ವಿಜಯಪುರದಲ್ಲಿ ಮೂರು ಮಕ್ಕಳ ಹೃದಯದ ಶಸ್ತ್ರಚಿಕಿತ್ಸೆ: ಉಚಿತವಾಗಿ ರಂಧ್ರಗಳ ಸರ್ಜರಿ

KannadaprabhaNewsNetwork | Updated : Sep 05 2024, 07:50 AM IST

ಸಾರಾಂಶ

ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಮೂರು ಮಕ್ಕಳಿಗೆ ಹೃದಯದ ರಂಧ್ರಗಳನ್ನು ಮುಚ್ಚುವ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ನಡೆಸಲಾಗಿದೆ. ಡಾ. ಶ್ರೀನಿವಾಸ್ ಎಲ್. ನೇತೃತ್ವದ ತಂಡವು ಈ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

 ವಿಜಯಪುರ :  ಹೃದಯದಲ್ಲಿ ರಂಧ್ರ ಸಮಸ್ಯೆ ಎದುರಿಸುತ್ತಿದ್ದ ಮೂರು ಮಕ್ಕಳಿಗೆ ನಗರದ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಮಕ್ಕಳ ಹೃದಯರೋಗ ಖ್ಯಾತ ತಜ್ಞ ಡಾ.ಶ್ರೀನಿವಾಸ್ ಎಲ್.ನೇತೃತ್ವದ ಪೀಡಿಯಾಟ್ರಿಕ್ ಕಾರ್ಡಿಯಾಲಜಿ ತಂಡವು ಹೃದಯದಲ್ಲಿದ್ದ ರಂಧ್ರಗಳನ್ನು ಮುಚ್ಚುವ ಮೂಲಕ ಆರೋಗ್ಯ ವಿಮೆ ಯೋಜನೆಯಡಿ ಉಚಿತವಾಗಿ ಚಿಕಿತ್ಸೆ ನೀಡಿದ್ದಾರೆ.

ಕಳೆದ ಭಾನುವಾರ ಈ ಮೂರು ಮಕ್ಕಳಿಗೆ ಪೇಟೆಂಟ್ ಡಕ್ಟಸ್ ಆರ್ಟಿರಿಯೋಸಸ್ (PDA) ಡಿವೈಸ್ ಕ್ಲೋಶರ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದು, ಚಿಕಿತ್ಸೆ ನಡೆಸಿದ ಎರಡು ದಿನಗಳ ನಂತರ ಮಕ್ಕಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಡಾ.ಶ್ರೀನಿವಾಸ.ಎಲ್ ಅವರು, ಈಗ ಚಿಕಿತ್ಸೆ ನೀಡಲಾಗಿರುವ ಮೂರು ಮಕ್ಕಳಿಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡುವಾಗ ಯಾವುದೇ ಔಷಧಿ ಅಗತ್ಯವಿಲ್ಲ. 

ಅವರಿಗೆ ಕೆಲವೊಮ್ಮೆ ಮಕ್ಕಳ ಹೊರರೋಗಿ ವಿಭಾಗದಲ್ಲಿ ಫಾಲೋ ಅಪ್ಗೆ ಬರಬೇಕಾಗುತ್ತದೆ. ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಹೊಂದಿರುವುದು ಈ ಭಾಗದ ಜನರಿಗೆ ವರದಾನವಾಗಿದೆ. ವಿಜಯಪುರ ಮತ್ತು ಸುತ್ತಮುತ್ತಲಿನ ಜನರು ಇದರ ಸದುಪಯೋಗ ಪಡೆಯಬೇಕು ಎಂದರು.ಆಸ್ಪತ್ರೆಯ ಮಕ್ಕಳ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಂ.ಎಂ.ಪಾಟೀಲ ಮಾತನಾಡಿ, ನಮ್ಮ ಆಸ್ಪತ್ರೆಯಲ್ಲಿ ನವಜಾತ ಶಿಶುವಿನಿಂದ ಹಿಡಿದು ಎಲ್ಲ ವಯೋಮಾನದ ಮಕ್ಕಳಿಗೆ ನುರಿತ ವೈದ್ಯರು ಅತ್ಯುತ್ತಮ ನೀಡುತ್ತಿದ್ದಾರೆ. ಹೀಗಾಗಿ ಪೋಷಕರು ತಮ್ಮ ಮಕ್ಕಳಿಗೆ ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಈಗ ಮೂರು ಮಕ್ಕಳಿಗ ಚಿಕಿತ್ಸೆ ನೀಡಲಾಗಿರುವ ಡಾ.ಶ್ರೀನಿವಾಸ ಎಲ್. ಅವರ ತಂಡದಲ್ಲಿ ಡಾ. ಸಂಜೀವ ಸಜ್ಜನರ, ಡಾ. ವಿಜಯಕುಮಾರ ಕಲ್ಯಾಣಪಗೊಳ, ಡಾ. ಶಿವಾನಂದ, ಡಾ. ಸಂತೋಷ, ಡಾ. ಹಿದಾಯತ್ ಬಿಜಾಪುರೆ, ಡಾ. ಜೆ. ಪ್ರಕಾಶ, ವೀರೇಶ ಹಿರೇಮಠ ಚಿಕಿತ್ಸೆಯಲ್ಲಿ ಪಾಲ್ಗೋಂಡಿದ್ದರು ಎಂದು ಅವರು ತಿಳಿಸಿದರು.ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಎಸ್.ಮುಧೋಳ ಮಾತನಾಡಿ, ಹೃದಯಾಘಾತವಾದಾಗ ಅದನ್ನು ತಕ್ಷಣ ಗುರುತಿಸಿ ಸೂಕ್ತ ಚಿಕಿತ್ಸೆ ನೀಡುವುದು ಮುಖ್ಯವಾಗಿದೆ. 

ಇಂದು ಅತ್ಯಾಧುನಿಕ ತಂತ್ರಜ್ಞಾನದಿಂದಾಗಿ ಇದನ್ನು ಬೇಗ ಪತ್ತೆ ಮಾಡಬಹುದಾಗಿದೆ. ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಅತ್ಯಾಧುನಿಕ ಮತ್ತು ವಿಶ್ವದರ್ಜೆಯ ಮೂಲಸೌಕರ್ಯಗಳು ಲಭ್ಯವಿವೆ. ಈಗ ಚಿಕಿತ್ಸೆ ನೀಡಲಾಗಿರುವ ಮೂರು ಜನ ಮಕ್ಕಳಿಗೆ ಇಂಥ ಆಧುನಿಕ ಸೌಲಭ್ಯ ನೀಡಿ ಚಿಕಿತ್ಸೆ ಕೊಡಲಾಗಿದೆ. ಕಳೆದ ಕೆಲವು ತಿಂಗಳಲ್ಲಿ ಆಸ್ಪತ್ರೆಯಲ್ಲಿ ಸುಮಾರು 18 ಮಕ್ಕಳ ಹೃದಯಶಸ್ತ್ರ ಚಿಕಿತ್ಸೆಗಳು ಯಶಸ್ವಿಯಾಗಿವೆ. 

ಈ ಎಲ್ಲ ಮಕ್ಕಳಿಗೆ ಆರೋಗ್ಯ ವಿಮೆ ಯೋಜನೆ AB-Ark ಅಡಿಯಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಾಗಿದೆ. ವಿವಿಯ ಕುಲಾಧಿಪತಿ ಎಂ. ಬಿ. ಪಾಟೀಲ ಅವರ ದೂರದೃಷ್ಟಿಯ ಫಲವಾಗಿ ಈ ಎಲ್ಲ ಸೇವೆಗಳು ಆಸ್ಪತ್ರೆಯಲ್ಲಿ ಲಭ್ಯವಿವೆ. ಮಕ್ಕಳ ಆರೋಗ್ಯ ಸೇವೆಗಳ ಮಾಹಿತಿಗೆ ಹಾಗೂ ಮಕ್ಕಳ ಹೃದಯ ಚಿಕಿತ್ಸಾ ಸೇವೆಗಳ ಬಗ್ಗೆ ತಿಳಿಯಲು, ಮಕ್ಕಳ ವೈದ್ಯಕೀಯ ಆಪ್ತಸಮಾಲೋಚಕರು (ಮಕ್ಕಳಶಾಸ್ತ್ರ ಹೊರರೋಗಿ ವಿಭಾಗ) ಮೊಬೈಲ್ ಸಂಖ್ಯೆ 6366786002 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

Share this article