ಅಂಕೋಲಾ: ವಿನಯಶೀಲ ವಿಮರ್ಶಕರೆಂದೇ ಗುರುತಿಸಿಕೊಂಡಿದ್ದ ಜಿ.ಎಚ್. ನಾಯಕರು ಯಾವುದೇ ಕೃತಿಯನ್ನು ವಿಮರ್ಶಿಸುವಾಗಲೂ ಕೃತಿಕಾರನ ಸೃಜನಶೀಲತೆಯನ್ನು ಗೌರವಿಸಿ, ಅವರ ಮನಸ್ಸಿಗೆ ನೋವಾಗದಂತೆ ಎಚ್ಚರಿಕೆಯಿಂದ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು ಎಂದು ವಿಮರ್ಶಕ ನಟರಾಜ್ ಹುಳಿಯಾರ ಅಭಿಪ್ರಾಯಪಟ್ಟರು.
ಹಿರಿಯ ಸಾಹಿತಿ ಶಾಂತಾರಾಮ ನಾಯಕ ಹಿಚ್ಕಡ ಮಾತನಾಡಿ, ನಾಡಿನ ಖ್ಯಾತ ವಿಮರ್ಶಕರು, ಚಿಂತಕರು ಹಾಗೂ ಸಾಹಿತಿಗಳಲ್ಲಿ ಒಬ್ಬರಾಗಿರುವ ಜಿ.ಎಚ್. ನಾಯಕ ಅವರು ಸಾಹಿತ್ಯ ವಿಮರ್ಶೆಯ ಮೂಲಕ ಕನ್ನಡ ಸಾಹಿತ್ಯದ ಮೌಲ್ಯಗಳನ್ನು ವಿಶ್ಲೇಷಿಸಿ, ತಮ್ಮ ವೈಚಾರಿಕ ಮತ್ತು ಪ್ರಗತಿಪರ ಚಿಂತನೆಗಳಿಂದ ಗಮನಾರ್ಹ ಕೊಡುಗೆ ನೀಡಿದ್ದಾರೆ ಎಂದರು.
ಹಿರಿಯ ಪತ್ರಕರ್ತ ಗಂಗಾಧರ ಹಿರೇಗುತ್ತಿ ಮಾತನಾಡಿ, ಅಂಕೋಲೆಯ ಮಣ್ಣಿನಲ್ಲಿರುವ ತ್ಯಾಗದ ಪರಂಪರೆ ಹಾಗೂ ಹೋರಾಟದ ಪ್ರಭಾವವೇ ಜಿ.ಎಚ್. ನಾಯಕರಂಥ ಮಹಾನ್ ವಿಮರ್ಶಕರ ಸೃಷ್ಟಿಗೆ ಪ್ರೇರಣೆಯಾಗಿದೆ. ವಿಧೇಯತೆ, ವಿನಯವಂತಿಕೆ ಹಾಗೂ ಸರಳತೆಯನ್ನು ಮೈಗೂಡಿಸಿಕೊಂಡು ಸಂತನಂತೆ ಬದುಕು ಸಾಗಿಸಿದ ಜಿ.ಎಚ್. ನಾಯಕರ ಜೀವನಕ್ರಮ, ಅವರು ನಾಡು ಗುರುತಿಸುವಂತಹ ಅಪೂರ್ವ ಸಾಧನೆಗಳನ್ನು ಮಾಡುವಂತೆ ಪ್ರೇರೇಪಿಸಿದೆ ಎಂದರು.ಜಿ.ಎಚ್. ನಾಯಕ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಡಿನ ಖ್ಯಾತ ವಿಮರ್ಶಕರಾಗಿ ತಮ್ಮದೇ ಆದ ಛಾಪು ಮೂಡಿಸಿರುವ ಜಿ.ಎಚ್. ನಾಯಕ ಅವರ ಹೆಸರಿನಲ್ಲಿ ಸ್ಥಾಪನೆಯಾಗಿರುವ ಟ್ರಸ್ಟ್, ಮುಂದಿನ ದಿನಗಳಲ್ಲಿ ಸಾಹಿತ್ಯ, ಸಂಸ್ಕೃತಿ ಹಾಗೂ ಶಿಕ್ಷಣ ಕ್ಷೇತ್ರಗಳಿಗೆ ಪೂರಕವಾಗುವಂತೆ ಹಲವು ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಿದೆ ಎಂದರು.
ನಿವೃತ್ತ ಉಪನ್ಯಾಸಕ ವಸಂತ ನಾಯಕ, ಜಿ.ಸಿ. ಕಾಲೇಜಿನ ಪ್ರಾಚಾರ್ಯ ಡಾ. ಎಸ್.ವಿ. ವಸ್ತ್ರದ, ಸಹಕಾರಿ ಧುರೀಣ ಜಾರ್ಜ್ ಫರ್ನಾಂಡಿಸ್ ಉಪಸ್ಥಿತರಿದ್ದರು. ಟ್ರಸ್ಟ್ ಉಪಾಧ್ಯಕ್ಷ, ನಿವೃತ್ತ ಪ್ರಾಚಾರ್ಯ ಡಾ. ಮಹೇಶ ಗೋಳಿಕಟ್ಟೆ ಸ್ವಾಗತಿಸಿದರು.