ಗಜೇಂದ್ರಗಡ: ದಾಸೋಹ, ಕಾಯಕ, ಸಮಾನತೆಯೇ ಬಸವ ಪುರಾಣವಾಗಿದ್ದು, ಪುರಾಣ ಪ್ರವಚನದ ಮೂಲಕ ಹೃದಯಗಳ ಬೆಸುಗೆಯ ಜತೆಗೆ ಪರಸ್ಪರರಲ್ಲಿ ಶಾಂತಿ, ಸೌಹಾರ್ದ ಮೂಡುತ್ತದೆ ಎಂದು ದರೂರು ಸಂಗನಬಸವೇಶ್ವರ ಮಠದ ಕೊಟ್ಟೂರು ಸ್ವಾಮೀಜಿ ಹೇಳಿದರು.
ದೇವರೊಬ್ಬನೇ ಎನ್ನುವ ಸತ್ಯ ನಾವು ಅರ್ಥ ಮಾಡಿಕೊಳ್ಳಬೇಕು. ಅದನ್ನೇ ಬಸವಣ್ಣನವರು ದೇವನೊಬ್ಬ ನಾಮ ಹಲವು ಎಂಬುದನ್ನು ತಿಳಿಸಿದ್ದಾರೆ. ಬಸವ ಪುರಾಣದ ಮುಖ್ಯ ಉದ್ಧೇಶವೇ ಸಮಾಜದಲ್ಲಿ ಸಮಾನತೆ, ಸಹಿಷ್ಣುತೆ ಹಾಗೂ ಸೌಹಾರ್ದತೆಯ ಕೊಂಡಿ ಬಲಪಡಿಸುವುದಾಗಿದೆ ಎಂದರು.
ಸೋಮಸಮುದ್ರದ ಸಿದ್ದಲಿಂಗ ದೇಶಿಕರು ಹಾಗೂ ಶ್ರೀಧರಗಡ್ಡೆಯ ಮರಿಕೊಟ್ಟರು ದೇಶಿಕರು ಮಾತನಾಡಿ, ಹಾಲಕೆರೆ ಮಠವು ಶಿಕ್ಷಣ ಹಾಗೂ ಬಸವ ತತ್ವ ಪ್ರಚಾರ ಮಾಡುವ ಸಮಾಜದಲ್ಲಿ ಸೌಹಾರ್ದತೆ ಕಾಪಾಡಲು ದಿಟ್ಟ ಹೆಜ್ಜೆಗಳನ್ನಿಡುತ್ತಾ ಬರುತ್ತಿದೆ. ತಾಲೂಕಿನ ಗೋಗೇರಿ ಗ್ರಾಮದ ಹಾಲಕೆರೆ ಶಾಖಾ ಮಠಕ್ಕೆ ಮುಸ್ಲಿಂ ಸಮಾಜದ ಹಿರಿಯರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗುತ್ತಿದೆ. ಹೊಸಪೇಟೆಯ ಕೊಟ್ಟೂರು ಸ್ವಾಮಿ ಮಠದಲ್ಲಿ ಸಮನ್ವಯ ರಥದಲ್ಲಿ ಸರ್ವಧರ್ಮಗಳ ಗ್ರಂಥವನ್ನಿಟ್ಟು ರಥ ಎಳೆಯುವ ಭವ್ಯ ಪರಂಪರೆ, ಸೌಹಾರ್ದತೆ ನಾಡಿನಲ್ಲಿ ಪಸರಿಸುವ ಕಾರ್ಯ ಅನ್ನದಾನೇಶ್ವರ ಮಠ ಮಾಡುತ್ತಿದೆ ಎಂದರು.ಸಂಗನಾಳದ ವಿಶ್ವೇಶ್ವರ ದೇವರು ಮಾತನಾಡಿ, ಪಟ್ಟಣದಲ್ಲಿ ನಡೆಯುತ್ತಿರುವ ಬಸವ ಪುರಾಣ ಹಿನ್ನೆಲೆಯಲ್ಲಿ ಪ್ರತಿದಿನ ವಿವಿಧ ವಾರ್ಡ್‌ಗಳಿಗೆ ಶ್ರಿಗಳು ಸದ್ಭಾವನಾ ಪಾದಯಾತ್ರೆ ಮೂಲಕ ಶರಣರು ಸಮಾನತೆ, ಬಸವ ತತ್ವದ ಜಾಗೃತಿ ಕೈಗೊಂಡಿದ್ದಾರೆ. ಪ್ರತಿ ವಾರ್ಡ್‌ನಲ್ಲಿ ಶ್ರೀಗಳು ಆಗಮಿಸುವಾಗ ಸರ್ವ ಸಮುದಾಯಗಳ ಭಕ್ತರು ತಮ್ಮ ಮನೆ ಮುಂದೆ ರಂಗೋಲಿ, ತಳಿರು ತೋರಣಗಳು ಹಾಗೂ ಹೂ ಹಾಸಿ ನೀಡುತ್ತಿರುವ ಸ್ವಾಗತ ಭಕ್ತರ ಭಕ್ತಿಗೆ ಸಾಕ್ಷಿಯಾಗಿದೆ ಎಂದರು.
ಬಸವ ಪುರಾಣ ಸ್ವಾಗತ ಸಮಿತಿಯ ಉಪಾಧ್ಯಕ್ಷ ಶಿವು ಕೋರಧ್ಯಾನಮಠ, ಬಸವ ಪುರಾಣ ವಾಹನ ನಿರ್ವಹಣಾ ಸಮಿತಿ ಉಪಾಧ್ಯಕ್ಷ ಸುರೇಶ ಚವಡಿ, ಬಸವ ಪುರಾಣ ಸಮಿತಿ ಸದಸ್ಯ ಗುಲಾಂ ಹುನಗುಂದ, ಲಕ್ಷ್ಮೀ ಅರ್ಬನ್ ಕೋ-ಆಪ್ ಬ್ಯಾಂಕಿನ ವ್ಯವಸ್ಥಾಪಕ ರಾಜು ಹೊಸಂಗಡಿ, ಅಜಿತ್ ಒಂದಕುದರಿ, ಬಸಯ್ಯ ಸಾಲಿಮಠ, ಕಳಕಪ್ಪ ಪಂತಗರಾಯ, ಮುತ್ತಣ್ಣ ಯಲಬುಣಚಿ, ವಿರೂಪಾಕ್ಷಪ್ಪ ಬಡಿಗೇರ, ಉಮೇಶ ನಾವಡೆ, ಪ್ರವೀಣ ಚೋಳಿನ, ಸಿದ್ದಣ್ಣ ಸಕ್ರಿ, ಪರಪ್ಪ ಅಂಗಡಿ ಸೇರಿ ನೂರಾರು ಮಹಿಳೆಯರು ಇದ್ದರು.