ಕನ್ನಡಪ್ರಭ ವಾರ್ತೆ, ಶಿಕಾರಿಪುರ ಮಠ, ಮಂದಿರಗಳು ನಾಡಿನಾದ್ಯಂತ ಲಕ್ಷಾಂತರ ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರವನ್ನು ನೀಡುವ ಶ್ರೇಷ್ಠ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಮಠ, ಮಂದಿರದ ಕಾರ್ಯ ಶಿಕ್ಷಣ ಇಲಾಖೆಗೆ ಮಾದರಿಯಾಗಿದ್ದು, ಇಂಥ ಶಿಕ್ಷಣ ಇಲಾಖೆ ಮೂಲಕ ನಾಡಿನ ಜನತೆಯ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ಪರಮಪೂಜ್ಯರ ಆಶೀರ್ವಾದ ಬಹುಮುಖ್ಯ ಕಾರಣವಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ತಾಲೂಕಿನ ಕಾಳೇನಹಳ್ಳಿಯ ಶಿವಯೋಗ ಮಂದಿರದಲ್ಲಿ ಶನಿವಾರ ಸಂಜೆ ಮಹಾತಪಸ್ವಿ ಕಾಯಕಯೋಗಿ ಲಿಂ. ರುದ್ರಮುನಿ ಮಹಾಶಿವಯೋಗಿಗಳ 35ನೇ ವರ್ಷದ ಪುಣ್ಯಾರಾಧನೆ ಅಂಗವಾಗಿ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಾಡಿನಲ್ಲಿನ ಬಹುತೇಕ ಮಠ ಮಂದಿರಗಳು ಸಮಾಜದ ಜಾಗೃತ ಪ್ರಜ್ಞೆಯಾಗಿ ಕಾರ್ಯನಿರ್ವಹಿಸುತ್ತಿವೆ. ಬಲಿಷ್ಠ ನಾಡು ಕಟ್ಟುವ ದಿಸೆಯಲ್ಲಿ ಮಠ- ಮಂದಿರಗಳು ಸಲ್ಲಿಸುತ್ತಿರುವ ಸಮಾಜಮುಖಿ ಕಾರ್ಯ ವೈಖರಿಯಿಂದ ಸರ್ಕಾರ ಕಲಿಯವುದು ಬಹಳಷ್ಟಿದೆ ಎಂದು ಪ್ರಶಂಸಿಸಿದ ಅವರು, ಪ್ರಜ್ಞಾವಂತರು ಶಿಕ್ಷಿತರು ದೇಶದ ಆಸ್ತಿಯಾಗಿದ್ದಾರೆ. ಈ ದಿಸೆಯಲ್ಲಿ ಸುಶಿಕ್ಷಿತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ಮಠ ಮಂದಿರದ ಕಾರ್ಯ ಅತ್ಯಂತ ಶ್ರೇಷ್ಠವಾಗಿದೆ ಎಂದು ಬಣ್ಣಿಸಿದರು. ಲಕ್ಷಾಂತರ ಮಕ್ಕಳಿಗೆ ಉಚಿತ ದಾಸೋಹದ ಜತೆಗೆ ಶಿಕ್ಷಣದ ಮೂಲಕ ಸಂಸ್ಕಾರವನ್ನು ನೀಡುವ ಶ್ರೇಷ್ಟ ಕಾರ್ಯದಲ್ಲಿ ನಾಡಿನ ಬಹುತೇಕ ಮಠಗಳು ಅನಾದಿ ಕಾಲದಿಂದ ಸದ್ದಿಲ್ಲದೆ ತೊಡಗಿಸಿಕೊಂಡಿವೆ. ಶಿಕ್ಷಣ ಇಲಾಖೆಗೆ ಮಾದರಿಯಾದ ಈ ಕಾರ್ಯದಿಂದ ಇಲಾಖೆ ಕಾರ್ಯಭಾರದ ಒತ್ತಡ ಕಡಿಮೆಯಾಗಿದೆ. ದೇವರ ಸಮನಾದ ಮಕ್ಕಳಿಗೆ ವಿದ್ಯೆ ನೀಡುವ ಶಿಕ್ಷಣ ಇಲಾಖೆಗೆ ಸಚಿವನಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ಸೌಭಾಗ್ಯ ಎಂದ ಅವರು, ಶ್ರೀ ಮಠದ ಎಲ್ಲ ಕಾರ್ಯಗಳಿಗೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ದಿವ್ಯ ಸಾನ್ನಿಧ್ಯ ವಹಿಸಿದ್ದ ಹುಬ್ಬಳ್ಳಿ ಮೂರು ಸಾವಿರ ಮಠದ ಶ್ರೀ ಗುರು ರಾಜಯೋಗೀಂದ್ರ ಸ್ವಾಮೀಜಿ ಆಶೀರ್ವದಿಸಿ, ಕಾಯಕಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದ ಲಿಂ.ರುದ್ರಮುನಿ ಶ್ರೀಗಳು ಎಂದಿಗೂ ಆಡಂಭರ, ಅದ್ಧೂರಿ ಜನಜಾತ್ರೆ ವೈಭವದ ಸಭೆ ನಡೆಸಲಿಲ್ಲ. ಶ್ರದ್ಧೆಯಿಂದ ಲಿಂಗಪೂಜೆಯಲ್ಲಿ ತಲ್ಲೀನರಾಗಿದ್ದರು. ಅವರು ನುಡಿದ ಪ್ರತಿ ಮಾತು ನಂಬಿದ ಭಕ್ತಸಮೂಹಕ್ಕೆ ಆಶೀರ್ವಾದವಾಯಿತು. ನಡೆದಾಡಿದ ಜಾಗ ಪುಣ್ಯ ಕ್ಷೇತ್ರವಾಯಿತು ಎಂದರು. ಅಧ್ಯಾತ್ಮದ ಶಕ್ತಿಗಳಿಸಿದವನು ಅನುಭಾವಿಯಾಗಿ ಜಗತ್ತಿಗೆ ಮಾರ್ಗದರ್ಶಕನಾಗುತ್ತಾನೆ. ಉನ್ನತ ಪದವಿ ಗಳಿಸಿದ ಸ್ವಾಮಿ ವಿವೇಕಾನಂದರು ಪದವಿ ಇಲ್ಲದ ರಾಮಕೃಷ್ಣ ಪರಮಹಂಸರನ್ನು ಗುರು ಎಂದು ಪರಿಗಣಿಸಿದ್ದರು. ಇದರಿಂದಾಗಿ ಸಹಸ್ರಾರು ಯುವಕರು ಆದ್ಯಾತ್ಮದ ಸಾಧಕರಾಗಿ ಗುರುತಿಸಿಕೊಂಡಿದ್ದಾರೆ ಶಿಕ್ಷಣದ ಜತೆಗೆ ಸಂಸ್ಕಾರ ನಿಜವಾದ ಸಂಪತ್ತು ಈ ದಿಸೆಯಲ್ಲಿ ಸಂಸ್ಕಾರವನ್ನು ತಿಳಿಸಿಕೊಡುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಹಾವೇರಿ ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ,ಕೂಡಲ ಗುರುನಂಜೇಶ್ವರ ಮಠದ ಶ್ರೀ ಮಹೇಶ್ವರ ಸ್ವಾಮೀಜಿ, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಬಿ.ವೈ .ವಿಜಯೇಂದ್ರ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಎನ್.ವಿ. ಈರೇಶ್, ಮುಖಂಡ ನಾಗರಾಜಗೌಡ, ಕೆ.ಜಿ. ರುದ್ರಪ್ಪಯ್ಯ ಸಹಿತ ಕೊಟ್ಟ, ಕಾಳೇನಹಳ್ಳಿ, ಕಪ್ಪನಹಳ್ಳಿಯ ಸಹಸ್ರಾರು ಭಕ್ತರು ಹಾಜರಿದ್ದರು. - - - ಜಿಲ್ಲೆಯ ರಾಜಕೀಯ ಕ್ಷೇತ್ರದಲ್ಲಿ ಪರಸ್ಪರ ವಿರೋಧಿಗಳು ಎನಿಸಿರುವ ಸಚಿವ ಮಧು ಬಂಗಾರಪ್ಪ ಹಾಗೂ ಸಂಸದ ರಾಘವೇಂದ್ರ, ಶಾಸಕ ವಿಜಯೇಂದ್ರ ವೇದಿಕೆಯಲ್ಲಿ ಅಕ್ಕಪಕ್ಕದಲ್ಲಿ ಕುಳಿತು ಎಲ್ಲ ವಿರೋಧ ಮರೆತು ಒಂದಾಗಿಸುವಲ್ಲಿ ಲಿಂ.ಶ್ರೀಗಳ ಪುಣ್ಯಾರಾಧನೆ ಕಾರ್ಯಕ್ರಮ ಸಾಕ್ಷಿಯಾಗಿತ್ತು. - - - -29ಕೆಎಸ್.ಕೆಪಿ2: ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿ ಶಿವಯೋಗಾಶ್ರಮದ ಲಿಂ.ರುದ್ರಮುನಿ ಶ್ರೀಗಳ ಪುಣ್ಯಾರಾಧನೆ ಸಭಾ ಕಾರ್ಯಕ್ರಮಕ್ಕೆ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಿದರು.