ಚಾತುರ್ಮಾಸ್ಯದಿಂದ ಧರ್ಮ, ಸಾತ್ವಿಕ ಶಕ್ತಿ ಜಾಗೃತಿ: ಬ್ರಹ್ಮಾನಂದ ಸರಸ್ವತಿ ಶ್ರೀ

KannadaprabhaNewsNetwork | Published : Jul 22, 2024 1:18 AM

ಸಾರಾಂಶ

ಮನುಷ್ಯನನ್ನು ಯಾವುದೇ ಕಾನೂನಿನಿಂದ ಬದಲಾವಣೆ ಮಾಡಲು ಸಾಧ್ಯವಿಲ್ಲ. ಆತ ತನ್ನಲ್ಲಿರುವ ಷಡ್ ವೈರಿಗಳನ್ನು ಮೊದಲು ನಿಯಂತ್ರಿಸಬೇಕಾಗಿದೆ.

ಭಟ್ಕಳ: ಚಾತುರ್ಮಾಸ ವ್ರತಾಚರಣೆಯಿಂದ ಅನೇಕ ಉಪಯುಕ್ತತೆಗಳಿದ್ದು, ಇದರಲ್ಲಿ ಧರ್ಮ ಮತ್ತು ಸಾತ್ವಿಕ ಶಕ್ತಿಯ ಜಾಗೃತಿ ಮಹತ್ವದ್ದು ಎಂದು ಧರ್ಮಸ್ಥಳದ ಉಜಿರೆಯ ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.

ಭಾನುವಾರ ಕರಿಕಲ್ ಧ್ಯಾನ ಮಂದಿರದಲ್ಲಿ ಚಾತುರ್ಮಾಸ ವ್ರತಾರಂಭದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಚಾತುರ್ಮಾಸ ವ್ರತಕ್ಕೆ ತನ್ನದೇ ಆದ ಮಹತ್ವ ಇದೆ. ಇದು ಪುರಾಣ ಕಾಲದಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಮನುಷ್ಯನನ್ನು ಯಾವುದೇ ಕಾನೂನಿನಿಂದ ಬದಲಾವಣೆ ಮಾಡಲು ಸಾಧ್ಯವಿಲ್ಲ. ಆತ ತನ್ನಲ್ಲಿರುವ ಷಡ್ ವೈರಿಗಳನ್ನು ಮೊದಲು ನಿಯಂತ್ರಿಸಬೇಕಾಗಿದೆ. ಶರಣಾಗತಿಯಿಂದ ಬದುಕು ಪಾವನ ಆಗುತ್ತದೆ. ಅನುಷ್ಠಾನ, ಧ್ಯಾನ ಹೆಚ್ಚು ಮಾಡುವುದರಿಂದ ಜ್ಞಾನ ಲಭಿಸುವುದರ ಜತೆಗೆ ಆಧ್ಯಾತ್ಮಿಕತೆಯ ಕಡೆಗೆ ಮನಸ್ಸು ತೆರೆದುಕೊಳ್ಳಲು ಸಾಧ್ಯವಾಗುತ್ತದೆ ಎಂದ ಅವರು, ಚಾತುರ್ಮಾಸ್ಯ ವ್ರತಾಚರಣೆಯಿಂದ ಸಮಾಜದಲ್ಲಿ ಪರಸ್ಪರ ಭಾವೈಕೈತೆ, ಶಾಂತಿ ನೆಮ್ಮದಿ ಸೃಷ್ಟಿಯಾಗುತ್ತದೆ ಎಂದರು. ಭಟ್ಕಳ ಸೇರಿದಂತೆ ಜಿಲ್ಲೆಯ ನಾಮಧಾರಿ ಶಕ್ತಿ ಮಿಲಟರಿ ಪಡೆಯಂತೆ ಚಾತುರ್ಮಾಸ್ಯದ ಯಶಸ್ವಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ. ಇಂತಹ ಪುಣ್ಯ ಕಾರ್ಯದಲ್ಲಿ ಜಿಲ್ಲೆಯ ಸದ್ಭಕ್ತರು ಪಾಲ್ಗೊಂಡು ಭಗವಂತನ ಕೃಪೆಗೆ ಪಾತ್ರರಾಗಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಳ್ತಂಗಡಿ ಶಾಸಕ ಹರೀಶ ಪೂಂಜಾ, ಭಟ್ಕಳದಲ್ಲಿ ವಿಜೃಂಭಣೆಯಿಂದ ಮತ್ತು ಅರ್ಥಪೂರ್ಣವಾಗಿ ಶ್ರೀಗಳ ಚಾತುರ್ಮಾಸ್ಯ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಇಂತಹ ಪುಣ್ಯ ಕಾರ್ಯವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕೆಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಚಾತುರ್ಮಾಸ್ಯ ಸ್ವಾಗತ ಸಮಿತಿಯ ಅಧ್ಯಕ್ಷ ಕೃಷ್ಣಾ ನಾಯ್ಕ ಆಸರಕೇರಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗದ ಸ್ವಾಮೀಜಿಯೊಬ್ಬರ ಚಾತುರ್ಮಾಸ್ಯ ವ್ರತಾಚರಣೆ ಪ್ರಪ್ರಥಮವಾಗಿ ನಡೆಯುತ್ತಿದೆ. ಇಂತಹ ಪುಣ್ಯದ ಕಾರ್ಯಕ್ರಮದಲ್ಲಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಚಾತುರ್ಮಾಸ್ಯ ವ್ರತಾಚರಣೆಯನ್ನು ಕಣ್ತುಂಬಿಕೊಳ್ಳುವುದರ ಜತೆಗೆ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದರು.

ಮಂಗಳೂರಿನ ನಾರಾಯಣ ಗುರು ಕಾಲೇಜಿನ ಉಪನ್ಯಾಸ ಕೇಶವ ಬಂಗೇರ ಪ್ರಾಸ್ತಾವಿಕ ಮಾತನಾಡಿದರು. ಅಯೋಧ್ಯೆಯ ಕೇಶವದಾಸ ಮಹಾಂತ, ಮಾಜಿ ಶಾಸಕ ಜೆ.ಡಿ. ನಾಯ್ಕ, ವಿಧಾನಪರಿಷತ್ ಸದಸ್ಯ ಹರೀಶಕುಮಾರ, ಭಟ್ಕಳ ಗುರುಮಠದ ಅಧ್ಯಕ್ಷ ಅರುಣ ನಾಯ್ಕ, ಶಿರಾಲಿ ಸಾರದಹೊಳೆ ದೇವಸ್ಥಾನದ ಅಧ್ಯಕ್ಷ ಆರ್.ಕೆ. ನಾಯ್ಕ, ಮೊಕ್ತೇಸರ ಸುಬ್ರಾಯ ನಾಯ್ಕ, ಹಿರಿಯ ಮುಖಂಡರಾದ ಎಲ್.ಎಸ್. ನಾಯ್ಕ, ಡಿ.ಬಿ. ನಾಯ್ಕ, ಮೊಗೇರ ಸಮಾಜದ ಅಧ್ಯಕ್ಷ ಅಣ್ಣಪ್ಪ ಮೊಗೇರ, ಅಳ್ವೆಕೋಡಿ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ತಿಮ್ಮಪ್ಪ ಹೊನ್ನಿಮನೆ, ಈಶ್ವರ ನಾಯ್ಕ, ಗೋವಿಂದ ನಾಯ್ಕ, ಮಂಜುನಾಥ ನಾಯ್ಕ ಕುಮಟಾ, ವಾಮನ ನಾಯ್ಕ ಮುಂತಾದವರಿದ್ದರು.

ಅಳ್ವೆಕೋಡಿ ಮಾರಿಜಾತ್ರಾ ಮಹೋತ್ಸವದ ಅಧ್ಯಕ್ಷ ರಾಮಾ ಮೊಗೇರ, ಶ್ರೀರಾಮ ಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷ ಶ್ರೀಧರ ನಾಯ್ಕ ಆಸರಕೇರಿ ಸ್ವಾಗತಿಸಿದರು. ಸ್ವಾಗತ ಸಮಿತಿಯ ಸಂಚಾಲಕ ಕೃಷ್ಣಾ ನಾಯ್ಕ ಪೃಥ್ವಿ ವಂದಿಸಿದರು. ಗಂಗಾಧರ ನಾಯ್ಕ, ಪರಮೇಶ್ವರ ನಾಯ್ಕ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಧ್ಯಾನಮಂದಿರಕ್ಕೆ ಜಾಗ ನೀಡಿದ ಹಿರಿಯ ಮುಖಂಡ ಎಲ್.ಎಸ್. ನಾಯ್ಕ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಭಟ್ಕಳ ಸೇರಿದಂತೆ ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಯಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಬ್ರಹ್ಮಾನಂದ ಶ್ರೀಗಳ ಪುರಪ್ರವೇಶದ ಮೆರವಣಿಗೆ ನಡೆಯಿತು.

Share this article