ಮಗಳಿಗಾಗುತ್ತಿರುವ ಹಿಂಸೆಯನ್ನು ತಪ್ಪಿಸುವುದಕ್ಕೆ ಆಕೆಯ ಪೋಷಕರು ಗ್ರಾಮದ ಮುಖಂಡರೊಟ್ಟಿಗೆ ಶೋಭಿತ್‌ಗೌಡನ ತಂದೆಗೆ ವಿಷಯ ತಿಳಿಸಿ ನಿಮ್ಮ ಮಗನಿಗೆ ಬುದ್ದಿ ಹೇಳುವಂತೆ ತಾಕೀತು ಮಾಡಿದ್ದಾರೆ. ಆದರೂ ಶೋಭಿತ್‌ಗೌಡ ತನ್ನ ನಡವಳಿಕೆಯನ್ನು ಬದಲಿಸಿಕೊಳ್ಳದೆ ಸ್ನೇಹಾಗೆ ತನ್ನನ್ನು ಪ್ರೀತಿಸಿ ಮದುವೆಯಾಗುವಂತೆ ಕಿರುಕುಳ ನೀಡುವುದನ್ನು ಮುಂದುವರಿಸಿದ್ದನು ಎನ್ನಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ತನ್ನನ್ನು ಪ್ರೀತಿಸಿ ಮದುವೆ ಮಾಡಿಕೊಳ್ಳುವಂತೆ ಅಪ್ರಾಪ್ತೆಗೆ ಕಿರುಕುಳ ನೀಡುತ್ತಿದ್ದ ಯುವಕನೊಬ್ಬ ಸ್ನೇಹಿತರ ಜೊತೆಗೂಡಿ ಆಕೆಯ ಮನೆಗೆ ನುಗ್ಗಿ ತಂದೆ- ತಾಯಿ ಮೇಲೆ ಹಲ್ಲೆ ನಡೆಸಿದ್ದರಿಂದ ಮನನೊಂದ ಬಾಲಕಿ ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ಚಂದಗಾಲು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿಂಗರಾಜು ಪುತ್ರಿ ಸ್ನೇಹಾ (೧೭) ಮೃತ ಅಪ್ರಾಪ್ತೆ. ಅದೇ ಗ್ರಾಮದ ಶೋಭಿತ್‌ಗೌಡ ಅಲಿಯಾಸ್ ಚಿಂಟು, ಕೃಷಿಕ್‌ಗೌಡ, ಲೀವಿತ್, ಮನೋಜ್‌ಗೌಡ ಎಂಬುವರೇ ಹಲ್ಲೆ ನಡೆಸಿ ಸ್ನೇಹಾಳ ಸಾವಿಗೆ ಕಾರಣರಾಗಿದ್ದಾರೆ ಎಂದು ಮೃತಳ ತಾಯಿ ರಂಜಿತಾ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆ ವಿವರ:

ಶೋಭಿತ್‌ಗೌಡ ಕಳೆದ ಕೆಲ ದಿನಗಳಿಂದ ಗ್ರಾಮದ ಸ್ನೇಹಾಳನ್ನು ಪ್ರೀತಿಸುತ್ತಿದ್ದನು. ಆದರೆ, ಸ್ನೇಹಾ ಆತನನ್ನು ಇಷ್ಟಪಟ್ಟಿರಲಿಲ್ಲ. ಶೋಭಿತ್‌ಗೌಡ ಆಕೆಯ ಬೆನ್ನಿಗೆ ಬಿದ್ದು ಪ್ರೀತಿಸುವಂತೆ ಒತ್ತಾಯ ಮಾಡುತ್ತಿದ್ದನೆಂದು ಹೇಳಲಾಗಿದೆ. ಆತನ ಪ್ರೀತಿಯನ್ನು ಒಪ್ಪಿಕೊಳ್ಳದೆ ತಿರಸ್ಕರಿಸಿದ್ದಳು. ಆದರೂ ಶೋಭಿತ್‌ಗೌಡ ತನ್ನ ಸ್ನೇಹಿತರ ಜೊತೆಗೂಡಿ ಹೋದಲ್ಲಿ, ಬಂದಲ್ಲೆಲ್ಲಾ ಪ್ರೀತಿಸುವಂತೆ ಕಿರುಕುಳ ನೀಡುತ್ತಲೇ ಇದ್ದರು. ಇವರ ಕಿರುಕುಳ ತಾಳಲಾರದೆ ಸ್ನೇಹಾ ತನ್ನ ತಂದೆ- ತಾಯಿಯ ಬಳಿ ಈ ವಿಚಾರವನ್ನು ಹೇಳಿಕೊಂಡಿದ್ದಾಳೆ.

ಮಗಳಿಗಾಗುತ್ತಿರುವ ಹಿಂಸೆಯನ್ನು ತಪ್ಪಿಸುವುದಕ್ಕೆ ಆಕೆಯ ಪೋಷಕರು ಗ್ರಾಮದ ಮುಖಂಡರೊಟ್ಟಿಗೆ ಶೋಭಿತ್‌ಗೌಡನ ತಂದೆಗೆ ವಿಷಯ ತಿಳಿಸಿ ನಿಮ್ಮ ಮಗನಿಗೆ ಬುದ್ದಿ ಹೇಳುವಂತೆ ತಾಕೀತು ಮಾಡಿದ್ದಾರೆ. ಆದರೂ ಶೋಭಿತ್‌ಗೌಡ ತನ್ನ ನಡವಳಿಕೆಯನ್ನು ಬದಲಿಸಿಕೊಳ್ಳದೆ ಸ್ನೇಹಾಗೆ ತನ್ನನ್ನು ಪ್ರೀತಿಸಿ ಮದುವೆಯಾಗುವಂತೆ ಕಿರುಕುಳ ನೀಡುವುದನ್ನು ಮುಂದುವರಿಸಿದ್ದನು ಎನ್ನಲಾಗಿದೆ.

ಶುಕ್ರವಾರ ಸಂಜೆ ಶೋಭಿತ್‌ಗೌಡನ ಸ್ನೇಹಿತರಾದ ಕೃಷಿಕ್‌ಗೌಡ, ಲೀವಿತ್, ಮನೋಜ್‌ಗೌಡ ಅವರು ಸ್ನೇಹಾಳ ಮನೆ ಬಳಿಗೆ ಬಂದು ಗಲಾಟೆ ಮಾಡಿದ್ದಾರೆ. ಮನೆಯೊಳಗೆ ನುಗ್ಗಿ ಮನೆಯಲ್ಲಿದ್ದ ಸ್ನೇಹಾ ಮತ್ತು ಆಕೆಯ ಪೋಷಕರನ್ನು ಬೀದಿಗೆ ಎಳೆತಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನೀನು ಶೋಭಿತ್‌ಗೌಡನನ್ನು ಮದುವೆಯಾಗಬೇಕು, ಇಲ್ಲದಿದ್ದರೆ ಸಾಯಬೇಕು ಎಂದು ಕೂಗಾಡಿದ್ದಾರೆ. ಆಕೆಯ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಅಷ್ಟೂ ಸಾಲದೆಂಬಂತೆ ಕೃಷಿಕ್‌ಗೌಡ ಕುಡುಗೋಲಿನಿಂದ ಸ್ನೇಹಾಳ ತಂದೆ ನಿಂಗರಾಜು ಮೇಲೆ ಬೀಸಿ ಹಣೆಗೆ ಗಾಯ ಮಾಡಿದ್ದ. ಇದರಿಂದ ಮನನೊಂದ ಸ್ನೇಹಾ ಮನೆಯ ಕೊಠಡಿಯೊಳಗೆ ತೆರಳಿ ಸೀರೆಯಿಂದ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾಳೆ. ತಕ್ಷಣವೇ ಅಕ್ಕ- ಪಕ್ಕದವರು ಬಾಗಿಲು ಮುರಿದು ಒಳಗೆ ತೆರಳಿ ಆಕೆಯನ್ನು ರಕ್ಷಿಸಿ, ಮಿಮ್ಸ್ ಆಸ್ಪತ್ರೆಗೆ ಕರೆತಂದರಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ರಂಜಿತಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಶೋಭಾರಾಣಿ ಇತರೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಶಿವಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.