್ಲಿ ಆಚರಣೆ ಮಾಡಲಾಗುವುದು. ಸೆ. 22ರಂದು ಸಂಜೆ 5ಕ್ಕೆ ನಗರದ ಯರೇಕುಪ್ಪಿ ರಸ್ತೆಯ ನೀಲಕಂಠೇಶ್ವರ ದೇವಸ್ಥಾನದಿಂದ 15 ವಧು-ವರರಿಗೆ ಜೋಡಿಗಳಿಗೆ ಪ್ರತ್ಯೇಕ ಸಾರೋಟದಲ್ಲಿ ಭಾಜಾ ಭಜಂತ್ರಿ ಹಾಗೂ ಡಿಜೆಯೊಂದಿಗೆ ಮೆರವಣಿಗೆಗೆ ಮಾಡಲಾಗುವುದು. ಶಾಸಕ ಪ್ರಕಾಶ ಕೋಳಿವಾಡ ಮೆರವಣಿಗೆಗೆ ಚಾಲನೆ ನೀಡುವರು. ನಂತರ ಅಲ್ಲಿಂದ ಹೊರಡುವ ಮೆರವಣಿಗೆಯು ಹಳೇ ಪಿ.ಬಿ. ರಸ್ತೆ, ಕಾಕಿಗಲ್ಲಿ, ಕುರುಬಗೇರಿ ಕ್ರಾಸ್, ದುರ್ಗಾ ಸರ್ಕಲ್, ಎಂ.ಜಿ. ರಸ್ತೆ, ಚಕ್ಕಿಮಿಕ್ಕಿ ದುರ್ಗಾದೇವಿ ಸರ್ಕಲ್, ಪೋಸ್ಟ್ ಸರ್ಕಲ್, ಮೆಡ್ಲೇರಿ ರಸ್ತೆ ಮಾರ್ಗವಾಗಿ ಹುಣಿಸಿಕಟ್ಟಿ ರಸ್ತೆಯಲ್ಲಿರುವ ಜೆಸಿ ವಾಣಿ ಅರಮನೆ ತಲುಪುವುದು. ನಂತರ ರಾತ್ರಿ ಎಲ್ಲರಿಗೂ ಊಟದ ವ್ಯವಸ್ಥೆ ಇರುತ್ತದೆ. ಡಿ. 23ರಂದು ಬೆಳಗ್ಗೆ 11ಗಂಟೆಗೆ ಸಾಮೂಹಿಕ ವಿವಾಹ ಮಹೋತ್ಸವ, ಧರ್ಮಸಭೆ ಹಾಗೂ ಜನಸೇವಾ ಸದಸ್ಯರೊಬ್ಬರಿಗೆ ಉಚಿತ ನಿವೇಶನ ವಿತರಣೆ ಕಾರ್ಯಕ್ರಮ ನಡೆಯಲಿದೆ. ನಗರದ ಶನೈಶ್ಚರ ಮಂದಿರದ ಶಿವಯೋಗಿ ಶಿವಾಚಾರ್ಯರು ಹಾಗೂ ಲಿಂಗದಹಳ್ಳಿ ರಂಭಾಪುರಿ ಶಾಖಾ ಹಿರೇಮಠದ ವೀರಭದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಶಾಸಕ ಪ್ರಕಾಶ ಕೋಳಿವಾಡ ಸಮಾರಂಭ ಉದ್ಘಾಟಿಸುವರು. ಮಾಜಿ ಶಾಸಕ ಅರುಣಕುಮಾರ ಪೂಜಾರ, ನಗರಸಭೆ ಸದಸ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಆಗಮಿಸುವರು ಎಂದರು.
ಕಾಕಿ ಜನಸೇವಾ ಸಂಸ್ಥೆ ಉಪಾಧ್ಯಕ್ಷ ಶಿವಾನಂದ ಸಾಲಗೇರಿ ಮಾತನಾಡಿ, ವಿವಾಹ ಮಹೋತ್ಸವ ನಂತರ ಸಂಜೆ 7 ಗಂಟೆಗೆ ಯರೇಕುಪ್ಪಿ ರಸ್ತೆಯ ಶ್ರೀ ನೀಲಕಂಠೇಶ್ವರ ಸ್ವಾಮಿಯ ಕಾರ್ತಿಕೋತ್ಸವ ಜರುಗಲಿದೆ. ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದರು.
ಕಾಕಿ ಜನಸೇವಾ ಸಂಸ್ಥೆ ಕಾರ್ಯದರ್ಶಿ ರೂಪಾ ಕಾಕಿ, ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ಹನುಮಂತಪ್ಪ ಅಮಾಸಿ, ಖಜಾಂಚಿ ಹನುಮಂತಪ್ಪ ಕಾಕಿ, ಕಾರ್ಯದರ್ಶಿ ಮಂಜುನಾಥ ಹೊಸಪೇಟೆ, ಶಿವಾನಂದ ಬಗಾದಿ, ಕೆ.ಸಿ.ನಾಗರಜ್ಜಿ, ನಿತ್ಯಾನಂದ ಕುಂದಾಪುರ, ಕೊಟ್ರೇಶಪ್ಪ ಎಮ್ಮಿ ಮತ್ತಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.