ಜಿ.ಪಿ.ಟಿ. ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸುವುದು ಸಾಧ್ಯ: ಡಿಸಿ ವಿದ್ಯಾಕುಮಾರಿ

KannadaprabhaNewsNetwork | Published : Feb 17, 2025 12:32 AM

ಸಾರಾಂಶ

ಉಡುಪಿ ಜಿಲ್ಲೆಯಲ್ಲಿ ನೇಮಕಗೊಂಡ 200 ಮಂದಿ ಜಿ.ಪಿ.ಟಿ. ಶಿಕ್ಷಕರ ಬುನಾದಿ ತರಬೇತಿ ಕಾರ್ಯಾಗಾರ ನಡೆಯಿತು.

ಕನ್ನಡಪ್ರಭ ವಾರ್ತೆ, ಉಡುಪಿ

ಸರ್ಕಾರಿ ನೌಕರಿ ದೊರಕುವುದೇ ಅಪರೂಪ, ಅದರಲ್ಲಿಯೂ ರಾಷ್ಟ್ರದ ಭವಿಷ್ಯ ರೂಪಿಸುವ ಶಿಕ್ಷಕರ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಿ ಆಯ್ಕೆಗೊಂಡಿರುವ ನಿಮ್ಮಿಂದ ಸಮಾಜಕ್ಕೆ ವಿಶೇಷ ನಿರೀಕ್ಷೆಗಳಿವೆ. ಈ ಕಾಲಘಟ್ಟದ ವಿದ್ಯಾರ್ಥಿಗಳಿಗೆ ಕಲಿಸುವ ಸವಾಲನ್ನು ಸಮರ್ಥವಾಗಿ, ಈಗಾಗಲೇ ಉತ್ತಮ ಶೈಕ್ಷಣಿಕ ಸಾಧನೆ ನಡೆಸುತ್ತಿರುವ ಉಡುಪಿ ಜಿಲ್ಲೆಯ ಗೌರವವು ಹೆಚ್ಚಾಗುವಂತೆ ಕಾರ್ಯ ನಿರ್ವಹಿಸಿ ಎಂದು ಉಡುಪಿಯ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಹಾರೈಸಿದರು.ಅವರು ಉಡುಪಿ ಜಿಲ್ಲೆಯಲ್ಲಿ ನೇಮಕಗೊಂಡ 200 ಮಂದಿ ಜಿ.ಪಿ.ಟಿ. ಶಿಕ್ಷಕರ ಬುನಾದಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ನಗರದ ಇನ್‌ಫೋಸಿಸ್‌ ಯಕ್ಷಗಾನ ಕೇಂದ್ರದಲ್ಲಿ ನಡೆದ ಈ ಸಮಾರಂಭದಲ್ಲಿ ರಾಷ್ಟ್ರಮಟ್ಟದಲ್ಲಿ ವೀರಗಾಥಾ 4.0 ಸ್ಪರ್ಧೆಯ ಬಹುಮಾನ ವಿಜೇತರಾದ ಕಾರ್ಕಳದ ಶ್ರೀಮದ್‌ ಭುವನೇಂದ್ರ ಶಾಲೆಯ ಕುಮಾರಿ ಸ್ನಿಗ್ಧಾ ಎ. ಹಾಗೂ ಹೆಬ್ರಿಯ ಎಸ್‌.ಆರ್‌. ಪಬ್ಲಿಕ್‌ ಶಾಲೆಯ ವಿಘ್ನೇಶ್‌ ಆಚಾರ್ಯ ಅವರನ್ನು ಗೌರವಿಸಲಾಯಿತು. ಆಲೂರು ವೆಂಕಟರಾವ್‌ ಭಾಷಾ ಕೌಶಲ ತರಬೇತಿ ಕೇಂದ್ರದ ಅನುದಾನದಲ್ಲಿ ರಚನೆಗೊಂಡ ಶಿಕ್ಷಣ ಸಾಹಿತ್ಯ ಸಂಪದ ಕೃತಿಯ ಬಿಡುಗಡೆ ನಡೆಯಿತು. ಉಡುಪಿ ಜಿಲ್ಲಾ ಕನ್ನಡ ಒಲಂಪಿಯಾಡ್‌ನಲ್ಲಿ ಬಹುಮಾನ ವಿಜೇತರಿಗೆ ಬಹುಮಾನವನ್ನು ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪ್ರತೀಕ ಬಾಯಲ್‌ ವಿತರಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಣಿಪಾಲದ ರೋಟರಿ ಸಂಸ್ಥೆಯ ಉಪಾಧ್ಯಕ್ಷೆ ಶಶಿಕಲಾ ರಾಜವರ್ಮಾ ಅರಿಗ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ ಕೆ ಉಪಸ್ಥಿತರಿದ್ದರು. ಡಯಟ್‌ ಪ್ರಾಂಶುಪಾಲ ಮಂಜುನಾಥ ಎಚ್‌.ಟಿ. ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ಡಾ. ಅಶೋಕ ಕಾಮತ್‌ ಸ್ವಾಗತಿಸಿ, ಹಿರಿಯ ಉಪನ್ಯಾಸಕ ಪ್ರಭಾಕರ ಮಿತ್ಯಾಂತ ವಂದಿಸಿದರು, ಉಪನ್ಯಾಸಕ ಯೋಗಾ ನರಸಿಂಹ ಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.ಸಂಪನ್ಮೂಲ ವ್ಯಕ್ತಿಗಳಾಗಿ ಅಂತರಾಷ್ಟ್ರೀಯ ಖ್ಯಾತಿಯ ಶಿಶು ತಜ್ಞೆ ಡಾ. ಪ್ರೀತಿ ಗಲಗಲಿ, ಇವರು ಮಕ್ಕಳಲ್ಲಿ ಮೊಬೈಲ್‌ ಬಳಕೆ ವಿಷಯದಲ್ಲಿ ವಿವೇಕಾನಂದ ಅನುಸಂಧಾನ ಕೇಂದ್ರದ ನಿರ್ದೇಶಕ ಡಾ. ಎಚ್‌. ಎನ್‌. ಮುರಳೀಧರ ಇವರು ಶಿಕ್ಷಣ ಮತ್ತು ಮೌಲ್ಯಗಳು, ಮಣಿಪಾಲ ರೋಟರಿ ಹಿಲ್ಸ್‌ ನ ಅಧ್ಯಕ್ಷೆ ಸುಪರ್ಣಾ ಇವರು ಜೀವನ ಕೌಶಲ ಅಭಿವೃದ್ಧಿ ತಂತ್ರಗಳು, ವಿಶ್ರಾಂತ ಉಪನ್ಯಾಸಕ ಡಾ. ಎನ್‌. ಶಿವಪ್ರಕಾಶ ಜಿ.ಪಿ.ಟಿ. ಶಿಕ್ಷಕರ ಕರ್ತವ್ಯಗಳ ಕುರಿತು ಮಾತನಾಡಿದರು.

Share this article