ಮುಂಡರಗಿ: ಸ್ವಾತಂತ್ರ್ಯ ಎಂದರೆ ಕೇವಲ ಬ್ರಿಟೀಷರ ಆಡಳಿತದಿಂದ ಮುಕ್ತಿಯಲ್ಲ, ಸ್ವಾತಂತ್ರ್ಯ ಎಂದರೆ ಜವಾಬ್ದಾರಿಯೂ ಹೌದು. ಈ ಪವಿತ್ರ ದಿನದಂದು ಭಾರತೀಯರಾದ ನಮ್ಮನ್ನು ರಾಷ್ಟ್ರದ ಪ್ರಗತಿಗಾಗಿ, ಉನ್ನತಿಗಾಗಿ, ಸಮಾಜದ ಎಲ್ಲ ಜನರ ಏಳಿಗೆಗಾಗಿ, ದೇಶದ ಐಕ್ಯತೆ ಮತ್ತು ಅಖಂಡತೆಗಾಗಿ ಪುನರ್ ಸಮರ್ಪಿಸಿಕೊಳ್ಳಬೇಕಾದ ದಿನ ಎಂದು ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಹೇಳಿದರು.
ಮುಂಡರಗಿ ಒಂದು ಕಡೆ ತುಂಗಭದ್ರೆ ಮತ್ತೊಂದು ಕಡೆ ಕಪ್ಪತ್ತಗುಡ್ಡದಂಥ ನೈಸರ್ಗಿಕ ಸಂಪತ್ತನ್ನು ಹೊಂದಿದೆ. ಸ್ವಾತಂತ್ರ್ಯ ಹೋರಾಟಗಾರ ಮುಂಡರಗಿಯ ಭೀಮರಾಯರು ಜನಿಸಿದ ಪುಣ್ಯಭೂಮಿ. ಅನೇಕ ಮಠ, ದೇವಸ್ಥಾನಗಳನ್ನು ಹೊಂದಿರುವ ನಾಡು. ಸ್ಥಳೀಯ ನೀರಾವರಿ ಯೋಜನೆಗಳನ್ನು ಹಾಗೂ ಕೃಷಿಯಲ್ಲಿ ತಾಂತ್ರಿಕತೆಯನ್ನು ಅಳವಡಿಸಿಕೊಂಡು ತೋಟಗಾರಿಕೆಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಿರುವ ಕಾರಣದಿಂದಾಗಿ ಸರ್ಕಾರ ಡಂಬಳ ಹೋಬಳಿಯಯಲ್ಲಿ ತೋಟಗಾರಿಕಾ ವಿಶ್ವವಿದ್ಯಾಲಯ ಸ್ಥಾಪಿಸಲು ತೀರ್ಮಾನಿಸಿರುವುದು ನಮ್ಮೆಲ್ಲರ ಹೆಮ್ಮೆ ಎಂದರು.
ಡಾ. ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಸುಲಭವಾಗಿ ಸಿಕ್ಕಿದ್ದಲ್ಲ. ಅನೇಕ ಮಹನೀಯರ ನಿರಂತರ ಹೋರಾಟ, ತ್ಯಾಗ ಮತ್ತು ಬಲಿದಾನಗಳ ಫಲವಾಗಿ 1947ರ ಆ. 14ರ ಮಧ್ಯರಾತ್ರಿ ಸ್ವಾತಂತ್ರ್ಯ ದೊರೆಯಿತು. ಸಂವಿಧಾನ ಕೇವಲ ಹಕ್ಕುಗಳನ್ನು ಮಾತ್ರ ನೀಡಿಲ್ಲ. ಜತೆಗೆ ಕರ್ತವ್ಯಗಳನ್ನೂ ನೆನಪಿಸಿದೆ ಎಂದರು.ಕಾರ್ಯಕ್ರಮದಲ್ಲಿ ತಾಪಂ ಇಒ ವಿಜಯಕುಮಾರ ಬೆಣ್ಣಿ, ಸಿಪಿಐ ಅಯ್ಯನಗೌಡ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಶಂಕರ್ ಹುಲ್ಲಮ್ಮನವರ, ಕಪ್ಪತ್ ಹಿಲ್ಸ್ ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಲಮನಿ, ತಾಲೂಕು ಪಂಚ ಗ್ಯಾರಂಟಿ ಸಮೀತಿ ಅಧ್ಯಕ್ಷ ಡಿ.ಡಿ. ಮೋರನಾಳ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಳ, ಪಿಡಬ್ಲ್ಯುಡಿ ನಾಗೇಂದ್ರ ಪಟ್ಟಣಶೆಟ್ಟಿ, ಜ.ಅ. ವಿದ್ಯಾ ಸಮೀತಿ ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ, ನೌಕರರ ಸಂಘದ ಅಧ್ಯಕ್ಷ ನಾಗರಾಜ ಹಳ್ಳಿಕೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಬಿಇಒ ಗಂಗಾಧರ ಅಣ್ಣಿಗೇರಿ ಸ್ವಾಗತಿಸಿ, ಹನುಮರಡ್ಡಿ ಇಟಗಿ, ಸೌಮ್ಯ ಶಿರಬಡಗಿ ನಿರೂಪಿಸಿ, ವಿ.ಎಚ್. ಹೊಳೆಯಮ್ಮನವರ ವಂದಿಸಿದರು.