ಪ್ರಾಧ್ಯಾಪಕರು ಪ್ರತಿದಿನ ಕಲಿಯುತ್ತಿರಬೇಕು

KannadaprabhaNewsNetwork |  
Published : Jul 03, 2026, 01:15 AM IST
33 | Kannada Prabha

ಸಾರಾಂಶ

ವಿದ್ಯಾರ್ಥಿಗಳು ಮಾಸ್ಟರ್ ಡಿಗ್ರಿಯಲ್ಲಿ ಓದಿ ಪಾಸಾಗಿದ್ದಾರೆ ಅಂದರೆ ಜ್ಞಾನದ ಶೇ. 50 ರಷ್ಟು ಭಾಗ ತಿಳಿದಿರುತ್ತಾರೆ

ಕನ್ನಡಪ್ರಭ ವಾರ್ತೆ ಮೈಸೂರುಪ್ರಾಧ್ಯಾಪಕ ವೃತ್ತಿಯಲ್ಲಿರುವವರು ಪ್ರತಿ ದಿನ ಅಧ್ಯಯನ ಮಾಡುತ್ತಾ ಹೊಸ ಹೊಸದನ್ನು ಕಲಿಯುತ್ತಾ ಕಾಲ ಕಾಲಕ್ಕೆ ಅಪ್ಡೇಟ್ ಆಗುತ್ತಾ ಹೋದರೆ ಮಾತ್ರ ಪರಿಪೂರ್ಣ ಜ್ಞಾನವನ್ನು ವಿದ್ಯಾರ್ಥಿ ಸಮೂಹಕ್ಕೆ ವಿಸ್ತರಿಸುತ್ತಾ ಹೋಗಬಹುದೆಂದು ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್. ನಾಗರಾಜು ಅಭಿಪ್ರಾಯಪಟ್ಟರು.ಜ್ಞಾನಬುತ್ತಿ ಸಂಸ್ಥೆಯ ವತಿಯಿಂದ ಕೆ-ಸೆಟ್ ಮತ್ತು ಯುಜಿಸಿ-ನೆಟ್ ಪರೀಕ್ಷಾ ಉಚಿತ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿ, ವಿದ್ಯಾರ್ಥಿಗಳು ಮಾಸ್ಟರ್ ಡಿಗ್ರಿಯಲ್ಲಿ ಓದಿ ಪಾಸಾಗಿದ್ದಾರೆ ಅಂದರೆ ಜ್ಞಾನದ ಶೇ. 50 ರಷ್ಟು ಭಾಗ ತಿಳಿದಿರುತ್ತಾರೆ. ಅವರು ಮುಂದೆ ವಿವಿ ಮತ್ತು ಕಾಲೇಜು ಪ್ರಾಧ್ಯಾಪಕರಾಗಿ ತಮ್ಮ ವಿದ್ಯಾರ್ಥಿಗಳಿಗೆ ತಾವು ಗಳಿಸಿದ ಜ್ಞಾನದ ಅರ್ಧಭಾಗವನ್ನು ಅಂದರೆ ಶೇ. 50ದಲ್ಲಿ ಅರ್ಧಭಾಗ ಅಂದರೆ ಶೇ. 25ರಷ್ಟು ಕಲಿಸುತ್ತಾರೆ. ಅವರ ಹತ್ತಿರ ಕಲಿತ ವಿದ್ಯಾರ್ಥಿಗಳು ಅದರ ಅರ್ಧಭಾಗವಾದ ಶೇ. 12.5 ಕಲಿಯುತ್ತಾರೆ. ಅವರ ಮುಂದೆ ತಮ್ಮ ವಿದ್ಯಾರ್ಥಿಗಳಿಗೆ ಅದರ ಅರ್ಧಭಾಗ ಅಂದರೆ ಶೇ 6.2% ಮಾತ್ರ ಕಲಿಸುತ್ತಾರೆ. ಇದು ದುರಂತವೇ ಸರಿ ಎಂದರು.ಪದವಿಯ ಅಂಕಗಳು ಈಗ ಉದ್ಯೋಗಕ್ಕೆ ಮಾನದಂಡವಾಗಿ ಉಳಿದಿಲ್ಲ. ಬದಲಾಗಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹತೆಯಾಗಿದೆ. ಕಠಿಣ ಪರಿಶ್ರಮ ಮತ್ತು ನಿರಂತರ ಪ್ರಯತ್ನದಿಂದ ಅಸಾಧ್ಯವಾದುದನ್ನು ಸಾಧಾರಣ ವಿದ್ಯಾರ್ಥಿಗಳು ಸಾಧಿಸಬಹುದು. ಪರೀಕ್ಷೆಗೆ ಪೂರ್ಣಪ್ರಮಾಣದಲ್ಲಿ ತಯಾರಾಗಬೇಕು. ನಿಗದಿತ ಪಠ್ಯಪುಸ್ತಕಗಳನ್ನು ಪ್ರತಿಸಾಲು ಬಿಡದಂತೆ ಓದಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ನಿಮ್ಮನ್ನು ನೀವು ಉತ್ತೇಜಿಸಿಕೊಂಡು ಪರೀಕ್ಷೆಗಳನ್ನು ಎದುರಿಸಿ ಜೀವನದಲ್ಲಿ ಯಶಸ್ಸುಗಳಿಸಿ ಎಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು.ನಾನು ಬನುಮಯ್ಯ ಕಾಲೇಜಿನಲ್ಲಿ ಬಿ.ಕಾಂ. ಓದುವಾಗ ಅಲ್ಲಿನ ಗುರುಗಳ ಬೋಧನೆಯ ಜ್ಞಾನ ಮತ್ತು ವಿದ್ವತ್ತಿಗೆ ಬೆರಗಾಗಿ, ಮುಂದೆ ಆದರೆ ಅಧ್ಯಾಪಕನೇ ಅಗಬೇಕೆಂದು ತೀರ್ಮಾನಿಸಿದೆ ಎಂದರು.ಬದುಕೆಂಬುದು ಚೈನಿನ ಸರಪಳಿ ಇದ್ದಹಾಗೆ. ಪ್ರತಿಕೊಂಡಿಯೂ ಗಟ್ಟಿಯಾಗಿರಬೇಕು. ಕೊಂಡಿಗಳ ನಡುವೆ ಬಿರುಕು ಬಿಟ್ಟಾಗ ಗಟ್ಟಿಯಾದ ಬೆಸುಗೆಗಳನ್ನು ನಿರಂತರವಾಗಿ ಹಾಕುತ್ತಿರಬೇಕು. ನಮ್ಮ ದೌರ್ಬಲ್ಯಗಳನ್ನು ಮೆಟ್ಟಿನಿಂತು; ಆದಮ್ಯ ಆತ್ಮವಿಶ್ವಾಸದಿಂದ ನಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ವಿದ್ಯಾರ್ಥಿಗಳು “ಸ್ಮಾರ್ಟ್” ಆಗಿ ಪರೀಕ್ಷೆ ಎದುರಿಸಿ ಮತ್ತು ಜೀವನದ ಸಮಸ್ಯೆಗಳನ್ನು “ಸ್ಮೈಲ್” ಮುಖಭಾವದಿಂದ ಎದುರಿಸಿ ಎಂದು ಎರಡು ಪದಗಳ ಪ್ರತಿ ಅಕ್ಷರವನ್ನು ವಿಸ್ತರಿಸಿ ವಿದ್ಯಾರ್ಥಿಗಳಿಗೆ ತಿಳಿಸಿದರು. ಮುಖ್ಯಅತಿಥಿಗಳಾಗಿ ಪ್ರೊ. ಮಲ್ಲಿಕಾರ್ಜುನ ಶಾಸ್ತ್ರಿಗಳು ಮಾತನಾಡಿ, ಕ್ರಿಕೆಟ್‌ ನಲ್ಲಿ ಯಶಸ್ವಿ ಬೋಲರ್ ಹಿಂದಕ್ಕೆ ಹೋಗಿ ಆನಂತರ ವೇಗವಾಗಿ ಮುಂದಕ್ಕೆ ಬಂದು ಬೊಲ್ ಮಾಡಿ ವಿಕೆಟ್ ಬೀಳಿಸುತ್ತಾನೆ. ಇದರ ಅರ್ಥ ಸೋಲುಗಳನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಯಶಸ್ವಿಯಾಗಬೇಕು ಎಂದರು. ಜ್ಞಾನಬುತ್ತಿ ಸಂಸ್ಥೆಯು ನಿಮಗೆ ಬುತ್ತಿಯನ್ನಷ್ಟೇ ನೀಡುತ್ತದೆಯೇ ಹೊರತು ಊಟವನ್ನಲ್ಲ. ಈ ಬುತ್ತಿಯನ್ನು ಬಳಸಿಕೊಂಡು ನೀವು ನಿಮ್ಮ ಉಜ್ವಲ ಭವಿಷ್ಯವನ್ನ ರೂಪಿಸಿಕೊಳ್ಳಿ ಎಂದು ಕರೆ ಕೊಟ್ಟರು.ಪ್ರೊ.ಆರ್. ಎನ್. ಪದ್ಮನಾಭ್ ಮಾತನಾಡಿ, ಅನ್ನ ಹಾಕಿದ ಮನೆ, ಗೊಬ್ಬರ ಹಾಕಿದ ರೈತ ಮತ್ತು ವಿದ್ಯೆ ಕಲಿಸಿದ ಗುರುಗಳು ಚೆನ್ನಾಗಿರಬೇಕು ಎಂದು ನಮ್ಮ ಹಿರಿಯರು ಮತ್ತು ಸಮಾಜ ಅಪೇಕ್ಷೆ ಪಡುತ್ತದೆ. ಅಂತಹ ಗೌರವಾನ್ವಿತ ಹುದ್ದೆಯನ್ನು ತಾವು ಬಯಸಿ ಬಂದಿದ್ದೀರಿ ನಿಮಗೆ ಶುಭವಾಗಲಿ ಎಂದು ಹಾರೈಸಿದರು.ಡಾ. ಶೈಲೇಶ್ ರಾಜ್ ಅರಸು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಹಕಾರಿ ವೈ.ಎನ್. ಶಂಕರೇಗೌಡರು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಪ್ರಾಂಶುಪಾಲ ಮಹದೇವ ನಾಯಕ್, ಡಾ. ಕೃ.ಪ. ಗಣೇಶ, ಡಾ.ಸಿ. ಪುಟ್ಟರಾಜು, ಡಾ. ಶೈಲೇಶ್ ರಾಜೇ ಅರಸ್, ಜೈನಹಳ್ಳಿ ಸತ್ಯನಾರಾಯಣಗೌಡ, ಕಾರ್ಯದರ್ಶಿ ಎಚ್. ಬಾಲಕೃಷ್ಣ, ಪ್ರೊ. ಕಿರಣ್ ಕೌಶಿಕ್, ಕಾರ್ಯದರ್ಶಿಎಚ್. ಬಾಲಕೃಷ್ಣ, ಇದ್ದರು. ಡಾ. ಅಮ್ಮ ರಾಮಚಂದ್ರ ಪ್ರಾರ್ಥಿಸಿದರು. ಡಾ. ಹೊನ್ನಯ್ಯ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಂಪೇಗೌಡ ಜಯಂತಿ ವೇಳೆ ಗದ್ದಲ: ಸಂಸದ ಸುಧಾಕರ್‌ ವಿರುದ್ಧ ತನಿಖೆಗೆ ಆಗ್ರಹ
ಫ.ಗು. ಹಳಕಟ್ಟಿ ಸೇವೆ ಅವಿಸ್ಮರಣೀಯ: ಅಪರ ಡಿಸಿ ಡಾ. ಭಾಸ್ಕರ್