ಕನ್ನಡಪ್ರಭ ವಾರ್ತೆ ಮಡಿಕೇರಿ
ಬಂದಡ್ಕದ ಆರ್ಟ್ ಆಫ್ ಲಿವಿಂಗ್ ಜ್ಞಾನ ಮಂದಿರದಿಂದ ಹೊರಟ ಮೆರವಣಿಗೆಯನ್ನು ಬಂದಡ್ಕದ ಹಿರಿಯ ವರ್ತಕರಾದ ಕೃಷ್ಣಪ್ಪ ಅವರು ಉದ್ಘಾಟನೆ ಮಾಡಿದರು. ರವಿಪ್ರಸಾದ್ ಇಳಂದಿಲ ನಡೆಸಿಕೊಟ್ಟರು. ಬಂದಡ್ಕ ಪಟ್ಟಣದ ಮೂಲಕ ಸಾಗಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಬಂದ ಮೆರವಣಿಗೆ ಊರಿಡಿ ಹಬ್ಬದ ವಾತಾವರಣ ನಿರ್ಮಾಣ ಮಾಡಿತ್ತು.
ಬಹಳ ಶಿಸ್ತಿನಿಂದ, ವೈಭವದಿಂದ ಸಾಗಿ ಬಂದ ಮೆರವಣಿಗೆಯು ಬಂದಡ್ಕ ಪಟ್ಟಣದಲ್ಲಿ ಜನರ ಕಣ್ಮನ ಸೆಳೆಯಿತು. ಗಂಡಸರು, ಹೆಂಗಸರು, ಮಕ್ಕಳು ಅರೆಭಾಷೆ ಅಕಾಡೆಮಿ ಲಾಂಛನದ ಬಾವುಟವನ್ನು ಬೀಸುತ್ತಾ ಸಾಗಿದರು. ಪೂರ್ಣಕುಂಭ ಹಿಡಿದ ಮಹಿಳೆಯರು ಜರತಾರಿ ಸೀರೆಯುಟ್ಟು ಕಂಗೊಳಿಸುತ್ತಿದ್ದರು. ಪುರುಷರು ಬಿಳಿ ಶರ್ಟು, ಬಿಳಿ ದೋತಿ, ಬಿಳಿ ಅಂಗವಸ್ತ್ರವನ್ನು ತೊಟ್ಟು ಗಂಭೀರ ಹೆಜ್ಜೆ ಹಾಕಿದರೆ, ಮಕ್ಕಳು ರಂಗುರಂಗಿನ ಉಡುಪು ತೊಟ್ಟು ಮಿಂಚುತ್ತಿದ್ದರು.ಮೆರವಣಿಗೆಯಲ್ಲಿ ಬಣ್ಣದ ಕೊಡೆಗಳು ಹೊಳೆಯುತ್ತಿದ್ದವು. ಬಾಲಕ ಬಾಲಕಿಯರು ಮೆರವಣಿಗೆಯುದ್ದಕ್ಕೂ ಸಮವಸ್ತ್ರ ತೊಟ್ಟು ಕುಣಿತ ಭಜನೆ ಮಾಡಿದರು. ಕೋಲಾಟ ಆಡಿದರು. ಜನರ ಉತ್ಸಾಹ ಮುಗಿಲು ಮುಟ್ಟಿತು.
ಗಡಿನಾಡ ಉತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅರೆಭಾಷೆ ಸಂಪ್ರದಾಯ ಬಿಂಬಿತವಾಯಿತು.
ಅದರಂತೆ ಹೆಣ್ಣು ಮಗುವಿನ ಹುಟ್ಟಿನಿಂದ ಮದುವೆ ಮಾಡಿ ಕೊಡುವ ತನಕದ ಶಾಸ್ತ್ರ ಸಂಪ್ರದಾಯಗಳನ್ನು ಒಳಗೊಂಡ ಕಾರ್ಯಕ್ರಮ ಸೇರಿದಂತೆ ಊರವರು ಮತ್ತು ಆಹ್ವಾನಿತ ತಂಡಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಕಾರ್ಯಕ್ರಮದ ಉದ್ದಕ್ಕೂ ನಡೆದವು.
‘ಪ್ರವಾಸಿ ತಾಣ ಕಾಸರಗೋಡು ಜಿಲ್ಲೆಯ ಬೇಕಲ ಕೋಟೆ ಮತ್ತು ಪುಣ್ಯ ಕ್ಷೇತ್ರ ಸುಬ್ರಹ್ಮಣ್ಯ ಸಂಪರ್ಕಿಸುವ ನಿಟ್ಟಿನಲ್ಲಿ ಬೇಕಲ, ಬಂದಡ್ಕ, ಸುಳ್ಯ, ಸುಬ್ರಹ್ಮಣ್ಯ ಅಂತರರಾಜ್ಯ ಮಾರ್ಗದಲ್ಲಿ ಸರ್ಕಾರಿ ಬಸ್ ಸರ್ವೀಸ್ ಆರಂಭಿಸಲು ಎಲ್ಲಾ ಪ್ರಯತ್ನ ನಡೆಸಲಾಗುವುದು ಎಂದು ಉದುಮ ಕ್ಷೇತ್ರದ ಶಾಸಕ ಸಿ.ಎಚ್.ಕುಂಞಂಬು ಅವರು ಸಮಾರೋಪ ಸಮಾರಂಭದಲ್ಲಿ ತಿಳಿಸಿದ್ದಾರೆ.’
ಅಂತಾರಾಜ್ಯ ಬಸ್ ಸರ್ವೀಸ್ ಆರಂಭಿಸಬೇಕು ಎಂದು ಅರೆಭಾಷೆ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಹಾಗೂ ಬಂದಡ್ಕದ ಪ್ರಮುಖರು ಮನವಿ ಸಲ್ಲಿಸಿದರು. ಈ ಮಾರ್ಗದಲ್ಲಿ ಹೊಸ ಬಸ್ ಮಾರ್ಗ ಮಂಜೂರು ಮಾಡಿಸಿ ಸರ್ಕಾರಿ ಬಸ್ ಸೇವೆ ಕಲ್ಪಿಸುವಲ್ಲಿ ಪ್ರಯತ್ನ ನಡೆಸಲಾಗುವುದು ಎಂದು ಅವರು ಹೇಳಿದರು.
ಮಡಿಕೇರಿ ಆಕಾಶವಾಣಿಯ ಹಿರಿಯ ಉದ್ಘೋಷಕರಾದ ಸುಬ್ರಾಯ ಸಂಪಾಜೆ ಅವರು ಮಾತನಾಡಿ ಹೊಸ ಹೊಸ ಸಾಧ್ಯತೆಗಳನ್ನು ಅರೆಭಾಷೆ ಅಕಾಡೆಮಿಯಿಂದ ಪ್ರಸ್ತುತಪಡಿಸಿದ್ದು, ಹೊಸ ಹೊಸ ಸಾಧ್ಯತೆಗಳನ್ನು ಅನ್ವೇಷಣೆ ಮಾಡಬೇಕಿದೆ ಎಂದರು.
ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ, ಅರೆಭಾಷೆ ಗಡಿನಾಡ ಉತ್ಸವ ಸಂಘಟನಾ ಸಮಿತಿಯ ಅಧ್ಯಕ್ಷರಾದ ವೆಂಕಟ್ರಮಣ, ಪ್ರಧಾನ ಕಾರ್ಯದರ್ಶಿ ಚರಣ್ ಕುಮಾರ್ ಪಾಲಾರು ಮಾವಜಿ, ಕೋಶಾಧಿಕಾರಿ ಮೋಹನ್ ಇಳಂದಿಲ, ತರುಣ ಘಟಕದ ಅಧ್ಯಕ್ಷರಾದ ಗಣೇಶ್ ಪಾಲಾರುಮೂಲೆ, ಅಕಾಡೆಮಿ ಸದಸ್ಯರು ಇತರರು ಇದ್ದರು.