ಶಿವಾನಂದ ಗೊಂಬಿ
ಖರೀದಿಸಿ ತಿಂಗಳ ಬಳಿಕ ಗುಣಮಟ್ಟ ಸರಿ ಇಲ್ಲ ಎಂದು ತಿರಸ್ಕರಿಸಿದ ಹೆಸರು ಕಾಳುಗಳ ದುಡ್ಡು ಕೊಡುವ ವಿಚಾರ ಜಿಲ್ಲಾಡಳಿತವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅತ್ತ ರೈತರು ಹೋರಾಟದಿಂದ ಹಿಂದೆ ಸರಿಯುತ್ತಿಲ್ಲ. ಇತ್ತ ಅವರಿಗೆ ಯಾರು ದುಡ್ಡು ಕೊಡಬೇಕು ಎಂಬುದು ತಿಳಿಯದಂತಾಗಿ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿದೆ. ನಿರ್ದೇಶನ ನೀಡುವಂತೆ ಕೋರಿ ಇದೀಗ ಮತ್ತೆ ಸರ್ಕಾರಕ್ಕೆ ಜಿಲ್ಲಾಡಳಿತ ಪತ್ರ ಬರೆದಿದೆ. ಇದರಿಂದ ರೈತರಿಗೆ ದುಡ್ಡು ಕೊಡುವ ವಿಚಾರ ಮತ್ತೆ ಸರ್ಕಾರದ ಅಂಗಳಕ್ಕೆ ತಲುಪಿದೆ.
ಏನಾಗಿದೆ?ರೈತರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಿ ರೈತರಿಂದ ಹೆಸರನ್ನು ಖರೀದಿಸಲಾಗಿತ್ತು. ಅದರಂತೆ ಬ್ಯಾಹಟ್ಟಿ ಖರೀದಿ ಕೇಂದ್ರದಲ್ಲಿ (ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ) ಬ್ಯಾಹಟ್ಟಿ, ಕುಸುಗಲ್, ಸುಳ್ಳ, ಕಿರೇಸೂರ, ಅಮರಗೋಳ ಗ್ರಾಮಗಳ 95 ಜನ ರೈತರಿಂದ 992 ಕ್ವಿಂಟಲ್ ಹೆಸರು ಖರೀದಿಸಲಾಗಿತ್ತು. ಖರೀದಿಸಿ ಅದರ ರಸೀದಿಯನ್ನು ರೈತರಿಗೆ ನೀಡಲಾಗಿತ್ತು. ಅದಾದ ಬಳಿಕ ಮೂರ್ನಾಲ್ಕು ವಾರದ ಬಳಿಕ ಹೆಸರು ಗುಣಮಟ್ಟದಲ್ಲಿಲ್ಲ ಎಂದು ತಿರಸ್ಕರಿಸಿ ವಾಪಸ್ ತೆಗೆದುಕೊಂಡು ಹೋಗಿ ಎಂದು ತಿಳಿಸಲಾಗಿತ್ತು. ಖರೀದಿಸಿದ ತಿಂಗಳ ಬಳಿಕ ತಿರಸ್ಕರಿಸಿದ್ದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು.
ಹೀಗಾಗಿ ಜು. 30ರಂದು ಜಿಲ್ಲಾಡಳಿತ ಸರ್ಕಾರಕ್ಕೆ ಮತ್ತೊಂದು ಪತ್ರ ಬರೆದಿದ್ದು, ಹೆಸರು ಖರೀದಿ ಪ್ರಕರಣದ ವಿವರ ತಿಳಿಸಿ, ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಬ್ಯಾಹಟ್ಟಿ ಗೋದಾಮಿನಲ್ಲಿರುವ ಹೆಸರು ಖರೀದಿಸಿ ರೈತರಿಗೆ ದುಡ್ಡು ಕೊಡವಂತೆ ಸಂಬಂಧಪಟ್ಟ ಸಂಸ್ಥೆಗೆ ಸೂಚಿಸಬೇಕು ಎಂದು ಮನವಿ ಮಾಡಿಕೊಂಡಿದೆ. ಹೀಗಾಗಿ ಹೆಸರಿನ ದುಡ್ಡು ಕೊಡುವ ವಿಚಾರದ ಚೆಂಡು ಇದೀಗ ಸರ್ಕಾರದ ಅಂಗಳಕ್ಕೆ ಹೋದಂತಾಗಿದೆ.
ಈ ನಡುವೆ ಸಂಸ್ಥೆಯಿಂದ ಕೊಡಿಸುತ್ತಾರೋ, ಸರ್ಕಾರ ಕೊಡುತ್ತದೆಯೋ ಗೊತ್ತಿಲ್ಲ. ನಮ್ಮ ಹೆಸರನ್ನು ಖರೀದಿಸಿ, ತಿಂಗಳಾದ ಬಳಿಕ ತಿರಸ್ಕರಿಸಲಾಗಿದೆ. ಇದು ಖಂಡನೀಯ. ನಮಗೆ ನಮ್ಮ ಹೆಸರಿನ ದುಡ್ಡು ಬರುವ ವರೆಗೂ ಹೋರಾಟವನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಅಲ್ಲಿಯ ವರೆಗೂ ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂಬುದು ರೈತರ ಎಚ್ಚರಿಕೆ.
ಗುರು ರಾಯನಗೌಡರ, ಹೋರಾಟಗಾರ