ಹುಬ್ಬಳ್ಳಿ:
ಇಲ್ಲಿನ ಗೋಕುಲ ಗ್ರಾಮದ ಶ್ರೀಗುರು ಗೋರಕ್ಷನಾಥ ಕನ್ನಡ ಪ್ರಾಥಮಿಕ, ಪ್ರೌಢಶಾಲೆ ಮಕ್ಕಳಿಗೆ ಮಜೇಥಿಯಾ ಫೌಂಡೇಷನ್‌ನಿಂದ ಉಚಿತ ಸಮವಸ್ತ್ರ ಹಾಗೂ ಸಿಹಿ ವಿತರಿಸಲಾಯಿತು.ಮಕ್ಕಳ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಈ ಸಮಾರಂಭದಲ್ಲಿ ಶಾಲೆಯ 450 ಮಕ್ಕಳಿಗೆ ಟ್ರ್ಯಾಕ್ ಪ್ಯಾಂಟ್, ಟಿ-ಶರ್ಟ್, ಟೋಪಿ, ಸಾಕ್ಸ್ ಹಾಗೂ ಸಿಹಿ ವಿತರಿಸಲಾಯಿತು.ಫೌಂಡೇಶನ್ ಚೇರಮನ್, ರಾಜ್ಯ ಹಿರಿಯ ನಾಗರಿಕರ ಪ್ರಶಸ್ತಿ ವಿಜೇತ ಜಿತೇಂದ್ರ ಮಜೇಥಿಯಾ ಮಾತನಾಡಿ, ಮಕ್ಕಳ ಆಸಕ್ತಿಗೆ ತಕ್ಕಂತೆ ಅವರನ್ನು ಪ್ರೋತ್ಸಾಹಿಸಬೇಕು. ಇದರಿಂದ ಅವರ ಭವಿಷ್ಯದಲ್ಲಿ ಉತ್ತುಂಗಕ್ಕೆ ಏರಲು ಸಾಧ್ಯ ಎಂದರು.
ರಾಜ್ಯದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿವೆ. ಅಂಥ ಶಾಲೆಗಳಿಗೆ ಉದ್ದಿಮೆದಾರರು ಕೈ ಜೋಡಿಸಿದರೆ ಮಕ್ಕಳ ಭವಿಷ್ಯ ಇನ್ನಷ್ಟು ಉಜ್ವಲವಾಗಲು ಸಾಧ್ಯ. ಮಜೇಥಿಯಾ ಫೌಂಡೇಶನ್ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಸೇವೆ ಸಲ್ಲಿಸುತ್ತಿದೆ ಎಂದು ಹೇಳಿದರು.ಅತಿಥಿಯಾಗಿದ್ದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಗೀತಾ ಹೂಗಾರ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಸರ್ಕಾರದ ಸವಲತ್ತು ಉಪಯೋಗಿಸಿಕೊಂಡು, ದಾನಿಗಳಿಂದ ಸಹಕಾರ ಪಡೆದುಕೊಂಡು ವಿದ್ಯಾರ್ಥಿಗಳ ಶಿಕ್ಷಣ ಮಟ್ಟ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಿ.ಪಿ. ಮಧೂರಕರ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ಶಿವಾಜಿ ಮಧೂರಕರ ಮಾತನಾಡಿ, ನಿರಂತರ 42 ವರ್ಷಗಳಿಂದ ಬಡ ವಿದ್ಯಾರ್ಥಿಗಳಿಗಾಗಿ ಶಿಕ್ಷಣ, ವಸತಿ, ಆರೋಗ್ಯ ಸೇವೆ ಸಲ್ಲಿಸುತ್ತಾ ಬರುತ್ತಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಮಾನವೀಯ ಮೌಲ್ಯದ ಶಿಕ್ಷಣ ಕೂಡ ನೀಡಲಾಗುತ್ತಿದೆ ಎಂದರು.ಉದ್ದಿಮೆದಾರರಾದ ಪ್ರಕಾಶ ಸರಾಫ್, ಸಂಜು ಮೋನೆ, ರಮೇಶ ಮಧೂರಕರ, ಮೆಜೇಥಿಯಾ ಫೌಂಡೇಶನ್ ಕಾರ್ಯದರ್ಶಿ ಅಮರೇಶ ಹಿಪ್ಪರಗಿ, ಫೌಂಡೇಶನ್ ಸಿಇಒ ಡಾ. ಸುನೀಲ ಕೂಕ್ಕನೂರ, ಬಾಲಕೃಷ್ಣ ಸರಾಫ್, ರೋಹನ ಗೊಂದಕರ ಸೇರಿದಂತೆ ಹಲವರಿದ್ದರು.
ವೈ.ಬಿ. ಹುಲ್ಯಾಳ, ಕೆ.ಎನ್. ಕಾತೇನವರ ಸ್ವಾಗತಿಸಿದರು. ವಿ.ಪಿ. ಜೋಗಾರ ಕಾರ್ಯಕ್ರಮ ನಿರೂಪಿಸಿದರು. ಬಿ.ಎಸ್. ಹಿರೇಮಠ ವಂದಿಸಿದರು.