- ಮಾಜಿ ಪ್ರಧಾನಮಂತ್ರಿ ದಿ. ಇಂದಿರಾಗಾಂಧಿ ಪುಣ್ಯ ಸ್ಮರಣೆ । ಸರ್ದಾರ್ ವಲ್ಲಭಬಾಯಿ ಪಟೇಲರ 150ನೇ ಜನ್ಮ ದಿನಾಚರಣೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಉಕ್ಕಿನ ಮಹಿಳೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಹಾಗೂ ಮಾಜಿ ಉಪ ಪ್ರಧಾನಿ ಸರ್ದಾರ್ ವಲ್ಲಭಬಾಯಿ ಪಟೇಲರ ಸ್ಮರಣೆ ಮಾಡುವ ಮೂಲಕ ಅವರ ಆಶಯಗಳನ್ನು ಈಡೇರಿಸಲು ಪ್ರತಿ ಯೊಬ್ಬರೂ ಪಣ ತೊಡಬೇಕೆಂದು ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಕರೆ ನೀಡಿದರು.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಶುಕ್ರವಾರ ಆಯೋಜಿಸಿದ್ದ ಮಾಜಿ ಪ್ರಧಾನಮಂತ್ರಿ ದಿವಂಗತ ಇಂದಿರಾಗಾಂಧಿಯವರ ಪುಣ್ಯ ಸ್ಮರಣೆ ಹಾಗೂ ಸರ್ದಾರ್ ವಲ್ಲಭಬಾಯಿ ಪಟೇಲರ 150ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.ಇಂದಿರಾಗಾಂಧಿ ದಿಟ್ಟ ನಿರ್ಧಾರ ಹಾಗೂ ಹೋರಾಟಗಳಿಂದ ದೇಶದಲ್ಲಿ ಹಲವಾರು ಕ್ರಾಂತಿ ಕಾರಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವುಗಳನ್ನು ಮುನ್ನೆಡೆಸಿಕೊಂಡು ಹೋಗಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಹೇಳಿದರು.ಇಂದಿರಾಗಾಂಧಿ ಅವರು ಅಂದು ಜಾರಿಗೆ ತಂದ 21 ಅಂಶಗಳ ಕಾರ್ಯಕ್ರಮಗಳು ಪ್ರಸ್ತುತವಾಗಿ ಕಾರ್ಯನಿರ್ವಹಿಸುತ್ತಿವೆ. ಉಳುವವನೆ ಭೂ ಒಡೆಯ ಕಾರ್ಯಕ್ರಮ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ ಎಂದರು.ಈ ರಾಷ್ಟ್ರವನ್ನು ನೂರಾರು ಸಂಸ್ಥಾನಗಳಿಂದ ಒಗ್ಗೂಡಿಸುವಲ್ಲಿ ಕಾರಣಕರ್ತರಾದ ಮಾಜಿ ಉಪ ಪ್ರಧಾನಿ ಹಾಗೂ ಉಕ್ಕಿನ ಮನುಷ್ಯ ಎಂದೇ ಕರೆಸಿಕೊಂಡಿದ್ದ ಸರ್ದಾರ್ ವಲ್ಲಭಬಾಯಿ ಪಟೇಲ್ ಭಾರತ ಸದಾ ಏಕೀಕರಣ ಶಕ್ತಿಯಾಗಿ ಹೊರಹೊಮ್ಮಲು ಕಾರಣಕರ್ತರಾಗಿದ್ದಾರೆ ಎಂದು ಹೇಳಿದರು.ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ಸ್ವಾತಂತ್ರ್ಯ ಬಂದ ನಂತರ ಭಾರತ ದೇಶದಲ್ಲಿ ಇಷ್ಟೊಂದು ಕ್ರಾಂತಿಕಾರಕ ಬದಲಾವಣೆ ಕಂಡಿರುವುದು ಇಂದಿರಾಗಾಂಧಿಯವರು ಪ್ರಧಾನ ಮಂತ್ರಿ ಆದ ಸಂದರ್ಭದಲ್ಲಿ ಮಾತ್ರ ಎಂದು ಹೇಳಿದರು.ಜನರ ಹಿತಕ್ಕಾಗಿ ಯಾರು ದುಡಿದಿರುತ್ತಾರೋ ಅವರನ್ನು ರಾಷ್ಟ್ರ ಗುರುತು ಮಾಡುತ್ತದೆ. ಇಂದಿರಾಗಾಂಧಿ ಹಾಗೂ ಸರ್ದಾರ್ ವಲ್ಲಭಬಾಯಿ ಪಟೇಲರಂತಹ ಮಹಾನ್ ನಾಯಕರನ್ನು ನೆನಪು ಮಾಡಿಕೊಳ್ಳುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.ಇಂದಿರಾಗಾಂಧಿಯವರು ತನ್ನ ಅಧಿಕಾರದ ಅವಧಿಯಲ್ಲಿ ಉತ್ತಮ ಜನಪರವಾದ ಅಭಿವೃದ್ಧಿ ಕಾರ್ಯ ಗಳನ್ನು ಮಾಡಿದ್ದು, ಅವುಗಳು ಇಂದು ಉಳಿದಿವೆ. ಅವುಗಳನ್ನು ನಾವುಗಳು ಜೀವನದಲ್ಲಿ ಬಳಸಿಕೊಳ್ಳುವಂತೆ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿ, ಇಂದಿರಾಗಾಂಧಿಯವರು ದೇಶದ ಉಳಿವಿಗೆ ತನ್ನ ಪ್ರಾಣ ತ್ಯಜಿಸಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮಕ್ಕೆ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ದೇಶದ ಐಕ್ಯತೆ, ಅಖಂಡತೆಗೆ ಹೋರಾಡಿದ್ದಾರೆ. ಅವರ ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ಎಲ್ಲರೂ ಸಾಗಬೇಕು ಎಂದು ತಿಳಿಸಿದರು.ಸವಿತಾ ಸಮಾಜದವರು ತಮ್ಮ ಜೀವಿತ ಕಾಲವೆಲ್ಲ ಈ ಸಮಾಜದ ಎಲ್ಲಾ ಧರ್ಮದವರಿಗೂ ತಮ್ಮ ವೃತ್ತಿ ಸೇವೆ ಮಾಡುತ್ತಾ ಬರುತ್ತಿದ್ದು, ಅವರಿಲ್ಲದಿದ್ದರೆ ಮಾನವ ಕಾಡು ಪ್ರಾಣಿಗಳ ಹಾಗೆ ವಿಚಿತ್ರವಾಗಿರಬೇಕಿತ್ತು. ಇದನ್ನುಅರಿಯದ ಸಿ.ಟಿ.ರವಿ ಸವಿತಾ ಸಮಾಜಕ್ಕೆ ಅವಹೇಳನಕಾರಿ ಪದಗಳನ್ನು ಬಳಸಿ ನೋವುಂಟು ಮಾಡಿದ್ದು, ಸಿ.ಟಿ.ರವಿ ಸವಿತಾ ಸಮಾಜದ ಕ್ಷಮೆ ಕೇಳುವಂತೆ ಒತ್ತಾಯಿಸಿದರು.ಜವಾಬ್ದಾರಿ ಸ್ಥಾನದಲ್ಲಿರುವ ಸಿ.ಟಿ.ರವಿಯವರು ಈ ಹಿಂದೆ ಬೆಳಗಾವಿ ಅಧಿವೇಶನದಲ್ಲೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೂ ಕೆಟ್ಟ ಪದವನ್ನು ಬಳಸುವ ಮೂಲಕ ತಮ್ಮ ಬಾಯಿ ಸರಿಯಿಲ್ಲ ಎಂಬಂತೆ ನಡೆದುಕೊಂಡಿದ್ದು, ಮತ್ತೊಮ್ಮೆ ಸವಿತಾ ಸಮಾಜಕ್ಕೂ ಅವಹೇಳಕಾರಿ ಪದ ಬಳಸಿ ತನ್ನ ಮನಃಸ್ಥಿತಿ ಮತ್ತು ಯೋಗ್ಯತೆ ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಪಿ.ತನೋಜ್‌ಕುಮಾರ್ ನಾಯ್ಡು, ಚಿಕ್ಕಮಗಳೂರು ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ಬೆಟ್ಟಗೆರೆ ಪ್ರವೀಣ್, ಮುಖಂಡರಾದ ಎಚ್.ಇ.ಪ್ರಕಾಶ್, ರಾಘವೇಂದ್ರ, ರಾಮಣ್ಣ, ಸೋಮಶೇಖರ್, ಸಂತೋಷ್, ರಾಜಶೇಖರ್, ಸುನೀಲ್, ರಸೂಲ್‌ಖಾನ್, ಬಾಬು, ಸುರೇಶ್‌ಕುಮಾರ್, ನಾಗೇಶ್ ರಾಜ್ ಅರಸ್, ತಂಬಿ, ಜಿಯಾ ಇದ್ದರು.31 ಕೆಸಿಕೆಎಂ 1ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಮಾಜಿ ಪ್ರಧಾನಮಂತ್ರಿ ದಿ. ಇಂದಿರಾ ಗಾಂಧಿಯವರ ಪುಣ್ಯ ಸ್ಮರಣೆ ಹಾಗೂ ಸರ್ದಾರ್ ವಲ್ಲಭಬಾಯಿ ಪಟೇಲರ 150ನೇ ಜನ್ಮ ದಿನಾಚರಣೆ ನಡೆಯಿತು.