ತಾಯಿಗೆ ಬೈದ ಕಾರಣಕ್ಕೆ ಸ್ನೇಹಿತನ ಕೊಲೆ

KannadaprabhaNewsNetwork |  
Published : Jun 24, 2025, 12:32 AM IST
ತಾಯಿಗೆ ಬೈದ ಕಾರಣಕ್ಕೆ ಸ್ನೇಹಿತನ ಕೊಲೆ | Kannada Prabha

ಸಾರಾಂಶ

ಕೊಲೆಯಾದ ಮಿತಿಲೇಶಕುಮಾರ ಬಿಹಾರ ಮೂಲದವನಾಗಿದ್ದು, ಕೊಲೆ ಮಾಡಿದ ವ್ಯಕ್ತಿ ರಾಜೇಶಕುಮಾರ ಹರಿಯಾಣ ಮೂಲದವನಾಗಿದ್ದಾನೆ. ಇಬ್ಬರು ವಿಕಲಚೇತನರಾಗಿದ್ದು, ನಗರದಲ್ಲಿ ಭಿಕ್ಷೆ ಬೇಡಿಕೊಂಡಿದ್ದರು. ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಹುಬ್ಬಳ್ಳಿಗೆ ಬಂದು ಕುಟುಂಬಸ್ಥರ ಮನೆಯಲ್ಲಿ ವಾಸವಿದ್ದರು.

ಹುಬ್ಬಳ್ಳಿ: ತಾಯಿಗೆ ಬೈದ ಎಂಬ ಕಾರಣಕ್ಕೆ ವ್ಯಕ್ತಿಯೊರ್ವ ಸ್ನೇಹಿತನನ್ನು ಹತ್ಯೆ ಮಾಡಿರುವ ಘಟನೆ ಹಳೇಹುಬ್ಬಳ್ಳಿಯಲ್ಲಿ ಭಾನುವಾರ ನಡೆದಿದೆ.

ಬಿಹಾರ ಮೂಲದ ವಿಕಲಚೇತನ ಮಿತಿಲೇಶಕುಮಾರ ಮೃತ ವ್ಯಕ್ತಿ. ಈತನನ್ನು ವಿಕಲಚೇತನನಾದ ರಾಜೇಶ ಕುಮಾರ್ ಅಲಿಯಾಸ್ ನಜೀರ್ ಖಾನ್ ಹತ್ಯೆ ಮಾಡಿದ್ದಾನೆಂದು ತಿಳಿದುಬಂದಿದೆ.

ರಾಜೇಶಕುಮಾರ್ ಭಾನುವಾರ ಮದ್ಯದ ಅಮಲಿನಲ್ಲಿ ಮಿತಿಲೇಶಕುಮಾರನೊಂದಿಗೆ ಜಗಳ ತೆಗೆದು, ಅವರ ತಾಯಿಗೆ ಅವಾಚ್ಯವಾಗಿ ನಿಂದಿಸಿದ್ದಾನೆ. ಬಳಿಕ ಜಗಳ ವಿಕೋಪಕ್ಕೆ ಹೋಗಿ ರಾಜೇಶಕುಮಾರ ಮಿತಿಲೇಶನಿಗೆ ಮೈಕ್ ಸೆಟ್‌ನಿಂದ ತಲೆಗೆ ಹೊಡೆದಿದ್ದಾನೆ. ಪರಿಣಾಮ ಮಿತಿಲೇಶ ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದ. ಈ ವೇಳೆ ಸ್ಥಳೀಯರು ಕೆಎಂಸಿಆರ್‌ಐಗೆ ರವಾನಿಸಲು ಯತ್ನಿಸಿದರು. ಆದರೆ, ಮಾರ್ಗಮಧ್ಯದಲ್ಲಿ ಅಸುನೀಗಿದ್ದಾನೆ ಎಂದು ತಿಳಿದುಬಂದಿದೆ.

ಮೃತ ಮಿತಿಲೇಶಕುಮಾರ ಬಿಹಾರದವನು ಮತ್ತು ಕೊಲೆಗೈದ ರಾಜೇಶ್ ಹರಿಯಾಣದವನು ಈ ಇಬ್ಬರೂ ಸ್ನೇಹಿತರಾಗಿದ್ದು, ಅಂಗವೈಕಲ್ಯ ಹಿನ್ನೆಲೆಯಲ್ಲಿ ಇಲ್ಲಿನ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದೇ ಮನೆಯಲ್ಲಿ ವಾಸವಾಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಹಳೇಹುಬ್ಬಳ್ಳಿ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಆರೋಪಿ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಶವಾಗಾರಕ್ಕೆ ಕಮೀಷನರ್‌ ಭೇಟಿ: ಕೆಎಂಸಿಆರ್‌ಐ ಶವಾಗಾರಕ್ಕೆ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ, ಡಿಸಿಪಿ ಮಹಾನಿಂಗ ನಂದಗಾವಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ, ಘಟನೆ ಬಗ್ಗೆ ಹಳೇಹುಬ್ಬಳ್ಳಿ ಠಾಣೆ ಪೊಲೀಸರಿಂದ ಮಾಹಿತಿ ಪಡೆದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ, ಕೊಲೆಯಾದ ಮಿತಿಲೇಶಕುಮಾರ ಬಿಹಾರ ಮೂಲದವನಾಗಿದ್ದು, ಕೊಲೆ ಮಾಡಿದ ವ್ಯಕ್ತಿ ರಾಜೇಶಕುಮಾರ ಹರಿಯಾಣ ಮೂಲದವನಾಗಿದ್ದಾನೆ. ಇಬ್ಬರು ವಿಕಲಚೇತನರಾಗಿದ್ದು, ನಗರದಲ್ಲಿ ಭಿಕ್ಷೆ ಬೇಡಿಕೊಂಡಿದ್ದರು. ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಹುಬ್ಬಳ್ಳಿಗೆ ಬಂದು ಕುಟುಂಬಸ್ಥರ ಮನೆಯಲ್ಲಿ ವಾಸವಿದ್ದರು ಎಂದು ತಿಳಿಸಿದರು.

ಕುಟುಂಬಸ್ಥರು ಹಬ್ಬದ ನಿಮಿತ್ತ ಊರಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ಇಬ್ಬರ ಮಧ್ಯೆ ಜಗಳ ಶುರುವಾಗಿ ಈ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೇಶಕುಮಾರನನ್ನು ವಶಕ್ಕೆ ಪಡೆಯಲಾಗಿದೆ. ಹಳೇ ಹುಬ್ಬಳ್ಳಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಹೇಳಿದರು.

PREV

Recommended Stories

ಬೆಳ್ತಂಗಡಿ: ಆಧಾರ್‌ ನೋಂದಣಿ, ತಿದ್ದುಪಡಿ ಶಿಬಿರ
ಲಾಯಿಲ ರಾಘವೇಂದ್ರ ಮಠ ಅಭಿವೃದ್ಧಿಗೆ 20 ಲಕ್ಷ ರು. ನೆರವು: ಶಾಸಕ ಗವಿಯಪ್ಪ ಭರವಸೆ