ಜಮೀನಿಗೆ ಹೋಗಲು ರಸ್ತೆ ಇಲ್ಲದೆ ಕಾಲೇಜು ಆವರಣದಲ್ಲೇ ಸಾಗಿದ ಶವಯಾತ್ರೆ

KannadaprabhaNewsNetwork |  
Published : Jul 16, 2026, 02:00 AM IST
15ಕೆಎಂಎನ್ ಡಿ15 | Kannada Prabha

ಸಾರಾಂಶ

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಿಂಭಾಗದ ಇರುವ ಕೃಷಿ ಭೂಮಿಗೆ ರೈತರು ಸಂಚರಿಸುತ್ತಿದ್ದ ರಸ್ತೆಯನ್ನು ಮುಚ್ಚಿರುವ ಕಾರಣ ಜನರು ಶವ ಸಂಸ್ಕಾರ ಮಾಡಲು ಅನ್ಯ ಮಾರ್ಗವಿಲ್ಲದೆ ವ್ಯಕ್ತಿಯೊಬ್ಬರ ಶವಯಾತ್ರೆಯನ್ನು ಕಾಲೇಜು ಆವರಣದಲ್ಲಿಯೇ ಸಾಗಿಸುವಂತಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಿಂಭಾಗದ ಇರುವ ಕೃಷಿ ಭೂಮಿಗೆ ರೈತರು ಸಂಚರಿಸುತ್ತಿದ್ದ ರಸ್ತೆಯನ್ನು ಮುಚ್ಚಿರುವ ಕಾರಣ ಜನರು ಶವ ಸಂಸ್ಕಾರ ಮಾಡಲು ಅನ್ಯ ಮಾರ್ಗವಿಲ್ಲದೆ ವ್ಯಕ್ತಿಯೊಬ್ಬರ ಶವಯಾತ್ರೆಯನ್ನು ಕಾಲೇಜು ಆವರಣದಲ್ಲಿಯೇ ಸಾಗಿಸುವಂತಾಗಿದೆ.

ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿ ಬೊಮ್ಮಯ್ಯ- ಕೆಂಪಮ್ಮ ದಂಪತಿ ಪುತ್ರ ದಲಿತ ಜನಾಂಗದ ಯುವಕ ಪ್ರಸನ್ನ (35) ಅನಾರೋಗ್ಯದಿಂದಾಗಿ ಬುಧವಾರ ನಿಧನರಾದರು. ಸರ್ಕಾರಿ ಪಾಲಿಟೆಕ್ನಿಕ್ ಹಿಂಭಾಗ ಮೃತರ ಕುಟುಂಬಸ್ಥರಿಗೆ ಸೇರಿದ ಕೃಷಿ ಭೂಮಿ ಇದೆ. ಮೂಲ ನಕಾಶೆಯಲ್ಲಿರುವ ರಸ್ತೆಯನ್ನು ಪಾಲಿಟೆಕ್ನಿಕ್ ಸಂಸ್ಥೆಯವರು ಮುಚ್ಚಿ ರೈತರು ತಮ್ಮ ಜಮೀನಿಗೆ ಹೋಗಲು ಸಾಧ್ಯವಾಗದಂತೆ ಮಾಡಿದ್ದಾರೆ. ಇದರಿಂದ ರೈತರು ಕೃಷಿ ಚಟಿವಟಿಕೆಗೆ ತೆರಳಲು ಮತ್ತು ಕುಟುಂಬಸ್ಥರು ನಿಧನರಾದಾಗ ಅವರ ಅಂತ್ಯ ಸಂಸ್ಕಾರವನ್ನು ತಮ್ಮ ಸ್ವಂತ ಜಮೀನಿನಲ್ಲಿ ನೆರವೇರಿಸಬೇಕಾದರೆ ನಾಲ್ಕು ಕಿಮಿ ಬಳಸಬೇಕಾದ ಸ್ಥಿತಿಯಿದೆ.

ರೈತ ಕುಟುಂಬದಲ್ಲಿ ಯಾರಾದರೂ ಸತ್ತರೆ ಕಾಲೇಜು ಹಿಂಭಾಗದ ತಮ್ಮ ಜಮೀನಿಗೆ ತೆರಳಿ ಅಂತ್ಯ ಸಂಸ್ಕಾರ ಮಾಡಲು ತೊಂದರೆಯಾಗಿದೆ. ಈ ಬಗ್ಗೆ ರೈತರು ಹಲವು ಸುತ್ತಿನ ಹೋರಾಟ ನಡೆಸುತ್ತಿದ್ದರೂ ತಾಲೂಕು ಆಡಳಿತ ಹಳೆಯ ರಸ್ತೆ ಬಿಡಿಸುವ ಅಥವಾ ಪರ್ಯಾಯ ರಸ್ತೆ ಬಿಡಿಸಿಕೊಡುವ ಬಗ್ಗೆ ಇದುವರೆಗೂ ಮುಂದಾಗಿಲ್ಲ.

ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತರು 2025ರ ಜನವರಿಯಲ್ಲೇ ಸ್ಥಳೀಯ ಆಡಳಿದೊಂದಿಗೆ ಚರ್ಚಿಸಿ ಪರ್ಯಾಯ ರಸ್ತೆ ಬಿಡಿಸಿ ವರದಿ ಮಾಡುವಂತೆ ಪಾಲಿಟೆಕ್ನಿಕ್ ಪ್ರಾಂಶುಪಾಲರಿಗೆ ಲಿಖಿತ ಆದೇಶ ಮಾಡಿದ್ದರೂ ಇದುವರೆಗೂ ರಸ್ತೆ ಮಾತ್ರ ದೊರಕಿಲ್ಲ.

ಕೃಷಿ ಚಟುವಟಿಕೆಗಳಿಗೆ ಅನಿವಾರ್ಯವಾಗಿ ಪಾಲಿಟೆಕ್ನಿಕ್ ಕಾಲೇಜು ಒಳಗಿನಿಂದಲೇ ಹೋಗಬೇಕಾಗಿದೆ. ಖಾಸಗಿಯವರು ರಸ್ತೆ ಬಿಡಿಸಲು ಮುಂದಾಗುವ ಅಧಿಕಾರಿಗಳು ಸರ್ಕಾರಿ ಇಲಾಖೆ ಮುಚ್ಚಿಕೊಂಡಿರುವ ರಸ್ತೆ ಬಿಡಿಸಲು ನಿರುತ್ಸಾಹ ತೋರುತ್ತಿದ್ದಾರೆ.

ರೈತರ ಮನವಿ ಮೇರೆಗೆ ತಾಲೂಕು ಆಡಳಿತ ಪಾಲಿಟೆಕ್ನಿಕ್ ಜಾಗದ ಪೂರ್ವದ ಅಂಚಿನಲ್ಲಿ ಬಸ್ ಡಿಪೋಗೆ ಹೊಂದಿಕೊಂಡಂತೆ ಬದಲಿ ಜಾಗವನ್ನು ರಸ್ತೆಗಾಗಿ ಗುರುತಿಸಿ ಅಗತ್ಯ ಸರ್ವೆ ಸ್ಕೆಚ್ ಮಾಡಿಸಿ ಜಿಲ್ಲಾಡಳಿತಕ್ಕೆ ಕಳುಹಿಸಿದೆ. ತಾಲೂಕು ಆಡಳಿತ ವರದಿ ಆಧರಿಸಿ ರೈತರಿಗೆ ಅಗತ್ಯ ರಸ್ತೆ ಬಿಡಿಸಲು ಮುಂದಾಗಬೇಕಾಗಿದ್ದ ಜಿಲ್ಲಾಡಳಿತ ಯಾವುದೇ ಕ್ರಮ ವಹಿಸದೆ ನಿರ್ಲಕ್ಷ್ಯ ವಹಿಸಿದೆ.

ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ರೈತರಿಗೆ ರಸ್ತೆ ಬಿಡಿಸುವ ಬಗ್ಗೆ ಬಹಿರಂಗ ಭರವಸೆ ನೀಡಿದರೂ ಅದು ನೆರವೇರಿಲ್ಲ. ಕ್ಷೇತ್ರದ ಶಾಸಕ ಎಚ್.ಟಿ.ಮಂಜು ದಶಕಗಳ ಕಾಲದ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವತ್ತ ಗಂಭೀರ ಪ್ರುಯತ್ನ ಮಾಡಬೇಕಾಗಿದೆ.

ಜಮೀನಿಗೆ ತೆರಳಲು ಅಗತ್ಯ ರಸ್ತೆ ಇಲ್ಲದ ಕಾರಣ ಮೃತ ಪ್ರಸನ್ನರ ಶವಯಾತ್ರೆ ಅನಿವಾರ್ಯವಾಗಿ ಕಾಲೇಜು ಆವರಣದಿಂದಲೇ ಹಿಂಭಾಗದ ಜಮೀನಿಗೆ ತೆರಳುವ ವೇಳೆ ತಾಲೂಕು ಆಡಳಿತ ವಿರುದ್ಧ ಮೃತನ ಕುಂಟಬಸ್ಥರು ತೀವ್ರ ಆಕ್ರೋಶ ಹೊರಹಾಕಿದರು.

ರೈತರಿಗೆ ಅಗತ್ಯ ರಸ್ತೆ ಬಿಡಿಸದೆ ಅಸಡ್ಡೆ ತೋರಿಸುತ್ತಿರುವ ಕಾಲೇಜು ಆಡಳಿತ ಮಂಡಲಿ ಮತ್ತು ತಾಲೂಕು ಆಡಳಿತದ ವಿರುದ್ದ ದಲಿತ ಮುಖಂಡ ಡಿ.ಪ್ರೇಂಕುಮಾರ್ ಕಿಡಿಕಾರಿದರು. ಮುಂದಿನ ದಿನಗಳಲ್ಲಿ ರಸ್ತೆ ಬಿಡದಿದ್ದರೆ ಕಾಲೇಜು ಆವರಣದಲ್ಲಿಯೇ ಸತ್ತವರ ಅಂತ್ಯ ಸಂಸ್ಕಾರ ನಡೆಸುವುದಾಗಿ ಎಚ್ಚರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಣಗಿದ ಕಬ್ಬಿನ ಜೊಲ್ಲೆ ಹಿಡಿದು ರೈತರ ಅರೆಬೆತ್ತಲೆ ಪ್ರತಿಭಟನೆ
ಯಾವುದೇ ಸಂಘ ಸಂಸ್ಥೆಗಳು ಅಭಿವೃದ್ಧಿಯಾಗಲು ಒಗ್ಗಟ್ಟು ಅಗತ್ಯ: ಚಂದ್ರಶೇಖರ್