ಜಿಲ್ಲಾ ಆಟದ ಮೈದಾನದಲ್ಲಿ ಗಣ ರಾಜ್ಯೋತ್ಸವ । ಸಚಿವರಿಂದ ಧ್ವಜಾರೋಹಣ,
ನಮ್ಮ ದೇಶ ಸ್ವಾತಂತ್ರ್ಯ ಭಾರತ ಎಂದು ಹೆಮ್ಮೆ ಪಡಲು ಹಾಗೂ ಗಣ ರಾಜ್ಯವಾಗಿ ರೂಪುಗೊಳ್ಳಲು ಆಗಿರುವ ತ್ಯಾಗ, ಬಲಿದಾನ ಗಳಿಗೆ ಲೆಕ್ಕವೇ ಇಲ್ಲ. ನಮ್ಮ ಪೂರ್ವಜರು ನಮ್ಮ ಭವಿಷ್ಯಕ್ಕಾಗಿ ತಮ್ಮ ರಕ್ತ, ಬೆವರುಗಳನ್ನು ಹರಿಸಿ ಸ್ಥಾಪಿಸಿದ ನಮ್ಮ ನೆಲದಲ್ಲಿ ಭಾರತೀಯ ಪ್ರಜೆಗಳಾದ ನಾವು ಸ್ವಾತಂತ್ರ್ಯದ ಉಸಿರಿನೊಂದಿಗೆ ಶಾಂತಿ ಹಾಗೂ ಸೌಹಾರ್ದಯುತ ಬದುಕಿನ ಅನುಭವವನ್ನು ಪಡೆಯುತ್ತಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತ ಭಾನುವಾರ ಏರ್ಪಡಿಸಿದ್ದ ಗಣ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾ ರೋಹಣ ನೆರವೇರಿಸಿ ಮಾತನಾಡಿದ ಅವರು, ವಿವಿಧತೆಯಲ್ಲಿ ಏಕತೆ ಸಾರುವ ನಮ್ಮ ದೇಶದ ಸಂಸ್ಕೃತಿಯನ್ನು ಕಾಪಾಡು ವುದು ಮತ್ತು ಈ ದೇಶದ ನೆಲ, ಜಲ, ಹಾಗೂ ನೈಸರ್ಗಿಕ ಸಂಪತ್ತನ್ನು ಕಾಪಾಡುವ ನಿಟ್ಟಿನಲ್ಲಿ ನಮ್ಮ ರಾಷ್ಟ್ರಕ್ಕೆ ಪ್ರಬಲವಾದ ಕಾನೂನು ವ್ಯವಸ್ಥೆ ಅಗತ್ಯತೆ ಸ್ವಾತಂತ್ರ್ಯ ನಂತರದಲ್ಲಿ ಸೃಷ್ಟಿಯಾಗಿತ್ತು ಎಂದರು.ನಮ್ಮ ದೇಶದ ನಾಗರಿಕರಿಗೆ "ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು " ಕಲ್ಪಿಸಲು ಪ್ರಬಲವಾದ ಲಿಖಿತ ಸಂವಿಧಾನದ ಅವಶ್ಯಕತೆ ಮನಗಂಡು ಸ್ವಾತಂತ್ರ್ಯ ನಂತರದಲ್ಲಿ ದೇಶದ ಮೊದಲ ಪ್ರಧಾನಿಯಾಗಿದ್ದ ಪಂಡಿತ್ ಜವಾಹರಲಾಲ್ ನೆಹರು ಅವರು, ಡಾ. ಬಿ.ಆರ್. ಅಂಬೇಡ್ಕರ್ ರವರನ್ನು ಮುಖ್ಯಸ್ಥರನ್ನಾಗಿ ಮಾಡಿ ಸಂವಿಧಾನ ಕರಡು ರಚನಾ ಸಮಿತಿ ರಚಿಸಿದರು.
ಉತ್ತರದ ಕಾಶ್ಮೀರದಿಂದ ದಕ್ಷಿಣದ ತಮಿಳುನಾಡುವರೆಗೂ ಹಾಗೂ ಪಶ್ಚಿಮದ ಗುಜರಾತ್ ನಿಂದ ಪೂರ್ವದ ಅಸ್ಸಾಂ ವರೆಗೂ ವಿವಿಧ ಧಾರ್ಮಿಕ ಆಚರಣೆಯುಳ್ಳ ದೊಡ್ಡ ಭೂಭಾಗಗಳು, ವಿಭಿನ್ನ ಆಹಾರ ಪದ್ಧತಿ ಮತ್ತು ಸಾಂಸ್ಕೃತಿಕ ಹಿನ್ನೆಲೆ ಯುಳ್ಳ ಹಲವು ಬುಡಕಟ್ಟು ಪ್ರದೇಶಗಳನ್ನೂ ಒಳಗೊಂಡ ನಮ್ಮ ದೇಶಕ್ಕೆ ಸರಿಹೊಂದುವ ಸಂವಿಧಾನದ ಅವಶ್ಯಕತೆ ಇದ್ದ ಕಾಲಘಟ್ಟದಲ್ಲಿ ವಿಶ್ವದ ಅತಿದೊಡ್ಡ ಲಿಖಿತ ಸಂವಿಧಾನವನ್ನು ಅತ್ಯಂತ ಸಮರ್ಪಕವಾಗಿ ರಚನೆ ಮಾಡಿದ್ದು ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದ ಸಮಿತಿಯ ಅತಿ ದೊಡ್ಡ ಸಾಧನೆ. ಹಲವು ದೇಶಗಳ ಸಂವಿಧಾನ ಅಧ್ಯಯನ ಮಾಡಿ ಅವುಗಳ ಉತ್ತಮ ಅಂಶಗಳನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಭಾರತವನ್ನು ಒಂದು ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರ ವಾಗಿಸಲು ಮತ್ತು ಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳು ಮತ್ತು ಅವಕಾಶ ಒದಗಿಸಲು ಸಂವಿಧಾನ ಸಹಾಯ ಮಾಡಿದೆ.
ಸಂವಿಧಾನದ ಬಹಳ ಮುಖ್ಯ ಅಂಶವಾದ ಸಾಮಾಜಿಕ-ಆರ್ಥಿಕ ಸಮಾನತೆಯನ್ನು ತನ್ನ ಎಲ್ಲಾ ಪ್ರಜೆಗಳಿಗೆ ನೀಡುವ ದೃಷ್ಟಿ ಯಿಂದ ನಮ್ಮ ಸರ್ಕಾರ ಸಿದ್ದರಾಮಯ್ಯಅವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ನಂತರ ಸಮಾನತೆ ಆಶಯವನ್ನು ಸಾರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಸಮರ್ಪಕವಾಗಿ ಅನುಷ್ಠಾನ ಮಾಡಲಾಗುತ್ತಿದೆ. ಜಾತ್ಯತೀತ ಆಶಯಗಳನ್ನು ನಮ್ಮ ಜಿಲ್ಲೆಯ ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಶಾಂತಿಯುತವಾಗಿ ದತ್ತ ಜಯಂತಿ, ಉರುಸ್ ಆಚರಣೆ, ಸಾರ್ವಜನಿಕ ಗಣಪತಿ ಉತ್ಸವ, ಹಾಗೂ ಕ್ರಿಸ್‌ಮಸ್ ಆಚರಣೆಯಂತಹ ಧಾರ್ಮಿಕ ಕಾರ್ಯ ಕ್ರಮಗಳು ಸಂಪನ್ನಗೊಳಿಸಿರುವುದು ಹಾಗೂ ಸಮಾಜದಲ್ಲಿ ಸಹೋದರತೆ ಭಾವನೆ ಗಟ್ಟಿಗೊಳಿಸುವ ಪ್ರಕ್ರಿಯೆಯಾಗಿದೆ ಎಂದು ಹೇಳಿದರು.
ಭಾರತದ ವೈಶಿಷ್ಟ್ಯಗಳು ನೂರಾರು. ಶಾಂತಿ ನಮ್ಮ ಮಂತ್ರ, ಸಹನೆ ನಮ್ಮ ಶಕ್ತಿ, ಸೌಹಾರ್ದತೆ ನಮ್ಮ ಹುಟ್ಟುಗುಣ, ಕೂಡಿ ಬಾಳುವುದು ನಮ್ಮ ಪರಂಪರೆ, ಅನೇಕತೆಯಲ್ಲಿ ಏಕತೆ ನಮ್ಮ ವಿಶೇಷ, ಸಮನ್ವಯತೆ ನಮ್ಮ ಸಹಜತೆ, ಸರ್ವಧರ್ಮ ಸಮ ಭಾವ ನಮ್ಮ ಶ್ರೇಷ್ಠತೆ, ಎಲ್ಲರ ಒಳಗೆ ಒಂದಾಗುವುದು. ನಮ್ಮತನ, ಸಕಲ ಜೀವಾತ್ಮಗಳನ್ನು ಪ್ರೀತಿಸುವುದು ನಮ್ಮ ಔದಾರ್ಯ. ಈ ಎಲ್ಲಾ ಅಂಶಗಳು ನಮ್ಮ ಸಂವಿಧಾನದಲ್ಲಿ ಅಳವಡಿಸಿರುವುದು "ನಮ್ಮ ಹೆಮ್ಮೆ. ನಮ್ಮ ಸಂವಿಧಾನ " ಹಾಗಾಗಿಯೇ ಇಂದಿನ ಗಣರಾಜ್ಯೋತ್ಸವ ಆಚರಣಾ ಕಾರ್ಯಕ್ರಮ ಎಂದರು.