ಪಡಿ ಅಮಾವಾಸ್ಯೆ, ಗೋಕರ್ಣದಲ್ಲಿ ದಾನ-ಧರ್ಮ ಮಾಡಿದ ಭಕ್ತರು

KannadaprabhaNewsNetwork |  
Published : Feb 18, 2026, 02:30 AM IST
ಮಕ್ಕಳು ಪಡಿ ಪಡೆಯಲು ನಿಂತಿರುವುದು  | Kannada Prabha

ಸಾರಾಂಶ

ಮಾಘ ಅಮಾವಾಸ್ಯೆ ದಿನವಾದ ಮಂಗಳವಾರ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿ ಸಮುದ್ರ ಸ್ನಾನ ಮಾಡಿ, ದೇವರ ದರ್ಶನ ಪಡೆದು, ಮುಖ್ಯ ಕಡಲತೀರದಲ್ಲಿ ನೆರೆದಿದ್ದ ಪಡಿ ಪಡೆಯುವ ಜನರಿಗೆ ಅಕ್ಕಿ, ಬೇಳೆ, ವಿವಿಧ ಧಾನ್ಯ, ಹಣ ಹಾಗೂ ಬಟ್ಟೆಗಳನ್ನು ನೀಡಿದರು.

ಗೋಕರ್ಣ: ಮಾಘ ಅಮಾವಾಸ್ಯೆ ದಿನವಾದ ಮಂಗಳವಾರ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿ ಸಮುದ್ರ ಸ್ನಾನ ಮಾಡಿ, ದೇವರ ದರ್ಶನ ಪಡೆದು, ಮುಖ್ಯ ಕಡಲತೀರದಲ್ಲಿ ನೆರೆದಿದ್ದ ಪಡಿ ಪಡೆಯುವ ಜನರಿಗೆ ಅಕ್ಕಿ, ಬೇಳೆ, ವಿವಿಧ ಧಾನ್ಯ, ಹಣ ಹಾಗೂ ಬಟ್ಟೆಗಳನ್ನು ನೀಡಿದರು.

ಪಡಿ ಅಮಾವಾಸ್ಯೆ ಎಂದೇ ಕರೆಯುವ ಶಿವರಾತ್ರಿ ಮಹೋತ್ಸವ ಏಳನೇ ದಿನದಂದು ಬಡವರಿಗೆ ದಿನಸಿ ಮತ್ತಿತರ ವಸ್ತುಗಳನ್ನು ದಾನ ಮಾಡುವುದು ಈ ಹಿಂದಿನಿಂದಲೂ ಬಂದಿದೆ. ಅದರಂತೆ ಈ ಭಾಗದ ಸುತ್ತಮುತ್ತಲಿನ ಜನರು ಅಪಾರ ಸಂಖ್ಯೆಯಲ್ಲಿ ಆಗಮಿಸಿ ಪಡಿ ನೀಡಿ ಪುನೀತರಾದರು.

ಮಹಾಬಲೇಶ್ವರ ಮಂದಿರದ ಮುಂಭಾಗದ ಮುಖ್ಯ ಕಡಲತೀರಕ್ಕೆ ಸಾಗುವ ಮಾರ್ಗದಿಂದ ಕಡಲತೀರದ ವರೆಗೆ ೩೦೦ ಮೀಟರಗೂ ಹೆಚ್ಚು ದೂರದ ರಸ್ತೆಯ ಎರಡು ಅಂಚಿನಲ್ಲಿ ರಾಜ್ಯದ ವಿವಿಧೆಡೆ ಹಾಗೂ ಹೊರ ರಾಜ್ಯದಿಂದ ಬಂದ ಅಲೆಮಾರಿ ಜನರು (ಭಿಕ್ಷುಕರು) ಇಲ್ಲಿನ ಜನರು ನೀಡುವ ವಸ್ತುಗಳನ್ನು ಪಡೆದುಕೊಂಡರು. ಈ ದಿನ ದಾನ ಮಾಡಿದರೆ ಅಧಿಕ ಫಲ ಸಿಗುತ್ತದೆ ಎಂಬ ನಂಬಿಕೆಯಿದ್ದು, ಪ್ರತಿಯೊಬ್ಬನು ತನ್ನಲ್ಲಿ ಸಾಧ್ಯವಾದಷ್ಟು ಪಡಿ ನೀಡುತ್ತಾರೆ.

ಅಪರ ಕಾರ್ಯ ನೆರವೇರಿಸಿದ ಶ್ರದ್ಧಾಳುಗಳು: ಮಹಾಗಣಪತಿ, ಮಹಾಬಲೇಶ್ವರ ಮಂದಿರದಲ್ಲಿ ದೇವರಿಗೆ ಹಣ್ಣು ಕಾಯಿ ಸೇವೆ ನೀಡಿ, ದೇವರ ದರ್ಶನ ಪಡೆದು, ಪೂಜೆ ನೆರವೇರಿಸಿದ ಜನರು ಬಳಿಕ ದಾನ, ಕುಟುಂಬದಲ್ಲಿನ ಹಿರಿಯರಿಗೆ ಪಿಂಡ ಪ್ರದಾನ, ಮತ್ತಿತರ ಅಪರ ಕಾರ್ಯವನ್ನು ಪುರೋಹಿತರ ಮೂಲಕ ನೆರವೇರಿಸಿದರು.

ಎಲ್ಲ ದೇವಾಲಯದಲ್ಲಿ ಜನದಟ್ಟಣೆ: ಅಂಕೋಲಾ, ಕುಮಟಾ ಸೇರಿದಂತೆ ಜಿಲ್ಲೆಯ ವಿವಿಧೆಡೆಯವರು ಹಾಗೂ ಇಲ್ಲಿನ ಗ್ರಾಮೀಣ ಪ್ರದೇಶದವರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ಬಂದಿದ್ದು, ಮಹಾಗಣಪತಿ, ಮಹಾಬಲೇಶ್ವ ಮಂದಿರದಲ್ಲಿ ಸರದಿ ಸಾಲು ನೆರೆದಿತ್ತು. ಇದರಂತೆ ವೆಂಕಟ್ರಮಣ ದೇವಾಲಯದಲ್ಲಿ ಸಹ ಭಕ್ತರ ಹೆಚ್ಚಾಗಿದ್ದರು.

ಮಕ್ಕಳೆ ಜಾಸ್ತಿ: ಪ್ರತಿ ವರ್ಷ ಇನ್ನೂರಕ್ಕೂ ಹೆಚ್ಚು ಭಿಕ್ಷುಕರು ಅಂದರೆ ಅಲೆಮಾರಿ ಜನರು ಇಲ್ಲಿಗೆ ಆಗಮಿಸುತ್ತಾರೆ. ಕಾಲು, ಕೈ ಇಲ್ಲದವರು, ಅಂಗವಿಕಲರು ಹೆಚ್ಚಿರುತ್ತಾರೆ. ಈ ವರ್ಷ ಚಿಕ್ಕಮಕ್ಕಳು ಹೆಚ್ಚಿನ ಸಂಖ್ಯೆಯಲಿರುವುದು ಕಂಡು ಬಂತು. ಜಾತ್ರೆ, ತೇರು ಮತ್ತಿತರ ಕಾರ್ಯಕ್ರಮಕ್ಕೆ ಮಕ್ಕಳನ್ನು ತಂದು ಬಿಡುವ ಜಾಲವಿದೆ ಎನ್ನುವ ಜನರ ಅನುಮಾನ ಬಲವಾಗುತ್ತಿದೆ. ಜಾತ್ರೆಗಳಲ್ಲಿ ಮಕ್ಕಳನ್ನು ಈ ತರಹ ಬಳಸಿಕೊಳ್ಳುವ ಸಾಧ್ಯತೆ ಬಗ್ಗೆ ಮುಂಜಾಗ್ರತವಾಗಿ ಸಭೆಯಲ್ಲಿ ಚರ್ಚಿತವಾದರೂ ವಿವಿಧ ಇಲಾಖೆಗಳ ಜಂಟಿ ಕಾರ್ಯಾಚರಣೆ ಜಾತ್ರೆ ವೇಳೆಯಲ್ಲಿ ಅಷ್ಟಾಗಿ ಕಂಡು ಬಂದಿರಲಿಲ್ಲ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫೆ. 27ರಿಂದ ನೀರಿಗಾಗಿ ಹೆಜ್ಜೆ ಹಾಕಿ ಜನಜಾಗೃತಿ ಪಾದಯಾತ್ರೆ
ಸಮಾಜಸೇವೆ ಗುಣ ಬೆಳೆಸಿಕೊಳ್ಳಿ: ಅಭಿನವ ಮೃತ್ಯುಂಜಯ ಸ್ವಾಮೀಜಿ