ಕನ್ನಡಪ್ರಭ ವಾರ್ತೆ, ತುಮಕೂರುದಸರಾ ಉತ್ಸವದ ಅಂಗವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದ ದಸರಾ ಧಾರ್ಮಿಕ ಮಹಾ ಮಂಟಪದಲ್ಲಿ ಮಂಗಳವಾರ ಜರುಗಿದ ಶ್ರೀ ವಾಗ್ದೇವಿ ಹೋಮದಲ್ಲಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಹಾಗೂ ಕನ್ನಿಕಾ ಪರಮೇಶ್ವರ್ ದಂಪತಿ ಭಾಗಿಯಾಗಿ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಸಚಿವರು, ದಸರಾ ಉತ್ಸವದ ಸಂದರ್ಭದಲ್ಲಿ ಭಾರತೀಯ ಸಂಪ್ರದಾಯದಂತೆ ಶ್ರೀ ಚಾಮುಂಡೇಶ್ವರಿ ದೇವಿಯನ್ನು ಪ್ರತೀ ದಿನ ವಿವಿಧ ರೂಪಗಳಲ್ಲಿ ಅಲಂಕಾರ ಮಾಡುವ ಪರಂಪರೆ ಇದ್ದು, ಉತ್ಸವದ ಎರಡನೇ ದಿನವಾದ ಮಂಗಳವಾರ ದೇವಿಯನ್ನು ಬ್ರಹ್ಮಚಾರಿಣಿ ರೂಪದಲ್ಲಿ ಅಲಂಕರಿಸಿ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು ಎಂದು ತಿಳಿಸಿದರು.ದೇವಿಯು ರಾಜ್ಯದ ಜನತೆಗೆ ಸನ್ಮಂಗಳವನ್ನುಂಟು ಮಾಡಿ ನೆಮ್ಮದಿ, ಮನಃಶಾಂತಿಯನ್ನು ಅನುಗ್ರಹಿಸಲಿ. ನಾಡು ಉತ್ತಮ ಮಳೆ-ಬೆಳೆಯಿಂದ ಸಮೃದ್ಧವಾಗಲಿ ಎಂದು ಪ್ರಾರ್ಥಿಸಿ ದೇವಿಗೆ ಪೂಜೆ ಸಲ್ಲಿಸಲಾಗಿದೆ ಎಂದು ಹೇಳಿದರು.ಮೈಸೂರು ದಸರಾ ಬಗ್ಗೆ ಮಾತನಾಡಿದ ಅವರು, ಸೋಮವಾರ ಮೈಸೂರಿನಲ್ಲಿ ಶಾಸ್ತ್ರೋಕ್ತವಾಗಿ ದಸರಾ ಉತ್ಸವಕ್ಕೆ ಚಾಲನೆ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರು ಚಾಮುಂಡೇಶ್ವರಿ ಸನ್ನಿಧಿಯಲ್ಲಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದ್ದಾರೆ. ಈ ಬಾರಿ ಮೈಸೂರು ದಸರಾ ಉದ್ಘಾಟಕರ ಆಯ್ಕೆ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿತ್ತು. ಆದರೆ ಯಾವುದೇ ಗೊಂದಲಗಳಿಲ್ಲದೆ ದಸರಾ ಮಹೋತ್ಸವ ಉದ್ಘಾಟನೆ ನಿರ್ವಿಘ್ನವಾಗಿ ನಡೆದಿದೆ ಎಂದು ತಿಳಿಸಿದರು.ಜಗತ್ಪ್ರಸಿದ್ಧ ಮೈಸೂರು ದಸರಾ ಮಹೋತ್ಸವವು ಭಾವೈಕ್ಯತೆಯ ಪ್ರತೀಕವಾಗಿದೆ. ನಾಡಿನಲ್ಲಿರುವ ಎಲ್ಲರಿಗೂ ದೇವರ ಕೃಪಾಶೀರ್ವಾದದ ಅಗತ್ಯವಿದೆ. ಈ ನಿಟ್ಟಿನಲ್ಲಿ ಜಾತಿ, ಧರ್ಮವೆಂಬ ಬೇಧ-ಭಾವವಿಲ್ಲದೆ ಎಲ್ಲ ಧರ್ಮದವರನ್ನೂ ಒಗ್ಗೂಡಿಸಿಕೊಂಡು ದಸರಾ ಹಬ್ಬವನ್ನು ಆಚರಿಸುವುದು ನಮ್ಮ ಉದ್ದೇಶವಾಗಿದೆ. ಸಹಬಾಳ್ವೆಯಿಂದ ಬದುಕುವುದು ನಮ್ಮ ಸಂವಿಧಾನ ಮತ್ತು ಧರ್ಮದ ಸಾರಾಂಶವಾಗಿದೆ. ತಾಯಿ ಚಾಮುಂಡೇಶ್ವರಿ ದೇವಿ ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ ಎಂದು ತಿಳಿಸಿದರು.ಧಾರ್ಮಿಕ ಪೂಜಾ ಕೈಂಕರ್ಯಗಳಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಪ್ರಭು, ಉಪವಿಭಾಗಧಿಕಾರಿ ನಾಹಿದಾ ಜಮ್ ಜಮ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ನಾಗಣ್ಣ, ತಹಸೀಲ್ದಾರ್ ರಾಜೇಶ್ವರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.