ಗಣಿ ಸಚಿವರ ಹೆಸರು ದುರುಪಯೋಗ, ಶೀಘ್ರವೇ ಎಸ್ಸೆಸ್ಸೆಂ ಭೇಟಿ ಮಾಡಿ ಮನವಿ: ಹಂಪೋಳ್
ಕನ್ನಡಪ್ರಭ ವಾರ್ತೆ ದಾವಣಗೆರೆತುಂಗಭದ್ರಾ ನದಿ ಮತ್ತು ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆ ಮಾಡುತ್ತಿರುವುದನ್ನು ತಡೆದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಭ್ರಷ್ಟಾಚಾರ ವಿರೋಧಿ ವೇದಿಕೆ, ಕೋಟೆಹಾಳು ಗ್ರಾಮಸ್ಥರು ನಗರದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ವಿದ್ಯಾನಗರದ 2ನೇ ಬಸ್ ಸ್ಟಾಪ್ ಬಳಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರ ಕಚೇರಿ ಎದುರು ಹೊನ್ನಾಳಿ ಭ್ರಷ್ಟಾಚಾರ ವಿರೋಧಿ ವೇದಿಕೆ ಪದಾಧಿಕಾರಿಗಳು, ಸದಸ್ಯರು ಪ್ರತಿಭಟನೆ ನಡೆಸಿ, ಅಕ್ರಮ ಮರಳು ದಂಧೆ ತಡೆಯಬೇಕೆಂದು ಘೋಷಣೆ ಕೂಗಿದರು. ನಂತರ ಉಪ ನಿರ್ದೇಶಕರಿಗೆ ಈ ಸಂಬಂಧ ಮನವಿ ಸಲ್ಲಿಸಿದರು.ವೇದಿಕೆ ಗೌರವಾಧ್ಯಕ್ಷ ಮೃತ್ಯುಂಜಯ ಆರ್. ಹಂಪೋಳ್ ಮಾತನಾಡಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರ ಹೆಸರನ್ನು ದುರುಪಯೋಗಪಡಿಸಿಕಂಡು, ನಿಯಮ ಬಾಹಿರ ಮರಳುಗಾರಿಕೆ ನಡೆಸುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಹೊನ್ನಾಳಿ ತಾ. ಕೋಟೆಹಾಳು ಹಾಗೂ ಹರಪನಹಳ್ಳಿ ತಾ. ಹಲವಾಗಲು ಗ್ರಾಮಗಳ ತುಂಗಭದ್ರಾ ನದಿ ಪಾತ್ರದಲ್ಲಿ ಬೇಕಾಬಿಟ್ಟಿಯಾಗಿ ಮರಳುಗಾರಿಕೆ ಮಾಡಲಾಗುತ್ತಿದೆ. ಈ ಬಗ್ಗೆ ನ.9ರಂದೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಮನವಿ ಅರ್ಪಿಸಿದ್ದೆವು. ಆದರೆ, ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಪ್ರಕೃತಿಗೆ ಧಕ್ಕೆ, ಜಲಚರಗಳ ಸಂತತಿ ನಾಶವಾಗುವಂತೆ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಮರಳುಗಾರಿಕೆ ಮಾಡಲಾಗುತ್ತಿದೆ. ಮರಳು ಗುಂಡಿ ಮುಚ್ಚದೇ, ಜನ, ಜಾನುವಾರುಗಳ ಪ್ರಾಣಕ್ಕೆ ಕುತ್ತು ತರುತ್ತಿದ್ದಾರೆ. ಕೋಟೆಹಾಳು, ಹಲವಾಗಲು ಭಾಗದಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್ಸೆಸ್ ಮಲ್ಲಿಕಾರ್ಜುನರ ಹೆಸರು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.ರೈಸ್ ಮಿಲ್ ವೊಂದರ ಹೆಸರನ್ನು ಹೇಳಿಕೊಂಡು ಅಕ್ರಮ ಮರಳು ಮಾರಾಟ ಮಾಡುತ್ತಿದ್ದಾರೆ. ಶೀಘ್ರ ಸಚಿವ ಎಸ್ಸೆಸ್ಸೆಂ ರನ್ನು ಭೇಟಿ ಮಾಡಿ ಹೆಸರು ದುರುಪಯೋಗ ವಿಚಾರ ಗಮನಕ್ಕೆ ತರುತ್ತೇವೆ. ಸರ್ಕಾರದಿಂದ ಗುತ್ತಿಗೆ ಪಡೆದ ವೇಳೆ ಎಷ್ಟು ಟನ್ ಮರಳುಗಾರಿಕೆ ನಡೆಸಲು ಅನುಮತಿ ಪಡೆದಿದ್ದರು, ಎಷ್ಟು ಪರ್ಮಿಟ್ ಹಾಳೆ ಪಡೆದಿದ್ದಾರೆ, ಎಷ್ಟು ನಕಲಿ ಪರ್ಮಿಟ್ ಮಾಡಿಸಿದ್ದಾರೆ ಎಂಬ ಎಲ್ಲದರ ಬಗ್ಗೆಯೂ ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ವೇದಿಕೆ ಮುಖಂಡರಾದ ಸಿ.ಟಿ.ಮಲ್ಲೇಶ್, ಕೋಟೆಹಾಳು ಗ್ರಾಮದ ಪರಮೇಶ್ವರಪ್ಪ, ರಮೇಶ, ಶೇಷಯ್ಯ, ರಾಜಪ್ಪ, ತಿಮ್ಮಪ್ಪ, ನಾಗೇಶ, ಜಯಪ್ಪ ಸೇರಿ ಅನೇಕರಿದ್ದರು. ಇದೇ ವೇಳೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮುಖಾಂತರ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು.