ದುಶ್ಚಟದಿಂದ ಮುಕ್ತರಾಗಿ ಹೊಸಬದುಕು ಕಟ್ಟಿಕೊಳ್ಳಿ: ಶಾಸಕ ಪ್ರಕಾಶ ಕೋಳಿವಾಡ

KannadaprabhaNewsNetwork |  
Published : Jun 16, 2025, 12:55 AM IST
ರಾಣಿಬೆನ್ನೂರು ತಾಲೂಕಿನ ಗಂಗಾಪುರ ಗ್ರಾಮದ ಸಿದ್ಧಾರೂಢ ಆಶ್ರಮದಲ್ಲಿ ನಡೆದ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿದರು. | Kannada Prabha

ಸಾರಾಂಶ

ಶಿಬಿರದಲ್ಲಿ 46 ಶಿಬಿರಾರ್ಥಿಗಳು ಒಂದು ವಾರದಲ್ಲಿಯೇ ಪರಿವರ್ತನೆಗೊಂಡು ಕುಡಿತದಿಂದ ಮುಕ್ತರಾಗಿರುವುದು ಹೆಮ್ಮೆಯ ಸಂಗತಿ.

ರಾಣಿಬೆನ್ನೂರು: ಕುಡಿತದ ಚಟದಿಂದಲೇ ಸುಂದರವಾದ ಕುಟುಂಬಗಳು ಹೆಚ್ಚಾಗಿ ಹಾಳಾಗಿವೆ. ಇಂತಹ ಕುಡಿತವನ್ನು ಬಿಡಿಸಲು ಶ್ರಮಿಸುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಶಾಸಕ ಪ್ರಕಾಶ ಕೋಳಿವಾಡ ತಿಳಿಸಿದರು.ತಾಲೂಕಿನ ಗಂಗಾಪುರ ಗ್ರಾಮದ ಸಿದ್ಧಾರೂಢ ಆಶ್ರಮದಲ್ಲಿ ಭಾನುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸ್ಥಳೀಯ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಹಾವೇರಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಆಶ್ರಯದಲ್ಲಿ ಏರ್ಪಡಿಸಿದ್ದ 1933ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಈ ಶಿಬಿರದಲ್ಲಿ 46 ಶಿಬಿರಾರ್ಥಿಗಳು ಒಂದು ವಾರದಲ್ಲಿಯೇ ಪರಿವರ್ತನೆಗೊಂಡು ಕುಡಿತದಿಂದ ಮುಕ್ತರಾಗಿರುವುದು ಹೆಮ್ಮೆಯ ಸಂಗತಿ. ಮನಸ್ಸು ಮತ್ತು ಮೆದಳನ್ನು ಸ್ಥಿಮಿತವಾಗಿಟ್ಟುಕೊಂಡು ದುಶ್ಚಟಗಳಿಂದ ಮುಕ್ತರಾಗಿ ಹೊಸಬದುಕು ಕಟ್ಟಿಕೊಳ್ಳುವಂತೆ ಸಲಹೆ ನೀಡಿದರು. ಇಂದಿನ ಯುವಕರು ಡ್ರಗ್ಸ್ ಗಾಂಜಾದಂತಹ ದುಶ್ಚಟಗಳಿಗೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಅಲ್ಲದೆ ಗ್ರಾಮೀಣ ಭಾಗಗಳಿಗೂ ಡ್ರಗ್ಸ್ ಹಾಗೂ ಗಾಂಜಾ ಸೇವನೆ ಕಂಡು ಬರುತ್ತಿರುವುದು ವಿಷಾದದ ಸಂಗತಿಯಾಗಿದೆ. ಇದನ್ನು ತಡೆಗಟ್ಟಲು ಯುವಕರಿಗೆ ಗ್ರಾಮೀಣ ಭಾಗದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಶಿಬಿರವನ್ನು ಆಯೋಜಿಸಬೇಕು. ಅವರ ಜತೆಗೆ ಸರ್ವರೂ ಕೈ ಜೋಡಿಸಬೇಕೆಂದು ಮನವಿ ಮಾಡಿದರು.ಧಾರವಾಡ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕಿ ದಯಾಶೀಲಾ ಮಾತನಾಡಿ, ಸಮಾಜದಲ್ಲಿ ಯಾರೂ ಹುಟ್ಟಿನಿಂದ ಕೆಟ್ಟವರಾಗಿರಲ್ಲ. ಬೆಳೆಯುತ್ತಾ ಹೋದಂತೆ ಕೆಲವರು ಕೆಟ್ಟವರಾಗುತ್ತಾರೆ. ಆದ್ದರಿಂದ ನಾವು ಮಾಡುವ ಸಹವಾಸ ಸಜ್ಜನರ ಸಹವಾಸವಾಗಿರಬೇಕು ಎಂದರು.ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯ ಸಂಘಟನಾ ಅಧ್ಯಕ್ಷ ನಟರಾಜ ಬದಾಮಿ ಮಾತನಾಡಿ, ಕುಡುಕರ ವರ್ಗವನ್ನು ಮದ್ಯವ್ಯಸನದಿಂದ ಮುಕ್ತರನ್ನಾಗಿಸಿ ಅವರನ್ನು ಮುಖ್ಯವಾಹಿನಿಗೆ ತರಬೇಕು ಎಂಬುದು ವೀರೇಂದ್ರ ಹೆಗ್ಗಡೆಯವರ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ 1.50 ಲಕ್ಷ ಕುಟುಂಬಗಳ ಸದಸ್ಯರು ಮದ್ಯಪಾನದಿಂದ ಮುಕ್ತರಾಗಿ ಸ್ವಾಸ್ಥ್ಯ ಸಮಾಜದಲ್ಲಿ ಬದುಕುತ್ತಿದ್ದಾರೆ ಎಂದರು.ಮಾಜಿ ಶಾಸಕ ಅರುಣಕುಮಾರ ಪೂಜಾರ, ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ್ ಕುರಿತು ಮಾತನಾಡಿದರು. ಸಿದ್ಧಾರೂಢ ಮಠದ ಮರುಳ ಶಂಕರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಯೋಜನೆಯ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು, ಯೋಜನಾಧಿಕಾರಿ ಮಂಜುನಾಥ ಎಂ.ಪಿ., ಧಾರವಾಡ ಜನಜಾಗೃತಿ ವೇದಿಕೆ ಯೋಜನಾಧಿಕಾರಿ ಭಾಸ್ಕರ್ ಎನ್., ಡಾ. ಹರೀಶ, ಶಿಬಿರಾಧಿಕಾರಿ ಕುಮಾರ ಟಿ., ಬೆಳ್ತಂಗಡಿ ಜನಜಾಗೃತಿ ವೇದಿಕೆಯ ಪ್ರೆಸಿಲ್ಲಾ ಡಿಸೋಜ, ವೇದಿಕೆಯ ಸದಸ್ಯೆ ಶಿಲ್ಪಕಲಾ, ಉಮೇಶ ಹಡಗಲಿ, ಮುತ್ತಣ್ಣ ಯಲಿಗಾರ, ಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ, ಶಿಬಿರದ ಅಧ್ಯಕ್ಷ ಸೋಮಪ್ಪ ಚಿಕ್ಕಳ್ಳವರ, ಸುರೇಂದ್ರ ಜ್ಯೋತಿ, ಹಾಲಪ್ಪ ಲಮಾಣಿ, ಪರಮೇಶಪ್ಪ ನೀಲಮ್ಮನವರ, ಕರಿಯಪ್ಪ ನಾನಪುರ, ಬಸವರಾಜ ಹುಲ್ಲತ್ತಿ, ಅಶೋಕಪ್ಪ ಬಣಕಾರ, ವಿಶ್ವನಾಥ ಶೆಟ್ಟರ, ಕಲ್ಯಾಣಕುಮಾರ ಸೇರಿದಂತೆ ಯೋಜನೆಯ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು, ಶಿಬಿರಾರ್ಥಿಗಳು, ವ್ಹಿಎಲ್‌ಎಗಳು, ಗ್ರಾಮಾಭಿವೃದ್ಧಿ ಯೋಜನೆಯು ಸಿಬ್ಬಂದಿ ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ