ಹಾವೇರಿ: ಭಾವೈಕ್ಯದ ಭಾರತದಲ್ಲಿ ಎಲ್ಲರೂ ಸೌಹಾರ್ದತೆಯಿಂದ ಬದುಕುತ್ತಿದ್ದೇವೆ. ಭಾರತ ಭಾವೈಕ್ಯದ ನಾಡು. ನಾವು ಸೌಹಾರ್ದದಿಂದ ಬದುಕುತ್ತಿದ್ದೇವೆ. ಆದರೂ ನಮ್ಮ ತಾಳ್ಮೆ ಪರೀಕ್ಷಿಸುವ ಅನೇಕ ಸಂದರ್ಭಗಳು ಎದುರಾಗುತ್ತಿವೆ. ನಾವು ಈಗಲೇ ಜಾಗ್ರತರಾಗದಿದ್ದಲ್ಲಿ ಭವಿಷ್ಯದ ಭಾರತಕ್ಕೆ ಕುತ್ತು ಬರಲಿದೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ನುಡಿದರು.
ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ಭವ್ಯ ಪರಂಪರೆ ಹೊಂದಿ ಆಶ್ರಯ, ಅನ್ನ ನೀಡಿದ ದೇಶ ನಮ್ಮದು. ನಮ್ಮ ದೇಶದಲ್ಲಿ ಹುಟ್ಟಿಹೋಗಿರುವ ಹಿಂದೂಗಳ ಮೇಲೆ ದೌರ್ಜನ್ಯ ಆಗುತ್ತಿರುವುದು ಖಂಡನೀಯ. ಜಗತ್ತಿನಲ್ಲಿ ಏನೇ ಸಮಸ್ಯೆ, ದೌರ್ಜನ್ಯ ನಡೆದರೆ ಮೊದಲು ಖಂಡಿಸುವುದು ನಮ್ಮ ದೇಶ. ಸಂಸ್ಕೃತಿ, ಸಂಸ್ಕಾರ, ಧರ್ಮ ನಾಶವಾದರೆ ಭಾರತ ದೇಶ ನಾಶವಾಗುತ್ತದೆ. ಹೀಗಾಗಿ ಈಗಲೇ ಯುವಕರು ಎಚ್ಚೆತ್ತುಕೊಳ್ಳಬೇಕು ಎಂದರು.
ಅಗಡಿ ಆನಂದವನದ ಶ್ರೀಗುರುದತ್ತಮೂರ್ತಿ ಚಕ್ರವರ್ತಿ ಸ್ವಾಮೀಜಿ ಮಾತನಾಡಿ, ನಮ್ಮಲ್ಲೇ ನಮಗೆ ಜೈಕಾರ ಕೂಗಲು ಮುಜುಗರ ಎದುರಿಸುವ ಪರಿಸ್ಥಿತಿ ಬಂದಿದೆ. ಹಿಂದೂಗಳು ಒಂದಾಗಿ ಕೂಗಿದರೆ ನೆರೆಯ ಬಾಂಗ್ಲಾ ದೇಶಕ್ಕೆ ಕೇಳಬೇಕು. ನಮ್ಮ ದೇಶದ ಹಿಂದುಗಳು ಇನ್ನಾದರೂ ಜಾಗೃತಿ ಆಗಬೇಕು ಎಂದರು.ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಮಾತನಾಡಿ, ಬೇರೆಯವರ ಮನೆಗೆ ಬೆಂಕಿ ಬಿದ್ದಿದೆ. ನಮಗೇನೂ ಆಗಿಲ್ಲ ಎಂದು ಮನೆಯ ಬಾಗಿಲು ಹಾಕಿಕೊಂಡು ಕೂರುತ್ತಿದ್ದೇವೆ. ಬೇರೆಯವರ ಮನೆಗೆ ಹತ್ತಿದ ಬೆಂಕಿ ನಮಗೂ ತಾಗುತ್ತದೆ ಎಂಬ ಜ್ಞಾನ ಇರಬೇಕು. ಮಠಾಧೀಶರು ಒಂದಾದಾಗ ಮಾತ್ರ ಆ ದೇಶಕ್ಕೆ ಸಂದೇಶ ಕೊಡಲು ಸಾಧ್ಯ. ಸರ್ಕಾರದಿಂದ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಹಚ್ಚುವ ಕಾರ್ಯ ನಡೆಯುತ್ತಿದೆ. ಇದು ಸರಿಯಲ್ಲ, ಇನ್ನಾದರೂ ಹಿಂದೂಗಳು ಒಂದಾಗಿ ಹೋರಾಡಬೇಕು ಎಂದರು.
ಗೌರಿಮಠದ ಶಿವಯೋಗಿ ಶಿವಾಚಾರ್ಯರು, ಹರಸೂರು ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಚಿಂತಕ ಶ್ರೀಕಾಂತ ಹೊಸಕೇರಿ ಮಾತನಾಡಿದರು.
ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ, ಪಿ.ಡಿ. ಶಿರೂರ, ಪವನ ಬಹದ್ದೂರುದೇಸಾಯಿ, ಪ್ರಭಾಕಾರರಾವ್ ಮಂಗಳೂರು, ಪರಶುರಾಮ ಹರಪನಹಳ್ಳಿ, ನಾಗೇಂದ್ರ ಕಡಕೋಳ ಇತರರಿದ್ದರು. ಬಳಿಕ ಹಾವೇರಿಯ ಹುಕ್ಕೇರಿಮಠದಿಂದ ಪ್ರಾರಂಭವಾದ ಪಂಜಿನ ಮೆರವಣಿಗೆ ಎಂಜಿ ರಸ್ತೆ, ದ್ಯಾಮವ್ವದೇವಿ ಪಾದಗಟ್ಟೆ ರಸ್ತೆ, ಗಾಂಧಿ ವೃತ್ತ, ಜೆಪಿ ರಸ್ತೆ ಮೂಲಕ ಹಾದು ಹೊಸಮನಿ ಸಿದ್ದಪ್ಪ ವೃತ್ತ ತಲುಪಿತು. ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.