ಜಿ ರಾಮ ಜಿಯಿಂದ ಬಡವರ ಹೊಟ್ಟೆಗೆ ತಣ್ಣೀರು ಬಟ್ಟೆ: ಸಂಸದ ರಾಜಶೇಖರ ಹಿಟ್ನಾಳ್‌

KannadaprabhaNewsNetwork |  
Published : Feb 18, 2026, 02:30 AM IST
ಹೂವಿನಹಡಗಲಿ ತಾಲೂಕಿನ ಇಟಿಗಿಯಲ್ಲಿ ಕಾಂಗ್ರೆಸ್‌ ಜಿ ರಾಮ ಜಿ ವಿರುದ್ಧ ಹಮ್ಮಿಕೊಂಡಿರುವ ಪಾದಯಾತ್ರೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂಸದ ರಾಜಶೇಖರ ಹಿಟ್ನಾಳ್‌.  | Kannada Prabha

ಸಾರಾಂಶ

. ಈ ಬಿಜೆಪಿಗರು ಬಡವರ ಕೈಗೆ ಕೆಲಸ ನೀಡುವ ಬದಲು ರಾಮನ ಭಜನೆ ಮಾಡುತ್ತಿದ್ದಾರೆ ಎಂದು ಸಂಸದ ರಾಜಶೇಖರ ಹಿಟ್ನಾಳ್‌ ಆರೋಪಿಸಿದರು.

ಹೂವಿನಹಡಗಲಿ: ಕೇಂದ್ರ ಸರ್ಕಾರ ಮನರೇಗಾ ಬದಲಾಗಿ ಜಾರಿಗೆ ತಂದ ಜಿ ರಾಮ ಜಿ ಯೋಜನೆಯಿಂದ ಬಡವರ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಳ್ಳಬೇಕಾಗುತ್ತದೆ. ರಾಜ್ಯ ಸರ್ಕಾರ ಶೇ. 40ರಷ್ಟು ಅನುದಾನ ನೀಡಬೇಕೆಂದು ಹೇಳುತ್ತಿದೆ. ಈ ಬಿಜೆಪಿಗರು ಬಡವರ ಕೈಗೆ ಕೆಲಸ ನೀಡುವ ಬದಲು ರಾಮನ ಭಜನೆ ಮಾಡುತ್ತಿದ್ದಾರೆ ಎಂದು ಸಂಸದ ರಾಜಶೇಖರ ಹಿಟ್ನಾಳ್‌ ಆರೋಪಿಸಿದರು.

ಬಿಜೆಪಿ ಜಾರಿಗೊಳಿಸಿರುವ ಜಿ ರಾಮ್‌ ಜಿ ಯೋಜನೆ ವಿರೋಧಿಸಿ ಕಾಂಗ್ರೆಸ್ ತಾಲೂಕು ಸಮಿತಿಯಿಂದ ತಾಲೂಕಿನ ಮಹಾಜನದಹಳ್ಳಿಯಿಂದ ಇಟಗಿ ವರೆಗೂ ಪಾದಯಾತ್ರೆ ನಡೆಸಿ, ಇಟಗಿ ಆಂಜನೇಯ ದೇವಸ್ಥಾನದ ಆವರಣದಲ್ಲಿ ಜರುಗಿದ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ದೇಶದ ಬಡವರಿಗೆ ಉದ್ಯೋಗ ನೀಡದೇ ಉದ್ಯೋಗ ಖಾತ್ರಿ ಯೋಜನೆಗೆ ರಾಮನ ಹೆಸರಿಟ್ಟಿದ್ದಾರೆ. ರಾಮನ ಹೆಸರು ಹೇಳಿದರೆ ಯಾರೂ ಕೆಲಸ ಕೇಳಲ್ಲ‌ ಎಂದು ಬಿಜೆಪಿಗರು ನಂಬಿದ್ದಾರೆ ಎಂದು ದೂರಿದರು.

ಬಿಜೆಪಿಗರು ಉದ್ಯೋಗ ಖಾತ್ರಿ ಯೋಜನೆ ಹೆಸರನ್ನಷ್ಟೇ ಬದಲಿಸಿಲ್ಲ, ಯೋಜನೆಯ ಸೌಲಭ್ಯಗಳನ್ನು ಸಂಪೂರ್ಣವಾಗಿ ಬದಲಿಸುತ್ತಿದೆ. ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ದೊರೆತು ವರ್ಷಕ್ಕೆ ₹37 ಸಾವಿರ ಕೂಲಿ ದೊರೆಯುವಂತೆ ಕಾಂಗ್ರೆಸ್ ಯೋಜನೆ ರೂಪಿಸಿತ್ತು. ಈಗ ಬಿಜೆಪಿ ಜಾರಿ ಮಾಡಿರುವ ಯೋಜನೆ ದೇಶಕ್ಕೆ ಮಾರಕವಾಗಿದೆ. ಮಹಾತ್ಮಗಾಂಧಿಯವರು ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ಅವರ ಹೆಸರಿಡಿ, ಹೆಸರು ಬದಲಿಸಿದರೂ ಪರವಾಗಿಲ್ಲ, ಯೋಜನೆಯ ರೂಪ ಬದಲಾಯಿಸಬೇಡಿ. ನಾವು ಕಾಂಗ್ರೆಸಿಗರು ಹೋರಾಟ ಮಾಡಬಾರದು, ಜನರೇ ಯೋಜನೆಯನ್ನು ಉಳಿಸಿಕೊಳ್ಳಲು ಮುಂದಾಗಬೇಕು. ಬಿಜೆಪಿಗರು ಕಾರ್ಪೊರೇಟ್ ಕಂಪನಿಯ ಸಾಲ ಮನ್ನಾ ಮಾಡಿದರು. ಆದರೆ, ಬಡವರಿಗೆ ಸೌಲಭ್ಯ ಒದಗಿಸಲು ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.

ಮಾಜಿ ಶಾಸಕ ಪಿ.ಟಿ. ಪರಮೇಶ್ಚರ ನಾಯ್ಕ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ಜನ ಸೇವೆ ಮಾಡದಿದ್ದರೆ ಇಂದು ಯಾವುದೇ ಉದ್ಯಮಗಳು ಸ್ಥಾಪನೆಯಾಗುತ್ತಿರಲಿಲ್ಲ. ದೇಶವನ್ನು ಕಟ್ಟಿದ್ದು ಕಾಂಗ್ರೆಸ್ ಸರ್ಕಾರ. ಬಿಜೆಪಿಗರು ದೇಶವನ್ನು ಹೊರ ದೇಶಗಳಿಗೆ ಮಾರಾಟ ಮಾಡಲು ಹುನ್ನಾರ ನಡೆಸಿದ್ದಾರೆ ಎಂದು ದೂರಿದರು.

ಪ್ರಧಾನಿ ನರೇಂದ್ರ ಮೋದಿಯವರು ಬಡವರ ಖಾತೆಗೆ ಹಣ, ನಿರುದ್ಯೋಗಿಗಳಿಗೆ ಉದ್ಯೋಗದ ಭರವಸೆ ನೀಡಿದ್ದರು. ಆದರೆ, ಇನ್ನು ಭರವಸೆಯಾಗಿಯೇ ಉಳಿದಿದೆ. ದೇಶದ ಜನರಿಗೆ ನೀಡಿರುವ ಎಲ್ಲ ಭರವಸೆಗಳನ್ನು ಮೊದಲು ಕೇಂದ್ರ ಸರ್ಕಾರ ಈಡೇರಿಸಲಿ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶಿವಯೋಗಿ, ಇಟ್ಟಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ಹನುಮಂತಪ್ಪ, ಹಡಗಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಟವಾಳಗಿ ಕೊಟ್ರೇಶ್, ಜಿಪಂ ಮಾಜಿ ಸದಸ್ಯ ವಿಜಯಕುಮಾರ್, ಕೆಪಿಸಿಸಿ ಮಹಿಳಾ ಕಾರ್ಯದರ್ಶಿ ಎಂ.ಪಿ. ವೀಣಾ ಮಹಾಂತೇಶ್, ಮುಂಖಡರಾದ ಬಸವನಗೌಡ ಪಾಟೀಲ್‌, ಚಂದ್ರಶೇಖರ್ ಭಟ್, ದೂದಾನಾಯ್ಕ, ಜಿ.ವಸಂತ, ಕೆ.ಎಸ್‌. ಶಾಂತನಗೌಡ, ಎಸ್‌. ಹಾಲೇಶ್, ಗುರುವಿನ ರಾಜಣ್ಣ, ಗೀರೀಶ ಅಂಗಡಿ, ಮಂಜುನಾಥ ದೇಸಾಯಿ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಲೀಲಾ ಪಾಟೀಲರಿಗೆ ‘ಸೌಭಾಗ್ಯವತಿ ಸಿಂಧು ಸುಭಾಷ ಮ್ಹಮಾಣೆ ಮಾತೃಶಕ್ತಿ ಪ್ರಶಸ್ತಿ’ ಪ್ರದಾನ
ಅಸಹಜ ಲೈಂಗಿಕ ದೌರ್ಜನ್ಯ ಕೇಸ್‌ : ಸೂರಜ್‌ ರೇವಣ್ಣಗೆ ಕೋರ್ಟ್‌ ಶಾಕ್‌