ಮಹಾತ್ಮ ಗಾಂಧೀಜಿ ಮೇರು ವ್ಯಕ್ತಿತ್ವದ ಶ್ರೇಷ್ಠ ವ್ಯಕ್ತಿ: ಜಿಲ್ಲಾ ಉಸ್ತುವಾರಿ ಸಚಿವರು ಶರಣಬಸಪ್ಪ ದರ್ಶನಾಪುರ
ಮಹಾತ್ಮ ಗಾಂಧೀಜಿ ಮೇರು ವ್ಯಕ್ತಿತ್ವದ ಶ್ರೇಷ್ಠ ವ್ಯಕ್ತಿ: ಜಿಲ್ಲಾ ಉಸ್ತುವಾರಿ ಸಚಿವರು ಶರಣಬಸಪ್ಪ ದರ್ಶನಾಪುರ ಕನ್ನಡಪ್ರಭ ವಾರ್ತೆ ಯಾದಗಿರಿ ಗಾಂಧೀಜಿಯವರ ಶಾಂತಿ, ಅಹಿಂಸೆ, ಸತ್ಯಾಗ್ರಹಗಳಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕಿತು ಎಂದು ರಾಜ್ಯ ಸಣ್ಣ ಕೈಗಾರಿಕೆಗಳ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 154ನೇ ಜಯಂತಿ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಏರ್ಪಡಿಸಿದ್ದ ರಾಷ್ಟ್ರಪಿತ ಗಾಂಧಿ ಜಯಂತಿ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಮತ್ತು ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ: 2023-24 ಪ್ರಶಸ್ತಿ ವಿತರಣಾ ಕಾರ್ಯಕ್ರಮ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಹಮ್ಮಿಕೊಂಡ ಯಾದಗಿರಿ ಜಿಲ್ಲಾ ಮಟ್ಟದ ದಸರಾ ಸಿ.ಎಂ. ಕಪ್ ಕ್ರೀಡಾಕೂಟ 2023-24 ಉದ್ಘಾಟಿಸಿ ಅವರು ಮಾತನಾಡಿದರು. ಸತ್ಯ, ಅಹಿಂಸೆ, ಶಾಂತಿ ಮೂಲಕ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ, ಗ್ರಾಮೀಣಾಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂಬ ತತ್ವವನ್ನು ಸಾರಿ ಭಾರತ ಉನ್ನತಿಗೆ ಕಾರಣೀಕರ್ತರಾದ ದೇಶದ ಹೆಮ್ಮೆಯ, ಮೇರು ವ್ಯಕ್ತಿತ್ವದ ಶ್ರೇಷ್ಠ ವ್ಯಕ್ತಿ ಮಹಾತ್ಮ ಗಾಂಧೀಜಿ ಎಂದರು. ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯದ ನಂತರ ಗಾಂಧೀಜಿ ಅವರು ಅನುಸರಿಸಿದ ಆದರ್ಶತತ್ವಗಳು ಹಾಗೂ ಅವರು ನಡೆದು ಬಂದ ದಾರಿ ನಮಗೆ ಪ್ರೇರಣೆಯಾಗಿದೆ. ಅವರ ದಾರಿಯಲ್ಲಿ ಯುವ ಪೀಳಿಗೆ ನಡೆಯಬೇಕಿದೆ ಎಂದು ಅವರು ತಿಳಿಸಿದರು. ಸ್ವಾತಂತ್ರ್ಯ ನಂತರದಲ್ಲಿ ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು ಅವರ ಕಾಳಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳ ಗಂಭೀರ ಸ್ಥಿತಿ ಅರಿತು, ಜೈ ಜವಾನ್, ಜೈ ಕಿಸಾನ್ ಎಂಬ ವಾಕ್ಯದೊಂದಿಗೆ ಕೃಷಿ ಮತ್ತು ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸಿ ದೇಶದ ಮುನ್ನಡಿಗೆ ಹೆಸರಾದರು ಎಂದರು. ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿ ಮಾತನಾಡಿದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಅನಕ್ಷರತೆ, ಬಡತನ, ಜಾತಿ ಧರ್ಮಗಳ ಕಲಹ ಮತ್ತು ನೂರಾರು ಸಂಸ್ಥಾನಗಳಾಗಿ ವಿಂಗಡಣೆಯಾಗಿದ್ದ ಭಾರತವನ್ನು ಮಹಾತ್ಮ ಗಾಂಧೀಜಿ ಮತ್ತು ಕೋಟ್ಯಂತರ ಹೋರಾಟಗಾರರ ಪರಿಶ್ರಮದಿಂದ ನಮಗೆ ಸ್ವಾತಂತ್ರ್ಯ ಬಂದು ಇಂದು ನಾವು ನೆಮ್ಮದಿಯ ಜೊತೆಗೆ ಹೆಮ್ಮೆಯಿಂದ ಜೀವನ ನಡೆಸಲು ಅವಕಾಶ ಸಿಕ್ಕಿದೆ ಎಂದರು. ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಯಾದಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊಫೆಸರ್ ದೇವೇಂದ್ರಪ್ಪ ಹಳಿಮನಿ ಅವರು , ಶ್ರೀಮಂತ ಮನೆತನದಲ್ಲಿ ಜನಿಸಿ, ಸರಳ ಜೀವನ ಮೈಗೂಡಿಸಿಕೊಂಡು ದೇಶಕ್ಕೆ ಸ್ವಾತಂತ್ರ್ಯ ತಂದು, ಅಸ್ಪೃಶ್ಯತೆ ತೊಲಗಬೇಕು, ಮದ್ಯಪಾನ ವಿರೋಧಿ ಚಳುವಳಿ, ಮಹಿಳಾ ಸಬಲೀಕರಣಕ್ಕೆ ಒತ್ತು , ಗ್ರಾಮೀಣಾಭಿವೃದ್ಧಿ ಮತ್ತು ಗುಡಿ ಕೈಗಾರಿಕೆಗಳ ಉದಯಕ್ಕೆ ಜನರಲ್ಲಿ ಜಾಗೃತಿ ಮೂಡಿಸಿದವರು ಗಾಂಧೀಜಿ ಎಂದರು. ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ಯಾದಗಿರಿ ಜಿಲ್ಲಾ ಮಟ್ಟದಲ್ಲಿ ಏರ್ಪಡಿಸಲಾಗಿದ್ದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿ ಗಳಿಗೆ ಪ್ರಮಾಣ ಪತ್ರ ಹಾಗೂ ನಗದು ಬಹುಮಾನ ವಿತರಿಸಿದರು. ಪ್ರೌಢಶಾಲೆ ವಿಭಾಗ, ಕಾಲೇಜು ವಿಭಾಗ ಹಾಗೂ ಪದವಿ ಮತ್ತು ಸ್ನಾತಕೋತ್ತರ ಪದವಿ ದಲ್ಲಿ ವಿಜೇತರಿಗೆ ಪ್ರಥಮ-ತಲಾ 3000, ದ್ವಿತೀಯ ತಲಾ 2000 ಹಾಗೂ ತೃತೀಯ ಸ್ಥಾನ ಪಡೆದವರಿಗೆ ತಲಾ 1000 ರು. ಹಾಗೂ ಪ್ರಮಾಣ ಪತ್ರ ನೀಡಲಾಯಿತು. ಸಚಿವರು ಈ ಸಂದರ್ಭದಲ್ಲಿ ಕ್ರೀಡಾ ಧ್ವಜಾರೋಹಣ ನೆರವೇರಿಸಿದೆ, ಕ್ರೀಡಾಪಟು ಗಳಿಂದ ಕ್ರೀಡಾಜ್ಯೋತಿ ಸ್ವೀಕರಿಸಿ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಚಂದ್ರಶೇಖರ್ ಗೋಗಿ ಹಾಗೂ ತಂಡದವರು ಗಾಂಧಿಪ್ರಿಯ ಗೀತೆ, ಭಜನೆ ಹಾಗೂ ಪ್ರಾರ್ಥಿಸಿದರು. ಗುರುಪ್ರಸಾದ್ ವೈದ್ಯ ನಿರೂಪಿಸಿ, ವಂದಿಸಿದರು. ಸರ್ವಧರ್ಮ ಪ್ರಾರ್ಥನೆ ಅಂಗವಾಗಿ ಹಿಂದೂ ಧರ್ಮಗುರು ಲಕ್ಷ್ಮಿಕಾಂತ್ ಆಚಾರ್ಯ, ಇಸ್ಲಾಂ ಧರ್ಮ ಗುರು ಮೌಲಾನಾ ಚಾಂದಪಾಷಾ, ಕ್ರಿಶ್ಚಿಯನ್ ಧರ್ಮಗುರು ಕೆ.ಜೆ. ಜೋಸೆಫ್, ಜೈನ್ ಗುರು ಸುರೇಶ ಜೈನ್, ಬೌದ್ಧ ಧರ್ಮ ಗುರು ಧಮ್ಮರಕ್ಕಿ ಪ್ರಾರ್ಥಿಸಿ ಸಕಲ ಜೀವಾತ್ಮಾದ ರಕ್ಷಣೆ, ದೇಶ, ನಾಗರಿಕರ ಉನ್ನತಿಗೆ ಪ್ರಾರ್ಥಿಸಿದರು. ಜಿಲ್ಲಾಧಿಕಾರಿಗಳಾದ ಸುಶೀಲಾ. ಬಿ, , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಗರಿಮಾ ಪನ್ವಾರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಅಪರ ಜಿಲ್ಲಾಧಿಕಾರಿಗಳಾದ ಶರಣಬಸಪ್ಪ ಕೋಟೆಪ್ಪಗೋಳ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಸುಲೈಮಾನ್. ಡಿ. ನದಾಫ್, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ರಾಜು ಬಾವಿಹಳ್ಳಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.