ಬಹುಸಂಖ್ಯಾತ ಬಡ ಈಡಿಗರ ಸ್ವಾಭಿಮಾನವನ್ನು ಕುಗ್ಗಿಸಿ, ಸ್ವಾರ್ಥ ಸಾಧನೆಗೈದ ಕೀರ್ತಿ ಆರ್ಯ ಈಡಿಗ ಸಭಾದ ಅಧ್ಯಕ್ಷ ತಿಪ್ಪೇಗೌಡ ಹಾಗೂ ಅವರ ಜೊತೆಗಿರುವ ಕಳ್ಳರಿಗೆ ಸಲ್ಲುತ್ತದೆ ಎಂದು ಬ್ರಹ್ಮನಾರಾಯಣ ಶಕ್ತಿಪೀಠಾಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಕಟುವಾಗಿ ಟೀಕಿಸಿದರು.

ಕನ್ನಡಪ್ರಭವಾರ್ತೆ ಚಿಕ್ಕನಾಯಕನಹಳ್ಳಿ

ಬಹುಸಂಖ್ಯಾತ ಬಡ ಈಡಿಗರ ಸ್ವಾಭಿಮಾನವನ್ನು ಕುಗ್ಗಿಸಿ, ಸ್ವಾರ್ಥ ಸಾಧನೆಗೈದ ಕೀರ್ತಿ ಆರ್ಯ ಈಡಿಗ ಸಭಾದ ಅಧ್ಯಕ್ಷ ತಿಪ್ಪೇಗೌಡ ಹಾಗೂ ಅವರ ಜೊತೆಗಿರುವ ಕಳ್ಳರಿಗೆ ಸಲ್ಲುತ್ತದೆ ಎಂದು ಬ್ರಹ್ಮನಾರಾಯಣ ಶಕ್ತಿಪೀಠಾಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಕಟುವಾಗಿ ಟೀಕಿಸಿದರು.

ಪಟ್ಟಣದ ಹೊಯ್ಸಳ ಪಾರ್ಟಿಹಾಲ್‌ನಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಲದ ಜಿಲ್ಲಾ ಘಟಕದಿಂದ ನಡೆದ ಸಮುದಾಯದ ಅಭಿವೃದ್ಧಿಯ ಜಿಲ್ಲಾ ಮಟ್ಟದ ಚಿಂತನ ಶಿಬಿರ ಹಾಗೂ ೧೨ನೇ ಶತಮಾನದ ಶರಣ ಹೆಂಡದ ಮಾರಯ್ಯ ಮತ್ತು ಶಿವಶರಣೆ ಈಡಿಗರ ಅಕ್ಕಮ್ಮನವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆರ್ಯ ಈಡಿಗ ಮಹಾಸಭೆಯು ಕೆಲವೇ ಮಂದಿ ಬಲಿತ ಶ್ರೀಮಂತ ಈಡಿಗರ ಹಿಡಿತದಲ್ಲಿದ್ದು ಶೇ. ೮೦ರಷ್ಟು ಬಹುಸಂಖ್ಯಾತ ಬಡ ಈಡಿಗ ಸಮುದಾಯಕ್ಕೆ ಮಾಡಿರುವ ಶೋಷಣೆ, ವಂಚನೆ, ಅನ್ಯಾಯಗಳ ಬಗ್ಗೆ ಹರಿಹಾಯ್ದರು. ಈಡಿಗ ಸಭಾದ ಅಧ್ಯಕ್ಷರಾಗಿರುವ ತಿಮ್ಮೇಗೌಡ ೮೦ ವರ್ಷ ವಯಸ್ಸಾದರೂ ಅಧಿಕಾರದಲ್ಲಿದ್ದು, ಕೆಲ ಸ್ವಾರ್ಥಿ ರಾಜಕಾರಣಿ ಹಾಗೂ ಸಮುದಾಯದ ಉದ್ಯಮಿಗಳ ಕೂಟವನ್ನು ರಚಿಸಿಕೊಂಡು ಕೋಟಿಗಟ್ಟಲೆ ವಂಚನೆ ಮಾಡಿದ್ದಾರೆಂದು ಆರೋಪಿಸಿ, ಈ ಬಗ್ಗೆ ಕಾನೂನು ಹೋರಾಟ ಮುಂದುವರೆಸಿ ಜೈಲಿಗಟ್ಟುವವರೆಗೂ ಬಿಡುವುದಿಲ್ಲ ಎಂದರು. ಈ ಸಂದರ್ಭದಲ್ಲಿ ಮಹಾಮಂಡಲದ ರಾಜ್ಯಾಧ್ಯಕ್ಷ ತಿಪ್ಪೇಸ್ವಾಮಿ, ಗೌರವಾಧ್ಯಕ್ಷ ಮಂಜೇಗೌಡರು, ಪದಾಧಿಕಾರಿಗಳಾದ ಮಲ್ಲಿಕಾರ್ಜುನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎ. ಹನುಮಂತರಾಜು, ಮುಖಂಡ ಆಲದಕಟ್ಟೆ ತಿಮ್ಮಣ್ಣ ಮಾತನಾಡಿದರು.