18ರಿಂದ ವಿನಯ ನಡಿಗೆ ಹಳ್ಳಿ ಕಡೆಗೆ ಪಾದಯಾತ್ರೆ

KannadaprabhaNewsNetwork |  
Published : Dec 16, 2023, 02:00 AM IST
15ಕೆಡಿವಿಜಿ7, 8-ದಾವಣಗೆರೆಯಲ್ಲಿ ಕಾಂಗ್ರೆಸ್ ಪಕ್ಷದ ಲೋಕಸಭಾ ಟಿಕೆಟ್ ಆಕಾಂಕ್ಷಿ, ಬೆಂಗಳೂರಿನ ಇನ್‌ಸೈಟ್ಸ್ ಅಕಾಡೆಮಿ ಸಂಸ್ಥಾಪಕ ಜಿ.ಬಿ.ವಿನಯಕುಮಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

25 ದಿನದಲ್ಲಿ 450 ಗ್ರಾಮ ತಲುಪುವ ಗುರಿ: ಕಾಂಗ್ರೆಸ್ ಲೋಕಸಭಾ ಟಿಕೆಟ್ ಆಕಾಂಕ್ಷಿ ಜಿ.ಬಿ.ವಿನಯ್‌ । ಹಳ್ಳಿ ಸಮಸ್ಯೆ ಬಗ್ಗೆ ಜ.12ರವರೆಗೆ ಸಂವಾದ

25 ದಿನದಲ್ಲಿ 450 ಗ್ರಾಮ ತಲುಪುವ ಗುರಿ: ಕಾಂಗ್ರೆಸ್ ಲೋಕಸಭಾ ಟಿಕೆಟ್ ಆಕಾಂಕ್ಷಿ ಜಿ.ಬಿ.ವಿನಯ್‌ । ಹಳ್ಳಿ ಸಮಸ್ಯೆ ಬಗ್ಗೆ ಜ.12ರವರೆಗೆ ಸಂವಾದ

ಕನ್ನಡಪ್ರಭ ವಾರ್ತೆ ದಾವಣಗೆರೆ

ಗ್ರಾಮೀಣರ ಸಮಸ್ಯೆ ಆಲಿಸಿ, ಪರಿಹಾರ ಕಲ್ಪಿಸುವ ಜೊತೆಗೆ ಗ್ರಾಮಗಳ ಅಭಿವೃದ್ಧಿಯ ಕನಸಿನೊಂದಿಗೆ ಲೋಕಸಭಾ ಕ್ಷೇತ್ರದ ಚುನಾವಣೆ ಇತಿಹಾಸದಲ್ಲೇ ಮೊದಲ ಬಾರಿ ವಿನಯ ನಡಿಗೆ ಹಳ್ಳಿ ಕಡೆಗೆ ಹೆಸರಿನಲ್ಲಿ ಡಿ.18ರಿಂದ ಜ.12ರವರೆಗೆ ಜಗಳೂರು ತಾಲೂಕಿನಿಂದ ಪಾದಯಾತ್ರೆ ಕೈಗೊಳ್ಳುವುದಾಗಿ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ, ಇನ್‌ಸೈಟ್ಸ್‌ ಐಎಎಸ್ ತರಬೇತಿ ಕೇಂದ್ರದ ಸ್ಥಾಪಕ ಜಿ.ಬಿ.ವಿನಯಕುಮಾರ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿನಯ ನಡಿಗೆ ಹಳ್ಳಿ ಕಡೆಗೆ ಪಾದಯಾತ್ರೆ ಡಿ.18ರ ಬೆಳಿಗ್ಗೆ 9ಕ್ಕೆ ಜಗಳೂರು ವಿಧಾನಸಭಾ ಕ್ಷೇತ್ರದ ಚಿಕ್ಕಉಜ್ಜಿನ ಗ್ರಾಮದಿಂದ ಆರಂಭಿಸಲಾಗುವುದು. ಜಗಳೂರು ಜನ ಪ್ರತಿನಿಧಿಗಳು, ಮುಖಂಡರು, ಮಹಿಳೆಯರು, ಕಾರ್ಯಕರ್ತರು ಭಾಗವಹಿಸುವರು. ಒಟ್ಟು 25 ದಿನಗಳ ಪಾದಯಾತ್ರೆಯಲ್ಲಿ ಜಿಲ್ಲೆಯ ಸುಮಾರು 450 ಗ್ರಾಮಗಳಿಗೆ ಪಾದಯಾತ್ರೆ ಮೂಲಕ ತೆರಳಿ, ವಾಸ್ತವ್ಯ ಮಾಡುವ ಮೂಲಕ ಸ್ಥಳೀಯ ಜನರೊಂದಿಗೆ ಸಂವಾದ ಮಾಡುವುದು, ಸಮಸ್ಯೆಗಳಿಗೆ ಸಾಧ್ಯವಾದಷ್ಟು ಸಹಾಯ ಒದಗಿಸುವುದು, ಗ್ರಾಮೀಣ ವಿದ್ಯಾರ್ಥಿ, ಯುವ ಜನರಿಗೆ ಸಲಹೆ ನೀಡುವ ಕೆಲಸವೂ ಆಗಲಿದೆ. ವಿನಯ ಮಾರ್ಗ, ತಮ್ಮ ಟ್ರಸ್ಟ್‌ನಿಂದಲೂ ವಿದ್ಯಾರ್ಥಿಗಳ ಓದಿಗೆ ನೆರವು ನೀಡಲಾಗುವುದು ಎಂದು ಹೇಳಿದರು.

ಜಿಲ್ಲೆಯ ಹಳ್ಳಿಗಳು ಅತ್ಯಂತ ಕಡೆಗಣಿಸಲ್ಪಟ್ಟಿದ್ದು, ಅಭಿವೃದ್ಧಿ ಇನ್ನೂ ಆಗಬೇಕಾಗಿದೆ. ಜನ ಪ್ರತಿನಿಧಿಗಳು, ಅಧಿಕಾರಿಗಳು ಹಳ್ಳಿಗಳನ್ನು ನಿರ್ಲಕ್ಷಿಸಿರುವುದರಿಂದ ಹಳ್ಳಿಗಳಿಗೆ ನಡಿಗೆ, ಗ್ರಾಮ ವಾಸ್ತವ್ಯಕ್ಕೆ ನಿರ್ಧಾರ ಮಾಡಿದ್ದೇವೆ. ಬರಲಿರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ದಾವಣಗೆರೆ ಕ್ಷೇತ್ರಕ್ಕೆ ತಮಗೆ ಟಿಕೆಟ್ ಸಿಕ್ಕು, ತಾವು ಗೆಲುವು ಸಾಧಿಸಿದರೆ ಹಳ್ಳಿಗಳ ಅಭಿವೃದ್ಧಿಗೆ ಮೊದಲ ಆದ್ಯತೆಯಾಗಿ ಪರಿಗಣಿಸಿ, ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಜಾಗೃತಿಗಾಗಿ ಪಾದಯಾತ್ರೆ:

ಸಾಮಾನ್ಯವಾಗಿ ರಾಜಕೀಯದಲ್ಲಿ ವಿನಯತೆ ಅತೀ ಮುಖ್ಯ. ಆದರೆ, ಈಚಿನ ದಿನಗಳಲ್ಲಿ ರಾಜಕಾರಣಿಗಳಲ್ಲಿ ವಿನಯತೆ ಕಡಿಮೆಯಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವುದೂ ರಾಜಕಾರಣಿಗಳಿಂದ ಕಡಿಮೆಯಾಗುತ್ತಿದೆ. ಪಾದಯಾತ್ರೆಯಲ್ಲಿ ತಾವು ರಾಜಕಾರಣಿಗಳಿಗೆ ವಿನಯತೆಯೂ ಮುಖ್ಯ ಎಂಬ ಜಾಗೃತಿ ಮೂಡಿಸಲೆಂದೇ ವಿನಯ ನಡಿಗೆ ಹಳ್ಳಿ ಕಡೆಗೆ ಎಂಬುದಾಗಿ ನಾಮಕರಣ ಮಾಡಿದ್ದು, ನಮ್ಮ ಈ ಪ್ರಯತ್ನಕ್ಕೆ ಈಗಾಗಲೇ ಸಾಕಷ್ಟು ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಸಾಕಷ್ಟು ಜನರು ತಾವೂ ಪಾದಯಾತ್ರೆಯಲ್ಲಿ ಭಾಗಿಯಾಗುವ ಮಾತುಗಳನ್ನಾಡುತ್ತಿದ್ದಾರೆ ಎಂದು ಹೇಳಿದರು.

ಮುಖಂಡರಾದ ಸುರೇಶ ಅರಿಶಿನಘಟ್ಟ, ಕಾಂಗ್ರೆಸ್ ಯುವ ಮುಖಂಡರಾದ ಎಸ್.ಶರತ್‌ಕುಮಾರ, ಬಿ.ನಿಂಗರಾಜ. ಹಾಲೇಕಲ್ಲು ಎಸ್.ಟಿ.ಅರವಿಂದ, ಕಲ್ಲೇಶ ಇತರರಿದ್ದರು. ಕೊಟ್ಟ ಭರವಸೆ ಈಡೇರಿಸುವೆ

ಹಳ್ಳಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆರ್ಥಿಕ ಸಮಸ್ಯೆಯಿಂದ ಶಾಲೆ ಬಿಟ್ಟಿರುವ, ಅರ್ಧಕ್ಕೆ ಓದು ನಿಲ್ಲಿಸಿದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಖಂಡಿತಾ ಸಹಾಯ ಹಸ್ತ ಚಾಚುತ್ತೇನೆ. ಲೋಕಸಭೆ ಚುನಾವಣೆಗೆ ತಮಗೆ ಟಿಕೆಟ್ ಸಿಕ್ಕು, ಗೆಲುವು ಸಾಧಿಸಿದರೆ ಸಂಸದನಾಗಿ ಕಾಯಾ, ವಾಚಾ, ಮನಸಾ ಜನರಿಗೆ ಕೊಟ್ಟ ಭರವಸೆಗಳ ಪ್ರಾಮಾಣಿಕವಾಗಿ ಈಡೇರಿಸುತ್ತೇನೆ.

ಜಿ.ಬಿ.ವಿನಯಕುಮಾರ, ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ
.................

ಲೋಕಸಭೆಗೆ ನನ್ನ ಹೆಸರೂ ಪರಿಗಣನೆ, ಟಿಕೆಟ್‌ ಸಿಗುವ ವಿಶ್ವಾಸ

*ಸಚಿವ ಎಸ್ಸೆಸ್ಸೆಂರನ್ನು ಇಂದು ಭೇಟಿಯಾಗಿ ಚರ್ಚಿಸುವೆ

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಮೂವರು ಪ್ರಬಲ ಆಕಾಂಕ್ಷಿಗಳ ಪಟ್ಟಿಯಲ್ಲಿ ನನ್ನ ಹೆಸರನ್ನೂ ಪರಿಗಣಿಸಲಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಯವರಿಗೆ ಹೋದ ಮೂರು ಹೆಸರುಗಳಲ್ಲಿ ನನ್ನ ಹೆಸರಿದೆ. ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಪಕ್ಷದ ಎಲ್ಲಾ ಜಿಲ್ಲಾ ನಾಯಕರ ಭೇಟಿ ಮಾಡಿ, ಎಲ್ಲರ ವಿಶ್ವಾಸ ಗಳಿಸುವೆ. ದಾವಣಗೆರೆಯಲ್ಲಿ ಕಾಂಗ್ರೆಸ್ ಪಕ್ಷದ ಶಕ್ತಿ, ಪಕ್ಷವನ್ನು ಕಟ್ಟಿ ಬೆಳೆಸಿದ ನಾಯಕರಾದ ಸಚಿವ ಎಸ್.ಎಸ್‌.ಮಲ್ಲಿಕಾರ್ಜುನರನ್ನು ಡಿ.16ರಂದು ಭೇಟಿ ಮಾಡಿ, ಚರ್ಚಿಸಿ, ವಿಶ್ವಾಸಗಳಿಸುತ್ತೇನೆ. ಪಕ್ಷದ ಜಿಲ್ಲಾಧ್ಯಕ್ಷರೊಂದಿಗೂ ಮಾತನಾಡಿದ್ದು, ಯಾರಿಗೆ ಟಿಕೆಟ್ ನೀಡಿದರೂ ನಾವೆಲ್ಲರೂ ಕಾಂಗ್ರೆಸ್ ಗೆಲುವಿಗಾಗಿ ಒಟ್ಟಾಗಿ ಶ್ರಮಿಸಲು ಒಪ್ಪಂದ ಮಾಡಿಕೊಂಡಿದ್ದೇವೆ. ರಾಹುಲ್ ಗಾಂಧಿಯವರೇ ಇಲ್ಲಿಂದ ಸ್ಪರ್ಧಿಸಿದರೂ ನಾನೂ ಸ್ವಾಗತಿಸಿ, ಕಾಂಗ್ರೆಸ್‌ ಗೆಲುವಿಗೆ ಶ್ರಮಿಸುವೆ ಎಂದು

ಜಿ.ಬಿ.ವಿನಯಕುಮಾರ ಹೇಳಿದರು.

.......................

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!