ಕನ್ನಡಪ್ರಭ ವಾರ್ತೆ ಹಾಸನ
ಹಾಸನ-ಬೇಲೂರು ಹೆದ್ದಾರಿಯ ಅಭಿವೃದ್ಧಿಗೆ ಶೀಘ್ರ ಅನುಮೋದನೆ ನೀಡಿ ಕಾಮಗಾರಿಯನ್ನು ಆದ್ಯತೆ ಮೇಲೆ ಕೈಗೆತ್ತಿಕೊಳ್ಳುವಂತೆ ಶ್ರೇಯಸ್ ಎಂ.ಪಟೇಲ್ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದ್ದರು. ಬಳಿಕ ಸಂಬಂಧಪಟ್ಟ ಸಚಿವಾಲಯ ಮತ್ತು ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಯೋಜನೆಯ ತ್ವರಿತ ಅನುಮೋದನೆಗೆ ಒತ್ತಾಯಿಸಿದ್ದರು. ಇದೀಗ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ರಾಷ್ಟ್ರೀಯ ಹೆದ್ದಾರಿ ೩೭೩ರ ವಿನ್ಯಾಸ ಸರಪಳಿ ಕಿ.ಮೀ. ೨೭.೭೮೦ರಿಂದ ಕಿ.ಮೀ. ೫೭.೩೨೦ರವರೆಗಿನ ಒಟ್ಟು ೨೯.೫೪ ಕಿ.ಮೀ. ಹಾಸನ-ಬೇಲೂರು ರಸ್ತೆ ಭಾಗವನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ೪೭೦.೮೫ ಕೋಟಿ ಮಂಜೂರು ಮಾಡಿದೆ.
ಈ ಯೋಜನೆಯನ್ನು ಇಪಿಸಿ ಮಾದರಿಯಲ್ಲಿ ಎನ್‌ಎಚ್(ಒ) ವಾರ್ಷಿಕ ಯೋಜನೆ ೨೦೨೨-೨೩ರ ಪ್ಯಾಕೇಜ್-೧೧ ಅಡಿಯಲ್ಲಿ ಅನುಷ್ಠಾನಗೊಳಿಸಲಾಗುತ್ತದೆ ಎಂದು ಸಂಸದರು ತಿಳಿಸಿದ್ದಾರೆ. ಪರಿಷ್ಕೃತ ಯೋಜನೆಯಡಿ ಭೂಸ್ವಾಧೀನಕ್ಕಾಗಿ ೧೧೫.೩೦ ಕೋಟಿ ಹಾಗೂ ಭೂಸ್ವಾಧೀನ ಸೇರಿದಂತೆ ಪೂರ್ವ ನಿರ್ಮಾಣ ಚಟುವಟಿಕೆಗಳಿಗೆ ಒಟ್ಟು ೧೨೮.೯೦ ಕೋಟಿ ಮೀಸಲಿಡಲಾಗಿದೆ. |ರಾಜ್ಯ ಲೋಕೋಪಯೋಗಿ ಇಲಾಖೆ ಭೂ ಸ್ವಾಧೀನ ಪರಿಹಾರ ವಿತರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ೨೦೨೬ರ ಅಕ್ಟೋಬರ್ ೩೧ರೊಳಗೆ ಕಾಮಗಾರಿಯ ನಿಗದಿತ ಪ್ರಾರಂಭ ದಿನಾಂಕವನ್ನು ಅಂತಿಮಗೊಳಿಸಬೇಕು ಎಂದು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಯೋಜನೆಯ ಕಾಮಗಾರಿಯನ್ನು ೨೦೨೯-೩೦ನೇ ಆರ್ಥಿಕ ವರ್ಷದೊಳಗೆ ಪೂರ್ಣಗೊಳಿಸುವ ಗುರಿ ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.ಕೇಂದ್ರಕ್ಕೆ ಧನ್ಯವಾದ:
ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.