ದಾವಣಗೆರೆ : ಚಿಕ್ಕಮಗಳೂರು ದತ್ತ ಪೀಠದಲ್ಲಿ ಇಸ್ಲಾಮಿಕ್ ಅತಿಕ್ರಮಣ ಮುಕ್ತಿಮಾಡಿ ಸಂಪೂರ್ಣ ಹಿಂದೂ ಪೀಠವನ್ನಾಗಿ ನಿರ್ಮಿಸಲು ಸರ್ಕಾರ ಮುಂದಾಗಲಿ ಎಂದು ಶ್ರೀರಾಮ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಪರಶುರಾಮ ನಡುಮನಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಅತ್ಯಂತ ಸುಂದರ ರಮಣೀಯ ತಾಣ ದತ್ತ ಪೀಠವಾಗಿದೆ. ಆದರೆ, ಅಲ್ಲಿ ಇಸ್ಲಾಮಿಕ್ ಅತಿಕ್ರಮಣದಿಂದ ಹಿಂದುಗಳ ಭಾವನೆಗೆ ಧಕ್ಕೆ ತರುವ ಪ್ರಯತ್ನ ನಡೆದಿದೆ ಎಂದರು. ದತ್ತ ಪೀಠದ ಇಸ್ಲಾಮಿಕ್ ಅತಿಕ್ರಮಣದ ವಿರುದ್ಧ ಶ್ರೀರಾಮ ಸೇನೆಯು ಕಳೆದ 20 ವರ್ಷಗಲಿಂದ ಸಂಘರ್ಷ, ಹೋರಾಟ, ರಥಯಾತ್ರೆ, ಶೋಭಾಯಾತ್ರೆ, ಕಾನೂನು ಹೋರಾಟ, ಧರ್ಮಸಭೆ, ಸಾಮೂಹಿಕ ದತ್ತ ಜಪ ಹೀಗೆ ನಾನಾ ರೀತಿಯ ನಮ್ಮ ಹಕ್ಕನ್ನು ಪಡೆಯುವ ಪ್ರಯತ್ನ ಮಾಡಿದೆ ಎಂದು ತಿಳಿಸಿದರು.
ಶ್ರೀರಾಮ ಸೇನೆ ಹೋರಾಟದ ಫಲವಾಗಿ ದತ್ತ ಪೀಠದಲ್ಲಿದ್ದ ಗೋರಿಗಳಿಗೆ ಹಸಿರು ಚಾದರ್ ಹೊದಿಸದಂತೆ ಮತ್ತು ನಮಾಜ್ ಬಂದ್ ಮಾಡಲಾಗಿದೆ. ಮಾಂಸಹಾರ ಬಂದ್ ಆಗಿದೆ. ಅರ್ಚಕರ ನೇಮಕವಾಗಿದೆ. ದತ್ತ ಪೀಠದ ಆಸ್ತಿ ಕಬಳಿಸಿದವರಿಗೆ ನೋಟೀಸ್ ಜಾರಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಹಿಂದುಗಳ ಆರಾಧ್ಯ ತಾಣ ದತ್ತಪೀಠದಲ್ಲಿ ಅನಧಿಕೃತ ಇಸ್ಲಾಮಿಕ್ ಕುರುಹುಗಳನ್ನು ಮೂಲ ದರ್ಗಾ ನಾಗೇನಹಳ್ಳಿಗೆ ಸ್ಥಳಾಂತರಿಸಬೇಕು. ಕೇವಲ ಹಿಂದು ಅರ್ಚಕರು ದತ್ತ ಪೀಠದಲ್ಲಿ ಇರಬೇಕು. ಮೌಲ್ವಿಗಳನ್ನು ಅಲ್ಲಿಂದ ತೆಗೆದು, ನಾಗೇನಹಳ್ಳಿಗೆ ಕಳಿಸಬೇಕು. ದತ್ತ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಆಗಬೇಕು ಎಂದು ಅವರು ಒತ್ತಾಯಿಸಿದರು.
ಶ್ರೀದತ್ತ ಪೀಠದಲ್ಲಿ ಹಿಂದುಗಳಿಗೆ ವಸತಿಗೆ ವ್ಯವಸ್ಥೆ ಮಾಡಬೇಕು. ಪೀಠದಲ್ಲಿ ಕಳುವಾದ ಎಲ್ಲವನ್ನೂ ದತ್ತ ಪೀಠಕ್ಕೆ ಹಿಂದಿರುಗಿಸಬೇಕು. ನಿತ್ಯ ಗಾಣಗಾಪುರದಿಂದ ದತ್ತ ಪೀಠಕ್ಕೆ ನೇರ ಬಸ್ಸು ಸೇವೆಯನ್ನು ಆರಂಭಿಸಬೇಕು. ನಮ್ಮ ಬೇಡಿಕೆಗಳಿಗೆ ಸರ್ಕಾರ ಪ್ರಥಮಾದ್ಯತೆಯ ಮೇಲೆ ಸ್ಪಂದಿಸಿ, ಈಡೇರಿಸಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿ ವರ್ಷದಂತೆ ಈ ಸಲವೂ 21ನೇ ವರ್ಷದ ದತ್ತ ಮಾಲಾ ಅಭಿಯಾನವನ್ನು ನ.4ರಿಂದ 10ರವರೆಗೆ ಹಮ್ಮಿಕೊಳ್ಳಲಾಗಿದೆ. ನ.4ರಂದು ಮಾಲಾಧಾರಣೆ, ನ.7ಕ್ಕೆ ದತ್ತ ದೀಪೋತ್ಸವ, ನ.9ಕ್ಕೆ ಪಡಿ ಸಂಗ್ರಹ(ಭಿಕ್ಷಾಟನೆ), ನ.10ಕ್ಕೆ ಚಿಕ್ಕಮಗಳೂರಿನಲ್ಲಿ ಧರ್ಮಸಭೆ, ಶೋಭಾಯಾತ್ರೆ, ದತ್ತ ಪೀಠದಲ್ಲಿ ಹೋಮ, ಹವನ, ಪ್ರಸಾದ ವಿತರಣೆ ನಡೆಯಲಿದೆ ಎಂದು ಅವರು ಹೇಳಿದರು.
ನ.10ಕ್ಕೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ನೇತೃತ್ವದ ಆಂದೋಲದ ಕರಣೇಶ್ವರ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನಿಧ್ಯದ ಧರ್ಮಸಭೆಯಲ್ಲಿ ಹೈದ್ರಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿಯ ಪರಾಜಿತ ಅಭ್ಯರ್ಥಿ, ಪ್ರಖರ ಹಿಂದುವಾದಿ ಮಾಧವಿ ಲತಾ, ವಿಪ ಸದಸ್ಯ ಸಿ.ಟಿ.ರವಿ, ಮೈಸೂರು ಮಾಜಿ ಸಂಸದ ಪ್ರತಾಪ ಸಿಂಹ, ಗಂಗಾಧರ ಕುಲಕರ್ಣಿ, ಶ್ರೀ ಯೋಗಿ ಸಂಜೀತ್ ಸುವರ್ಣ, ರಾಜೇಂದ್ರ ಕುಮಾರ, ದೀಪತ್ ದೊಡ್ಡಯ್ಯ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಪರಶುರಾಮ ನಡುಮನಿ ತಿಳಿಸಿದರು.