ಅಲ್ಲಿ ದೋಸ್ತಿ; ಇಲ್ಲಿ ಕುಸ್ತಿ..!

KannadaprabhaNewsNetwork |  
Published : Aug 03, 2024, 12:36 AM IST
54564 | Kannada Prabha

ಸಾರಾಂಶ

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಓಡಾಡಿ ಮೈತ್ರಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದ ಜೆಡಿಎಸ್‌ ಮುಖಂಡರು ಇದೀಗ ಬಿಜೆಪಿಯೊಂದಿಗೆ ಮುನಿಸಿಕೊಂಡಿದ್ದಾರೆ. ಬಿಜೆಪಿ ಶಾಸಕ ಅರವಿಂದ ಬೆಲ್ಲದ ವಿರುದ್ಧವಾಗಿ ಜೆಡಿಎಸ್‌ ರಾಜ್ಯ ವಕ್ತಾರ ಗುರುರಾಜ ಹುಣಸಿಮರದ ಬಹಿರಂಗವಾಗಿ ಆರೋಪ ಮಾಡಿದ್ದಾರೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿನ ಬಿಜೆಪಿ-ಜೆಡಿಎಸ್‌ ಮೈತ್ರಿ ಮಾಡಿಕೊಂಡು ದೋಸ್ತಿ ನಿಭಾಯಿಸುತ್ತಿದೆ. ಆದರೆ ಧಾರವಾಡ ಜಿಲ್ಲೆಯಲ್ಲಿ ಬಿಜೆಪಿ ಶಾಸಕನ ವಿರುದ್ಧವೇ ಜೆಡಿಎಸ್‌ ರಾಜ್ಯ ವಕ್ತಾರ ಆರೋಪ ಮಾಡಿರುವುದು ಎರಡು ಪಕ್ಷಗಳಲ್ಲಿನ ಮೈತ್ರಿಯಲ್ಲಿ ಬಿರುಕು ಮೂಡಿಸಿದೆ. ಇದು ಜಿಲ್ಲೆಯ ರಾಜಕಾರಣದಲ್ಲಿ ಸಂಚಲನವನ್ನುಂಟು ಮಾಡಿದೆ.

ಮುಡಾ ಹಾಗೂ ವಾಲ್ಮೀಕಿ ಹಗರಣ ಖಂಡಿಸಿ ಬಿಜೆಪಿ ನಡೆಸುತ್ತಿರುವ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಕೇಂದ್ರ ಸಚಿವ, ಜೆಡಿಎಸ್‌ ಮುಖಂಡ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಇದು ಎರಡು ಪಕ್ಷಗಳ ಮೈತ್ರಿಯಲ್ಲಿ ಬಿರುಕು ಮೂಡಿದೆ ಎಂಬುದು ಗೋಚರವಾಗಿತ್ತು. ಬಳಿಕ ದೆಹಲಿ ಮಟ್ಟದಲ್ಲಿ ಕುಮಾರಸ್ವಾಮಿ ಅವರಲ್ಲಿನ ಅಸಮಾಧಾನವನ್ನು ಶಮನಗೊಳಿಸಿದ್ದರು ಬಿಜೆಪಿಗರು.

ಇದೀಗ ಲೋಕಲ್‌ನಲ್ಲೂ ಜಗಳ:

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಓಡಾಡಿ ಮೈತ್ರಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದ ಜೆಡಿಎಸ್‌ ಮುಖಂಡರು ಇದೀಗ ಬಿಜೆಪಿಯೊಂದಿಗೆ ಮುನಿಸಿಕೊಂಡಿದ್ದಾರೆ. ಬಿಜೆಪಿ ಶಾಸಕ ಅರವಿಂದ ಬೆಲ್ಲದ ವಿರುದ್ಧವಾಗಿ ಜೆಡಿಎಸ್‌ ರಾಜ್ಯ ವಕ್ತಾರ ಗುರುರಾಜ ಹುಣಸಿಮರದ ಬಹಿರಂಗವಾಗಿ ಆರೋಪ ಮಾಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಪಶ್ಚಿಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಅರವಿಂದ ಬೆಲ್ಲದ ಕಣಕ್ಕಿಳಿದಿದ್ದರೆ, ಜೆಡಿಎಸ್‌ನಿಂದ ಗುರುರಾಜ ಹುಣಸಿಮರದ ಸ್ಪರ್ಧಿಸಿದ್ದರು. ಬೆಲ್ಲದ ಗೆಲುವು ಕಂಡಿದ್ದರು. ಆಗ ಆಯೋಗಕ್ಕೆ ಬೆಲ್ಲದ ಸರಿಯಾದ ಮಾಹಿತಿ ನೀಡಿಲ್ಲ. ಕೆಲವೊಂದಿಷ್ಟು ಮಾಹಿತಿ ಅಫಿಡಿವಿಟ್‌ನಲ್ಲಿ ತಿಳಿಸಿಲ್ಲ ಎಂದೆಲ್ಲ ಹುಣಸಿಮರದ ಆರೋಪಿಸಿದ್ದಾರೆ.

ಇನ್ನು ಕಳೆದ ವಾರವಷ್ಟೇ ನಡೆದ ಅಖಿಲ ಭಾರತ ವೀರಶೈವ ಮಹಾಸಭಾದ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಗುರುರಾಜ ಹುಣಸಿಮರದ ಕಣಕ್ಕಿಳಿದಿದ್ದರು. ಆಗ ಬೆಲ್ಲದ ಬೇರೆ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದಾರೆ. ಇದರಿಂದ ಹುಣಸಿಮರದ ಸೋಲನ್ನುಭವಿಸಬೇಕಾಯಿತು ಎಂಬುದು ಜೆಡಿಎಸ್‌ ಆರೋಪ. ಇದೀಗ ಅದಕ್ಕೆ ಪ್ರತಿಕಾರವಾಗಿ ಹುಣಸಿಮರದ ಬೆಲ್ಲದ ವಿರುದ್ಧ ಆರೋಪ ಮಾಡುತ್ತಿದ್ದಾರೆ.

ಮೈತ್ರಿ ಆಗಿರಲಿಲ್ಲವೆಂದರೆ ಹುಣಸಿಮರದ ಆರೋಪದ ಬಗ್ಗೆ ರಾಜಕೀಯ ವಲಯದಲ್ಲಿ ಅಷ್ಟೊಂದು ಚರ್ಚೆಯಾಗುತ್ತಿರಲಿಲ್ಲ. ಆದರೆ ಮೈತ್ರಿ ಕಾರಣದಿಂದ ಹುಣಸಿಮರದ ಹೇಳಿಕೆ ಮಹತ್ವ ಪಡೆದಂತಾಗಿದೆ. ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ದೋಸ್ತಿಯಾದರೆ ಸ್ಥಳೀಯವಾಗಿ ಕುಸ್ತಿ ಎಂಬಂತಾಗಿದೆ.

ಏನಾಗುತ್ತೋ ಏನೋ?

ಇನ್ನು ಕಾರ್ಯಕರ್ತರು ಸೇರಿದಂತೆ ಇದೇ ಹುಣಸಿಮರದ ಕೂಡ ಎಂಪಿ ಚುನಾವಣೆ ವೇಳೆ ಸ್ಥಳೀಯ ಮಟ್ಟದಲ್ಲೂ (ಜಿಪಂ, ತಾಪಂ ಚುನಾವಣೆಗಳಲ್ಲೂ) ಮೈತ್ರಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ್ದರು. ಇದೀಗ ಬಿಜೆಪಿ ಶಾಸಕರ ವಿರುದ್ಧವೇ ಹೇಳಿಕೆ ನೀಡಿರುವುದರಿಂದ ಸ್ಥಳೀಯ ಮಟ್ಟದಲ್ಲೂ ಮೈತ್ರಿ ಆಗುತ್ತದೆಯೇ? ಆದರೂ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಎರಡು ಪಕ್ಷಗಳ ಕಾರ್ಯಕರ್ತರು ಕೆಲಸ ಮಾಡುತ್ತಾರೆಯೇ? ಕಾಂಗ್ರೆಸ್‌ ವಿರುದ್ಧ ಮತ್ತೆ ಒಗ್ಗಟ್ಟು ಪ್ರದರ್ಶಿಸಲು ಸಾಧ್ಯವಾಗುತ್ತದೆಯೇ? ಎಂಬೆಲ್ಲ ಪ್ರಶ್ನೆಗಳು ಇದೀಗ ಜಿಲ್ಲೆಯ ರಾಜಕೀಯ ವಲಯದಲ್ಲಿ ಉಂಟಾಗಿವೆ.

ಆದರೆ ಇದಕ್ಕೆ ಹುಣಸಿಮರದ, ಮೈತ್ರಿ ಮಾಡಿಕೊಳ್ಳುವ ಮುನ್ನವೇ ಬೆಲ್ಲದ ವಿರುದ್ಧ ಪ್ರಕರಣ ದಾಖಲಾಗಿತ್ತು. ಆ ವಿಷಯವನ್ನು ಟೀಕಿಸಿದ್ದೇನೆ. ಮೈತ್ರಿಗೂ ನನ್ನ ಹೇಳಿಕೆಗೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ. ವಿಧಾನಸಭೆ ಚುನಾವಣೆಯ ವಿಷಯವನ್ನು ಈಗ ಪ್ರಸ್ತಾಪಿಸಿ ಟೀಕೆ ಮಾಡುತ್ತಿರುವುದು ಚರ್ಚೆಗೆ ಗ್ರಾಸವನ್ನುಂಟು ಮಾಡಿರುವುದಂತೂ ಸತ್ಯ.ನಾನು ಆರೋಪಿಸಿರುವುದಕ್ಕೆ ಹಾಗೂ ಮೈತ್ರಿಗೂ ಯಾವುದೇ ಬಗೆಯ ಸಂಬಂಧವಿಲ್ಲ. ಪಕ್ಷಗಳ ಬಗ್ಗೆ ನಾನೇನು ಹೇಳಿಕೆ ನೀಡಿಲ್ಲ. ಚುನಾವಣೆಯಲ್ಲಿ ಸೋತ ಅಭ್ಯರ್ಥಿಯಾಗಿ ಅರವಿಂದ ಬೆಲ್ಲದ ಅವರ ವಿರುದ್ಧ ಆರೋಪ ಮಾಡಿದ್ದೇನೆ. ಇದರಲ್ಲಿ ಮೈತ್ರಿ ಬಗ್ಗೆ ಬಿರುಕು ಮೂಡಿದೆ ಎಂದ್ಹೇಳುವುದು ಸರಿಯಲ್ಲ. ನನ್ನ ಹೇಳಿಕೆಯಿಂದ ಮೈತ್ರಿಗೆ ಯಾವುದೇ ಧಕ್ಕೆಯುಂಟಾಗುವುದಿಲ್ಲ ಎಂದು ಜೆಡಿಎಸ್‌ ರಾಜ್ಯ ವಕ್ತಾರ ಗುರುರಾಜ ಹುಣಸಿಮರದ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ