ಕನ್ನಡಪ್ರಭ ವಾರ್ತೆ ಹಾಸನ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ವಿದ್ಯಾರ್ಥಿ ಸಂಘ ಕರ್ನಾಟಕ, ಹಾಸನ ಜಿಲ್ಲಾ ಘಟಕದ ವತಿಯಿಂದ ಆಗಸ್ಟ್ ೭ರಂದು ಶುಕ್ರವಾರ ಬೆಳಿಗ್ಗೆ ೧೦.೩೦ಕ್ಕೆ ನಗರದ ಹಾಸನಾಂಬಾ ಕಲಾಕ್ಷೇತ್ರದಲ್ಲಿ "ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಹೇಗೆ? " ಎಂಬ ವಿಷಯದ ಕುರಿತು ಒಂದು ದಿನದ ಉಚಿತ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಾವಿರಾರು ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಐಎಎಸ್, ಕೆಎಎಸ್, ಐಪಿಎಸ್, ಪಿಎಸ್‌ಐ, ಎಸ್‌ಡಿಎ, ಎಫ್‌ಡಿಎ, ಪಿಡಿಒ, ಗ್ರಾಮ ಆಡಳಿತಾಧಿಕಾರಿ, ಕಂದಾಯ ನಿರೀಕ್ಷಕ ಸೇರಿದಂತೆ ವಿವಿಧ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಈ ಕಾರ್ಯಾಗಾರ ಅತ್ಯಂತ ಉಪಯುಕ್ತವಾಗಲಿದೆ ಎಂದರು. ಇತ್ತೀಚಿನ ದಿನಗಳಲ್ಲಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ನಿರಂತರವಾಗಿ ಅಧ್ಯಯನ ನಡೆಸಿದರೂ ಸರಿಯಾದ ಮಾರ್ಗದರ್ಶನದ ಕೊರತೆ, ಪರೀಕ್ಷೆಯ ಸ್ವರೂಪದ ಬಗ್ಗೆ ಸಮಗ್ರ ಅರಿವಿಲ್ಲದಿರುವುದು, ಸಮಯ ನಿರ್ವಹಣೆಯ ವೈಫಲ್ಯ ಹಾಗೂ ಯೋಜಿತ ಅಧ್ಯಯನದ ಅಭಾವದಿಂದ ಯಶಸ್ಸು ಸಾಧಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಈ ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಸಿಲೆಬಸ್ ಅರ್ಥೈಸಿಕೊಳ್ಳುವ ವಿಧಾನ, ವಿಷಯವಾರು ಅಧ್ಯಯನ ತಂತ್ರ, ದಿನನಿತ್ಯದ ಓದುವ ವೇಳಾಪಟ್ಟಿ ರೂಪಿಸುವುದು, ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆಗಳ ತಯಾರಿ, ಸಂದರ್ಶನದ ಹಂತದವರೆಗೆ ಅನುಸರಿಸಬೇಕಾದ ಕ್ರಮಗಳು, ಪರೀಕ್ಷಾ ಭಯವನ್ನು ನಿವಾರಿಸಿಕೊಳ್ಳುವ ಮನೋವೈಜ್ಞಾನಿಕ ವಿಧಾನಗಳು, ಉತ್ತರ ಬರೆಯುವ ಕೌಶಲ್ಯ, ಮಾದರಿ ಪ್ರಶ್ನೆಪತ್ರಿಕೆಗಳ ವಿಶ್ಲೇಷಣೆ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಸಮಗ್ರ ಮಾಹಿತಿ ನೀಡಲಾಗುತ್ತದೆ ಎಂದು ವಿವರಿಸಿದರು. ಇದರ ಜೊತೆಗೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ನೀಡುವ ವಿದ್ಯಾರ್ಥಿವೇತನ, ಪ್ರೋತ್ಸಾಹಧನ, ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಲು ದೊರೆಯುವ ನೆರವು, ವಿವಿಧ ಕೋರ್ಸ್‌ಗಳ ಆಯ್ಕೆ ಹಾಗೂ ಉದ್ಯೋಗಾವಕಾಶಗಳ ಕುರಿತು ತಜ್ಞರು ಮಾಹಿತಿ ನೀಡಲಿದ್ದಾರೆ. ಕಾರ್ಯಾಗಾರದಲ್ಲಿ ಬೆಂಗಳೂರಿನ ಅಕ್ಕ ಐಎಎಸ್ ಅಕಾಡೆಮಿಯ ಸಂಸ್ಥಾಪಕರು ಹಾಗೂ ಕನ್ನಡ ಐಚ್ಛಿಕ ವಿಷಯದ ದೇಶದ ಖ್ಯಾತ ತರಬೇತುದಾರರಾದ ಡಾ. ಶಿವಕುಮಾರ್ ಮುಖ್ಯ ಮಾರ್ಗದರ್ಶಕರಾಗಿ ಭಾಗವಹಿಸಿ, ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ವಿದ್ಯಾರ್ಥಿಗಳ ಸಂದೇಹಗಳಿಗೆ ಉತ್ತರ ನೀಡಿ ಯಶಸ್ಸಿನ ಸೂತ್ರಗಳನ್ನು ಹಂಚಿಕೊಳ್ಳಲಿದ್ದಾರೆ. ಜೊತೆಗೆ ವಿವಿಧ ಕ್ಷೇತ್ರಗಳ ಹಿರಿಯ ಅಧಿಕಾರಿಗಳು ಹಾಗೂ ಶಿಕ್ಷಣ ತಜ್ಞರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಸನ ಜಿಲ್ಲಾಧಿಕಾರಿ ಕೆ. ಎಸ್. ಲತಾ ಕುಮಾರಿ ವಹಿಸಲಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತ ಅವರು ಸಂವಿಧಾನದ ಪೀಠಿಕೆ ವಾಚನ ಹಾಗೂ ಹಿತನುಡಿ ನೀಡಲಿದ್ದಾರೆ. ನಿವೃತ್ತ ಪ್ರಾಂಶುಪಾಲರಾದ ಡಾ. ಅತ್ನಿ ಕೃಷ್ಣಯ್ಯ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ದೂದ್‌ಫಿರ್, ವಾಣಿಜ್ಯ ತೆರಿಗೆ ಇಲಾಖೆಯ ಡೆಪ್ಯುಟಿ ಕಮಿಷನರ್ ಎನ್.ಆರ್. ಜಯರಾಮ್ (ಕೆಎಎಸ್), ಸಹಾಯಕ ಆಯುಕ್ತ ಚನ್ನಕೇಶವ (ಕೆಎಎಸ್), ಪ್ರಾಧ್ಯಾಪಕ ಪ್ರೊ. ಲಕ್ಷಣ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಭರತನಾಟ್ಯ ಕಲಾವಿದೆ ಕಾನ್ನಿ ಕೆ. ರಾವ್ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ರಾಮು ನರಸೀಕುಪ್ಪೆ ಸ್ವಾಗತ, ಮಂಜು ದೊಡ್ಡಬಾಗನಹಳ್ಳಿ ಪ್ರಾರ್ಥನೆ ಹಾಗೂ ಯೋಗೇಶ್ ಸಕಲೇಶಪುರ ವಂದನಾರ್ಪಣೆ ನೆರವೇರಿಸಲಿದ್ದಾರೆ. ಜಿಲ್ಲೆಯಲ್ಲಿನ ಕಾಲೇಜು ವಿದ್ಯಾರ್ಥಿಗಳು, ಪದವೀಧರರು, ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳು ಹಾಗೂ ಪೋಷಕರು ಈ ಉಚಿತ ಕಾರ್ಯಾಗಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಜ್ಞರ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕು ಎಂದು ಡಾ. ಶಶಿಧರ್ ಮೌರ್ಯ ಮನವಿ ಮಾಡಿದರು. ಹೆಚ್ಚಿನ ಮಾಹಿತಿಗಾಗಿ: ೯೯೭೨೬ ೯೮೧೯೨ ಸಂಪರ್ಕಿಸಬಹುದಾಗಿದೆ.