ಕನ್ನಡಪ್ರಭ ವಾರ್ತೆ ಹಾಸನ
ನಾಲಾ ಯೋಜನೆಗಾಗಿ ಭೂಮಿ ಸ್ವಾಧೀನ ಮಾಡಿಕೊಂಡು ೧೫ ವರ್ಷ ಕಳೆದರೂ ಪರಿಹಾರ ನೀಡದೆ ವಿಳಂಬ ಮಾಡಿದ ಕಾರಣ, ಹಾಸನ ಜಿಲ್ಲಾಧಿಕಾರಿ ಕಚೇರಿಯ ಮೊದಲ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೇಮಾವತಿ ಜಲಾಶಯ ಯೋಜನೆ ವಿಭಾಗದ ಕಚೇರಿಯ ಪೀಠೋಪಕರಣಗಳನ್ನು ಬುಧವಾರ ವಕೀಲರ ಸಮ್ಮುಖದಲ್ಲಿ ಜಪ್ತಿ ಮಾಡಲಾಯಿತು.ಹಾಸನ ತಾಲೂಕು ಕಟ್ಟಾಯ ಹೋಬಳಿಯ ಬ್ಯಾಡರಹಳ್ಳಿ ಗ್ರಾಮದ ಬಿ.ಟಿ. ಶಿವಶಂಕರ್ ಅವರಿಗೆ ೩೩ ಗುಂಟೆ ಜಮೀನಿಗೆ ನ್ಯಾಯಾಲಯವು ೧ ಕೋಟಿ ೯ ಲಕ್ಷ ೮೪೩ ರು. ಪರಿಹಾರ ನಿಗದಿ ಮಾಡಿದ್ದರೂ, ಹಲವು ವರ್ಷಗಳಾದರೂ ಪರಿಹಾರ ನೀಡಿರಲಿಲ್ಲ. 2009ರಲ್ಲಿ ಯಗಚಿ ನಾಲೆ ನಿರ್ಮಾಣಕ್ಕಾಗಿ ಭೂಮಿ ಮುಳುಗಡೆಗೊಂಡು ಸ್ವಾಧೀನವಾದ ಹಿನ್ನೆಲೆಯಲ್ಲಿ, ಪ್ರಕರಣ ಹಾಸನ ಸಿವಿಲ್ ನ್ಯಾಯಾಲಯ ಹಾಗೂ ನಂತರ ಹೈಕೋರ್ಟ್ ತನಕ ಸಾಗಿದ್ದು, ಎರಡೂ ಕಡೆ ರೈತರ ಪರ ಅಂತಿಮ ತೀರ್ಪು ಬಂದಿದೆ. ಆದರೂ ಪರಿಹಾರವನ್ನು ಇನ್ನೂ ನೀಡಲಾಗಿಲ್ಲವೆಂದು ವಕೀಲ ಶ್ರೀಕಾಂತ್ ಮಾಧ್ಯಮಗಳ ಮೂಲಕ ಖಂಡಿಸಿದರು.
ಶಿವಶಂಕರ್‌ರ ಕುಟುಂಬ ಕಳೆದ ೧೫ ವರ್ಷಗಳಿಂದ ಪರಿಹಾರಕ್ಕಾಗಿ ಸುತ್ತಾಡುತ್ತಾ ಮಕ್ಕಳ ಶಿಕ್ಷಣ, ಮನೆಯ ಖರ್ಚುಗಳನ್ನೇ ನಿಭಾಯಿಸಲಾಗದ ಪರಿಸ್ಥಿತಿಗೆ ತಲುಪಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಕಚೇರಿಗೆ ಭೇಟಿ ನೀಡಿ ಟೇಬಲ್, ಕಂಪ್ಯೂಟರ್, ಕುರ್ಚಿಗಳು ಸೇರಿದಂತೆ ಹಲವಾರು ಪೀಠೋಪಕರಣಗಳನ್ನು ಜಪ್ತಿ ಮಾಡಲಾಗಿದೆ. ಇದೇ ರೀತಿ ಮತ್ತೊಂದು ಪ್ರಕರಣ ದೊಡ್ಡಭೀಕನಹಳ್ಳಿಯ ಕಿತ್ತಾನೆ ಗ್ರಾಮದ ತಿಮೇಗೌಡರದ್ದು. ಇವರ ಭೂಮಿ ಸ್ವಾಧೀನಗೊಂಡು ಸುಮಾರು ೨೦ ಲಕ್ಷ ಪರಿಹಾರ ನಿಗದಿಯಾದರೂ ೧೫ ವರ್ಷಗಳಿಂದ ಅದನ್ನೂ ನೀಡದೇ ಇಲಾಖೆ ನಿರ್ಲಕ್ಷ್ಯ ತೋರಿದೆ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಭೂಸ್ವಾಧೀನ ಪ್ರಕರಣಗಳನ್ನು ೬ ತಿಂಗಳಲ್ಲಿ ಮುಗಿಸಬೇಕಾದರೆ, ಇಲ್ಲಿ ರೈತರು ವರ್ಷಗಳ ಕಾಲ ಪರಿಹಾರಕ್ಕಾಗಿ ಅಲೆದಾಡುತ್ತಿರುವುದು ದುರಂತ ಎಂದು ವಕೀಲರು ಆಕ್ರೋಶ ವ್ಯಕ್ತಪಡಿಸಿದರು.ಘಟನೆಯ ಸಂದರ್ಭದಲ್ಲಿ ಬ್ಯಾಡರಹಳ್ಳಿಯ ಬಿ.ಟಿ. ಶಿವಶಂಕರ್ ಹಾಗೂ ಕಿತ್ತಾನೆ ಗ್ರಾಮದ ತಿಮೇಗೌಡ ಸ್ಥಳದಲ್ಲಿದ್ದರು. ಅವರ ವರ್ಷಗಳ ಕಾಯುವಿಕೆ, ನ್ಯಾಯಕ್ಕಾಗಿ ಮಾಡಿರುವ ಹೋರಾಟ ಏಕಕಾಲದಲ್ಲಿ ಎಲ್ಲರ ಗಮನ ಸೆಳೆಯಿತು.