ಮಾರ್ಚ್ ವೇಳೆಗೆ ಕಾಮಗಾರಿ ಆರಂಭಗೊಳ್ಳದಿದ್ದರೆ ಹಣ ವಾಪಸ್: ಎಚ್‌ಡಿಕೆ

KannadaprabhaNewsNetwork |  
Published : Nov 29, 2026, 01:30 AM IST
೨೮ಕೆಎಂಎನ್‌ಡಿ-೨ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿದರು. | Kannada Prabha

ಸಾರಾಂಶ

ಈ ಯೋಜನೆ ಜಾರಿಯಿಂದ ನನಗೆ ಹೆಸರು ಬರುತ್ತದೆ ಎಂದು ಭಾವಿಸಿದ್ದರೆ ಅವರೇ ಭೂಮಿ ಕೊಟ್ಟು ಅವರೇ ಶಂಕುಸ್ಥಾಪನೆ ಮಾಡಲಿ. ನನ್ನದೇನೂ ಅಭ್ಯಂತರವಿಲ್ಲ. ಎಆರ್‌ಎಐ ಪರೀಕ್ಷಾ ಕೇಂದ್ರ ಮಂಡ್ಯದಿಂದ ಕೈತಪ್ಪಿ ಹೋಗಬಾರದು ಎನ್ನುವುದಷ್ಟೇ ನನ್ನ ಆಶಯ. ಅದನ್ನು ಉಳಿಸಿಕೊಂಡು ಮಂಡ್ಯವನ್ನು ಕೈಗಾರಿಕಾ ಹಬ್ ಮಾಡಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಬೇಕೆನ್ನುವುದು ಪ್ರಮುಖ ಉದ್ದೇಶವಾಗಿದೆ ಎಂದರು.

ಕನ್ನಡಪ್ರಭ ವಾರ್ತೆ, ಮಂಡ್ಯ

ಮುಂದಿನ ಮಾರ್ಚ್ ವೇಳೆಗೆ ಎಆರ್‌ಎಐ ಪರೀಕ್ಷಾ ಕೇಂದ್ರದ ಕಾಮಗಾರಿ ಆರಂಭಗೊಳ್ಳದಿದ್ದರೆ ಹಣ ವಾಪಸಾಗಲಿದೆ. ಬೇರೆ ಜಿಲ್ಲೆ ಅಥವಾ ಹೊರರಾಜ್ಯದವರ ಪಾಲಾದರೂ ಆಶ್ಚರ್ಯವಿಲ್ಲ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಆತಂಕದಿಂದ ನುಡಿದರು.

ಜಿಲ್ಲೆಯ ಜನರ ಋಣ ತೀರಿಸಲು ದೊಡ್ಡ ಮಟ್ಟದ ಯೋಜನೆಯೊಂದನ್ನು ಜಾರಿಗೊಳಿಸುವುದಕ್ಕೆ ಮುಂದಾಗಿದ್ದೆ. ಅದರೆ, ಸರ್ಕಾರದಿಂದ ನನಗೆ ನಿರೀಕ್ಷಿತ ಸಹಕಾರ ಸಿಗುತ್ತಿಲ್ಲ. ಎಆರ್‌ಎಐ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಹಾಸನ, ತುಮಕೂರು ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳು, ಆಂಧ್ರಪ್ರದೇಶ, ಮಹಾರಾಷ್ಟ್ರ, ಹರಿಯಾಣದಂತಹ ರಾಜ್ಯಗಳು ರೆಡ್‌ಕಾರ್ಪೆಟ್ ಹಾಕಿಕೊಂಡು ಕುಳಿತಿವೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಯೋಜನೆ ಜಾರಿಯಿಂದ ನನಗೆ ಹೆಸರು ಬರುತ್ತದೆ ಎಂದು ಭಾವಿಸಿದ್ದರೆ ಅವರೇ ಭೂಮಿ ಕೊಟ್ಟು ಅವರೇ ಶಂಕುಸ್ಥಾಪನೆ ಮಾಡಲಿ. ನನ್ನದೇನೂ ಅಭ್ಯಂತರವಿಲ್ಲ. ಎಆರ್‌ಎಐ ಪರೀಕ್ಷಾ ಕೇಂದ್ರ ಮಂಡ್ಯದಿಂದ ಕೈತಪ್ಪಿ ಹೋಗಬಾರದು ಎನ್ನುವುದಷ್ಟೇ ನನ್ನ ಆಶಯ. ಅದನ್ನು ಉಳಿಸಿಕೊಂಡು ಮಂಡ್ಯವನ್ನು ಕೈಗಾರಿಕಾ ಹಬ್ ಮಾಡಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಬೇಕೆನ್ನುವುದು ಪ್ರಮುಖ ಉದ್ದೇಶವಾಗಿದೆ ಎಂದರು.

ಕೈಗಾರಿಕಾ ಹಬ್ ಏನೆಂದು ಗೊತ್ತಿಲ್ಲದವರು ಎಆರ್‌ಎಐ ಪರೀಕ್ಷಾ ಕೇಂದ್ರದ ಬಗ್ಗೆ ಲಘುವಾಗಿ ಮಾತನಾಡುತ್ತಾರೆ. ಅವರಿಗೆ ಗೊತ್ತಿಲ್ಲದಿದ್ದರೆ ಮಹಾರಾಷ್ಟ್ರ, ಆಂಧ್ರಪ್ರದೇಶ, ಉತ್ತರಪ್ರದೇಶಗಳಿಗೆ ಹೋಗಿ ನೋಡಿಕೊಂಡು ಬರಲಿ. ಸುಮ್ಮನೆ ಇಲ್ಲಿ ಕುಳಿತು ಬಾಯಿಚಪಲಕ್ಕೆ ಮಾತನಾಡಬಾರದು. ಸಣ್ಣತನ ಪ್ರದರ್ಶಿಸುವುದರಿಂದ ಏನೂ ಪ್ರಯೋಜನವಿಲ್ಲ. ಭೂಮಿ ಕೊಟ್ಟಿದ್ದೇವೆ ಎಂದು ಬಾಯಿಬಡಿದುಕೊಳ್ಳುವವರು ಯಾವ ರೀತಿಯಲ್ಲಿ ಭೂಮಿಯನ್ನು ಹಸ್ತಾಂತರಿಸಬೇಕೆಂಬ ಬಗ್ಗೆ ಮೊದಲು ತಿಳಿದುಕೊಂಡು ಮಾತನಾಡಲಿ ಎಂದು ಕಾಂಗ್ರೆಸ್ಸಿಗರಿಗೆ ತಿರುಗೇಟು ನೀಡಿದರು.

ರಾಜ್ಯಸರ್ಕಾರ ಎಷ್ಟು ದಿನಗಳೊಳಗೆ ಭೂಮಿಯನ್ನು ಕೊಡಲಿದೆ ಎನ್ನುವುದನ್ನು ಖಚಿತಪಡಿಸಬೇಕು. ಕೆಐಎಡಿಬಿಗೆ ಹಸ್ತಾಂತರಿಸಿದ ಬಳಿಕ ಅವರು ಭೂಮಿಯನ್ನು ಅಭಿವೃದ್ಧಿಪಡಿಸಬೇಕು. ಸದ್ಯದ ಪರಿಸ್ಥಿತಿಯಲ್ಲಿ ಭೂಮಿಯನ್ನು ಕೆಐಎಡಿಬಿಗೆ ಹಸ್ತಾಂತರಿಸಿದರೆ ಯೋಜನೆಗೆ ಅಡಿಗಲ್ಲು ಹಾಕುವುದಕ್ಕೆ ಅನುಕೂಲವಾಗಲಿದೆ. ಇದೇ ರೀತಿ ವಿಳಂಬ ಮಾಡಿದರೆ ಯೋಜನೆ ಕೈತಪ್ಪಿಹೋಗಲಿದೆ. ಅದರಿಂದ ಜಿಲ್ಲೆಗೆ ಅತಿದೊಡ್ಡ ನಷ್ಟವಾಗಲಿದೆ ಎಂದು ಎಚ್ಚರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಮಿಳುನಾಡು ಸರ್ಕಾರ ಹಿಂದೂಗಳ ಕ್ಷಮೆಯಾಚಿಸಲಿ: ಕಾಂತೇಶ್
ತಂದೆ ಮೇಲೆ ಯುವಕರಿಂದ ಹಲ್ಲೆ: ಅಪ್ರಾಪ್ತೆ ಆತ್ಮಹತ್ಯೆ