ಭಟ್ಕಳ: ದಿನದಿಂದ ದಿನಕ್ಕೆ ಸೆಕೆಯ ಪ್ರಮಾಣ ಜಾಸ್ತಿ ಆಗುತ್ತಿದ್ದು, ಸಿಂಹಾಳಕ್ಕೆ(ಎಳನೀರು) ಹೆಚ್ಚಿನ ಬೇಡಿಕೆ ಇದ್ದರೂ ಸಿಗುತ್ತಿಲ್ಲ ಎನ್ನುವಂತಾಗಿದೆ.
ಆದರೆ ಇದೀಗ ಎಲ್ಲ ಕಡೆ ಸಿಂಹಾಳದ ಕೊರತೆ ಉಂಟಾಗಿದೆ. ಕಳೆದ ಎರಡು ತಿಂಗಳಿನಿಂದ ಬೀಳುತ್ತಿರುವ ಬಿಸಿಲ ಹೊಡೆತವೂ ಇದಕ್ಕೆ ಕಾರಣ ಎನ್ನಲಾಗಿದೆ. ಸಿಂಹಾಳ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಭಾವನೆ ಜನರಲ್ಲಿರುವುದರಿಂದ ಎಲ್ಲ ಕಡೆ ಹೆಚ್ಚಿನ ಬೇಡಿಕೆ ಇದೆ. ಇಷ್ಟು ವರ್ಷ ಬೇಸಿಗೆಯಲ್ಲಿ ಸಿಂಹಾಳಕ್ಕೆ ಕೊರತೆ ಉಂಟಾಗುತ್ತಿದ್ದರೂ ಈ ವರ್ಷ ಉಂಟಾದಷ್ಟು ಕೊರತೆ ಇರುತ್ತಿರಲಿಲ್ಲ. ಸ್ಥಳೀಯವಾಗಿ ಸಿಂಹಾಳ ಸಿಗದೇ ಇದ್ದರೆ ಹೊರ ಊರಿನಿಂದ ಬರುವ ಸಿಂಹಾಳಕ್ಕೇನೂ ಕೊರತೆ ಇರುತ್ತಿರಲಿಲ್ಲ. ಆದರೆ ಈ ಸಲ ಮಾರ್ಚ್ ಮೂರನೇ ವಾರದಿಂದಲೇ ಸಿಂಹಾಳಕ್ಕೆ ಕೊರತೆ ಉಂಟಾಗಿದೆ. ಹೊರ ಊರಿನಿಂದಲೂ ಬರುತ್ತಿಲ್ಲ. ಬಿರುಬಿಸಿಲಿನ ಈ ಸಂದರ್ಭದಲ್ಲಿ ಸಿಂಹಾಳ ತೆಗೆಯಿಸಲು ಕೂಡ ಬೆಳೆಗಾರರು ಹಿಂಜರಿಯುತ್ತಾರೆ. ಸ್ಥಳೀಯವಾಗಿ ಕೆಲವು ಕಡೆ ಸಿಂಹಾಳ ಸಿಕ್ಕರೂ ಕೊಯ್ಯಿಸುವುದು, ಸಾಗಾಟ ಎಲ್ಲವೂ ಕಷ್ಟ. ಇದೆಲ್ಲವೂ ಮಾರಾಟಗಾರರೇ ಮಾಡಬೇಕಿದೆ. ಅದೂ ಅಲ್ಲದೇ ಬೇಸಿಗೆ ಆಗಿರುವುದರಿಂದ ಸರಿಯಾದ ಸಿಂಹಾಳ ಸಿಗುತ್ತಿಲ್ಲ.
ಸಿಂಹಾಳಕ್ಕೆ ಕೊರತೆ ಉಂಟಾಗಿರುವುದರಿಂದ ಇದರ ಮಾರಾಟವನ್ನೇ ನಂಬಿ ಜೀವನ ಸಾಗಿಸುವವರಿಗೆ ಸಮಸ್ಯೆ ಉಂಟಾಗಿದೆ. ದಿನದಿಂದ ದಿನಕ್ಕೆ ಸೆಕೆಯ ಪ್ರಮಾಣ ಹೆಚ್ಚುತ್ತಿರುವುದರಿಂದ ಎಳೆನೀರಿಗೆ ಭಾರೀ ಬೇಡಿಕೆ ಉಂಟಾಗಿದೆ. ದಿನಂಪ್ರತಿ ಎಳೆನೀರು ಸೇವಿಸುವವರಿಗೆ ಸರಿಯಾಗಿ ಸಿಗುತ್ತಿಲ್ಲ. ದರ ₹50 ಆದರೂ ಕುಡಿಯುತ್ತಿದ್ದಾರೆ. ಕೆಲವರು ಅಗತ್ಯ ಬೇಡಿಕೆಯಷ್ಟು ಪೂರೈಕೆ ಇಲ್ಲದೇ ಇರುವುದರಿಂದ ತಮ್ಮ ಅಂಗಡಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ್ದಾರೆ.