ಬೆಂಗಳೂರು : ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಬೇರೆ ಜಿಲ್ಲೆಗಳಿಗೆ ಭಾರೀ ಪ್ರಮಾಣದಲ್ಲಿ ಜನರು ತೆರಳಿದ ಪರಿಣಾಮ ಮೆಜೆಸ್ಟಿಕ್ ಸೇರಿದಂತೆ ನಗರ ಪ್ರಮುಖ ನಿಲ್ದಾಣಗಳಲ್ಲಿ ಜನದಟ್ಟಣೆ ಹೆಚ್ಚುವಂತಾಗಿತ್ತು.
ವಾರಾಂತ್ಯ ಹಾಗೂ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಬೇರೆ ನಗರ, ಪಟ್ಟಣಗಳಿಗೆ ತೆರಳುವವರ ಸಂಖ್ಯೆ ಶುಕ್ರವಾರದಿಂದಲೇ ಹೆಚ್ಚಾಗಿತ್ತು. ಅದರ ಪರಿಣಾಮ ಶುಕ್ರವಾರ ರಾತ್ರಿ ಮೆಜೆಸ್ಟಿಕ್, ಶಾಂತಿನಗರ, ಮೈಸೂರು ರಸ್ತೆ ಬಸ್ ನಿಲ್ದಾಣ ಸೇರಿದಂತೆ ಪ್ರಯಾಣಿಕರ ಪಿಕಪ್ ಪಾಯಿಂಟ್‌ಗಳಲ್ಲಿ ಜನರ ಸಂಖ್ಯೆ ಹೆಚ್ಚಾಗಿತ್ತು. ಆ ಕಾರಣದಿಂದಾಗಿ ಮೆಜೆಸ್ಟಿಕ್, ಮೈಸೂರು ರಸ್ತೆ, ತುಮಕೂರು ರಸ್ತೆ, ಕನಕಪುರ ರಸ್ತೆ, ಹೊಸೂರು ರಸ್ತೆ ಸೇರಿದಂತೆ ನಗರ ಹೊರಭಾಗಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು.
ಪ್ರಯಾಣಿಕರ ಒತ್ತಡ ಹೆಚ್ಚಲಿದೆ ಎಂದು ಮೊದಲೇ ತಿಳಿದಿದ್ದ ಕೆಎಸ್ಸಾರ್ಟಿಸಿ ಹಬ್ಬಕ್ಕಾಗಿ ಹೆಚ್ಚುವರಿಯಾಗಿ 1,500 ಬಸ್‌ಗಳನ್ನು ಕಾರ್ಯಾಚರಣೆ ಮಾಡಿತು. ಅಲ್ಲದ, ಸಂಜೆ 6 ಗಂಟೆಯಿಂದಲೇ ಪ್ರಯಾಣಿಕರು ಬಸ್ ನಿಲ್ದಾಣಗಳತ್ತ ಬಂದ ಪರಿಣಾಮ ಅವರನ್ನು ನಿಯಂತ್ರಿಸಲು ಹಾಗೂ ಸುಗಮವಾಗಿ ಬಸ್ ಸೇವೆ ನೀಡುವ ಸಲುವಾಗಿ ಪ್ರಮುಖ ನಿಲ್ದಾಣಗಳಲ್ಲಿ ಹೆಚ್ಚುವರಿ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಅಲ್ಲದೆ, ಬಸ್ ನಿಲ್ದಾಣಕ್ಕೆ ಬರುವವರ ಸಂಖ್ಯೆ ಹೆಚ್ಚಿದ್ದ ಕಾರಣದಿಂದಾಗಿ ಬಿಎಂಟಿಸಿ ಯಶವಂತಪುರ, ಬನಶಂಕರಿ, ಚಾಮರಾಜಪೇಟೆ ಸೇರಿದಂತೆ ಮತ್ತಿತರ ಕಡೆಗಳಿಂದ ಪ್ರಮುಖ ನಿಲ್ದಾಣಗಳಿಗೆ ಹೆಚ್ಚಿನ ಬಸ್‌ಗಳಲ್ಲಿ ಸೇವೆ ನೀಡಿತು.
ಎಚ್ಚರಿಕೆ ನಡುವೆಯೂ ದುಬಾರಿ ದರ ವಸೂಲಿ
ಸಾರಿಗೆ ಇಲಾಖೆ ಕಾರ್ಯಾಚರಣೆ ಮತ್ತು ಎಚ್ಚರಿಕೆ ನಡುವೆಯೂ ಖಾಸಗಿ ಬಸ್‌ಗಳು ಪ್ರಯಾಣಿಕರಿಂದ ದುಬಾರಿ ಪ್ರಯಾಣ ದರ ವಸೂಲಿ ಮಾಡಿದವು. ಸಾಮಾನ್ಯ ದಿನಗಳಲ್ಲಿ ಪಡೆಯುವ ಪ್ರಯಾಣ ದರಕ್ಕಿಂತ 3 ಪಟ್ಟು ಹೆಚ್ಚಿನ ಪ್ರಯಾಣ ದರವನ್ನು ಪ್ರಯಾಣಿಕರಿಂದ ವಸೂಲಿ ಮಾಡಲಾಯಿತು. ಸಾರಿಗೆ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತೇವೆ ಎಂಬ ಎಚ್ಚರಿಕೆ ನೀಡಿದರಾದರೂ, ಅದಕ್ಕೂ ಖಾಸಗಿ ಬಸ್ ಮಾಲೀಕರು ಜಗ್ಗದೇ ಬೇಕಾಬಿಟ್ಟಿಯಾಗಿ ಪ್ರಯಾಣ ದರ ಏರಿಕೆ ಮಾಡಿ ವಸೂಲಿ ಮಾಡಿದರು.