ಕುಕನೂರು: ಪಟ್ಟಣದ ಎಪಿಎಂಸಿಯಲ್ಲಿ ಇಂದಿನಿಂದ ₹ 5ಕ್ಕೆ ಉಪಾಹಾರ, ₹ 10ಕ್ಕೆ ಊಟ ಸಿಗಲಿದೆ. ಈ ಮೂಲಕ ಮಂಗಳವಾರ ಉದ್ಘಾಟನೆಯಾಗುವ ಇಂದಿರಾ ಕ್ಯಾಂಟೀನಲ್ಲಿ ಕಡಿಮೆ ದರದಲ್ಲಿ ಹಸಿವು ನೀಗಿಸಿಕೊಳ್ಳಬಹುದು.
2023 ನ.30ರಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು ಪ್ರಸ್ತಾವನೆ ಮೇರೆಗೆ ಕುಕನೂರು ತಾಲೂಕಿನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಲು ಸರ್ಕಾರ ₹ 1.54 ಕೋಟಿ ಅನುದಾನ ನೀಡಿ ಮಂಜೂರು ಮಾಡಿತು. ಸದ್ಯ ಕ್ಯಾಂಟೀನ್ ಕಟ್ಟಡ ಪೂರ್ಣಗೊಂಡಿದ್ದು, ಮೇ 27ರಂದು ಉದ್ಘಾಟನೆಯಾಗಲಿದೆ.
ನಿತ್ಯ ಪಟ್ಟಣಕ್ಕೆ ವ್ಯಾಪಾರ, ವಹಿವಾಟು, ಶಾಲಾ, ಕಾಲೇಜು, ಎಪಿಎಂಸಿ ಮಾರುಕಟ್ಟೆ, ಕಚೇರಿಗಳಿಗೆ ಬರುವ ಜನರು, ಕಾರ್ಮಿಕರು ಹೀಗೆ ಜನಜಂಗುಳಿಯಿಂದ ಕುಕನೂರು ತುಂಬಿರುತ್ತದೆ. ಹೋಟಲ್‌ಗಳಲ್ಲಿ ಹಸಿದು ದುಬಾರಿ ಬೆಲೆಗೆ ಆಹಾರ ಸೇವಿಸುವ ಅನಿವಾರ್ಯತೆ ಸಹ ಇತ್ತು. ಈ ಹಿಂದೆ ಯಲಬುರ್ಗಾ ಕೇಂದ್ರದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿತ್ತು. ಆ ನಿಟ್ಟಿನಲ್ಲಿ ಕುಕನೂರು ಪಟ್ಟಣಕ್ಕೂ ಸಹ ಕ್ಯಾಂಟೀನ್ ಅವಶ್ಯಕ ಇತ್ತು.
ಕಡಿಮೆ ದರದಲ್ಲಿ ಹಸಿವು ಮುಕ್ತ:
ಸದ್ಯ ಕಡಿಮೆ ದರದಲ್ಲಿ ಕುಕನೂರು ಪಟ್ಟಣ ಹಾಗೂ ತಾಲೂಕಿನ ಜನತೆ ತಮ್ಮ ಹಸಿವು ನೀಗಿಸಿಕೊಳ್ಳಬಹುದಾಗಿದೆ. ಬೆಳಗ್ಗೆ ₹5ಕ್ಕೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ₹10ಕ್ಕೆ ಊಟ ಒದಗಿಸಲಾಗುತ್ತಿದೆ.ಕುಕನೂರು ನೂತನ ತಾಲೂಕು ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿದ್ದು ಪಟ್ಟಣಕ್ಕೆ ಇಂದಿರಾ ಕ್ಯಾಂಟೀನ್ ಅವಶ್ಯಕವಿತ್ತು. ಜನರ ಬೇಡಿಕೆ ಸಹ ಆಗಿತ್ತು. ಈ ನಿಟ್ಟಿನಲ್ಲಿ ನಾನು ಇಂದಿರಾ ಕ್ಯಾಂಟೀನ್ ಮಂಜೂರು ಮಾಡಿಸಿ ಕಟ್ಟಡ ಸಹ ಪೂರ್ಣಗೊಂಡಿದೆ. ಮೇ 27ರಂದು ಉದ್ಘಾಟನೆ ಆಗಲಿದೆ.
ಬಸವರಾಜ ರಾಯರಡ್ಡಿ ಸಿಎಂ ಆರ್ಥಿಕ ಸಲಹೆಗಾರ
ಇಂದಿರಾ ಕ್ಯಾಂಟೀನ್ ಆರಂಭದಿಂದ ಬಡವರಿಗೆ, ಹಮಾಲರಿಗೆ, ಕಾರ್ಮಿಕರಿಗೆ ಅನುಕೂಲವಾಗಲಿದೆ. ಕಡಿಮೆ ದರದಲ್ಲಿ ಉಪಾಹಾರ ಹಾಗೂ ಊಟ ಸಿಗಲಿದೆ. ಅಲ್ಲದೆ ಪಟ್ಟಣಕ್ಕೆ ಆರೋಗ್ಯ ಸೇವೆಗೆಂದು ಬರುವ ಜನರಿಗೂ ಅನುಕೂಲವಾಗಲಿದೆ.
ಮಳಿಯಪ್ಪ ಅಣ್ಣಿಗೇರಿ, ನಿಂಗಪ್ಪ ಗೊರ್ಲೆಕೊಪ್ಪ, ಕುಕನೂರು ನಿವಾಸಿಗಳು