ಗದಗ ಬೆಟಗೇರಿ ನಗರಸಭೆ ಚುನಾವಣೆ, ಜಿಲ್ಲಾಡಳಿತದ ತಪ್ಪೊಪ್ಪಿಗೆ

KannadaprabhaNewsNetwork |  
Published : Mar 03, 2026, 02:00 AM IST
2ಜಿಡಿಜಿ20 | Kannada Prabha

ಸಾರಾಂಶ

ಸಂಖ್ಯಾಬಲ ಕುಸಿತದ ಹಿನ್ನೆಲೆ ಬಿಜೆಪಿ ಸದಸ್ಯರು ಧಾರವಾಡ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅವರ ಅನರ್ಹತೆಗೆ ಹೈಕೋರ್ಟ್ ಫೆ. 28ರಂದೇ ತಡೆಯಾಜ್ಞೆ ನೀಡಿತ್ತು.

ಶಿವಕುಮಾರ ಕುಷ್ಟಗಿ

ಗದಗ: ಕಳೆದ ಒಂದು ವರ್ಷದಿಂದ ಕಾನೂನು ಹೋರಾಟಕ್ಕೆ ಸಾಕ್ಷಿಯಾಗಿದ್ದ ಗದಗ- ಬೆಟಗೇರಿ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯ ವಿಚಾರಣೆ ಮಾ. 2ರಂದು ನಡೆದಿದ್ದು, ನ್ಯಾಯಾಲಯದ ಆದೇಶ ಉಲ್ಲಂಘಿಸಿ ಚುನಾವಣೆ ನಡೆಸಿದ್ದ ಚುನಾವಣಾಧಿಕಾರಿಗಳು ಮತ್ತು ಜಿಲ್ಲಾಡಳಿತವು ರಾಜ್ಯ ಉಚ್ಚ ನ್ಯಾಯಾಲಯಕ್ಕೆ ತಪ್ಪೊಪ್ಪಿಗೆ ಪತ್ರ ಸಲ್ಲಿಸಿದ ವಿಷಯ ಪ್ರಸ್ತಾಪಿಸಿ ಪ್ರಕರಣವನ್ನು ನ್ಯಾಯಾಧೀಶರು ಕೈಬಿಟ್ಟಿದ್ದಾರೆ.

2025ರ ​ಫೆ. 28ರಂದು ಗದಗ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಬಿಜೆಪಿಯ 3 ಜನ ಸದಸ್ಯರ ಸದಸ್ಯತ್ವವನ್ನು ಬೆಳಗಾವಿ ಪ್ರಾದೇಶಿಕ ಆಯುಕ್ತರು ರದ್ದುಗೊಳಿಸಿದ್ದರು. ಈ ಹಿನ್ನೆಲೆ ಬಿಜೆಪಿ ಸದಸ್ಯರ ಸಂಖ್ಯಾಬಲ 15ಕ್ಕೆ ಕುಸಿದಿತ್ತು. 17 ಸದಸ್ಯರ ಬಲ ಹೊಂದಿದ್ದ ಕಾಂಗ್ರೆಸ್ ಸಹಜವಾಗಿಯೇ 35 ಸದಸ್ಯ ಬಲ ಹೊಂದಿರುವ ನಗರಸಭೆಯಲ್ಲಿ ಕಾಂಗ್ರೆಸ್ ಬಹುಮತ ಪಡೆಯುತ್ತಿತ್ತು. ಪರಿಸ್ಥಿತಿಯ ಲಾಭವನ್ನು ಪಡೆದ, ಕಾಂಗ್ರೆಸ್ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಚುನಾವಣೆಗೆ ದಿನಾಂಕ ಮಾಡಿಸಿತ್ತು.

ಹೈಡ್ರಾಮಾ: ಸಂಖ್ಯಾಬಲ ಕುಸಿತದ ಹಿನ್ನೆಲೆ ಬಿಜೆಪಿ ಸದಸ್ಯರು ಧಾರವಾಡ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅವರ ಅನರ್ಹತೆಗೆ ಹೈಕೋರ್ಟ್ ಫೆ. 28ರಂದೇ ತಡೆಯಾಜ್ಞೆ ನೀಡಿತ್ತು. ಇದೆಲ್ಲರ ಮಧ್ಯೆ ಅಂದು ಚುನಾವಣಾಧಿಕಾರಿಯಾಗಿದ್ದ ಎಸಿ ಗಂಗಪ್ಪ ಅವರು ಚುನಾವಣೆ ನಡೆಸಿದ್ದರು. ಅಂದು ​ಮಧ್ಯಾಹ್ನ 1ಕ್ಕೆ ವಿಚಾರಣೆ ನಡೆಸಿದ ಹೈಕೋರ್ಟ್, ಮಧ್ಯಾಹ್ನ 1.40ಕ್ಕೆ ಚುನಾವಣಾ ಪ್ರಕ್ರಿಯೆಯನ್ನು ಮುಂದೂಡುವಂತೆ ಸ್ಪಷ್ಟ ಆದೇಶ ನೀಡಿತ್ತು. ಆದರೆ ಚುನಾವಣಾಧಿಕಾರಿಗಳು ಹೈಕೋರ್ಟನ ತಡೆಯಾಜ್ಞೆ ಪತ್ರ ನಮಗೆ ಕೈ ಸೇರಿಲ್ಲ, ನಾವು ಚುನಾವಣೆ ನಡೆಸುತ್ತೇವೆ ಎಂದು ಚುನಾವಣೆ ನಡೆಸಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಘೋಷಣೆ ಕೂಡಾ ಮಾಡಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ಕೂಡಾ ನಡೆದಿತ್ತು. ​ಜಿಲ್ಲಾಡಳಿತದ ತಪ್ಪೊಪ್ಪಿಗೆ: ​ನ್ಯಾಯಾಲಯದ ಆದೇಶವಿದ್ದರೂ ಚುನಾವಣೆ ನಡೆಸಿದ್ದನ್ನು ಪ್ರಶ್ನಿಸಿ ಬಿಜೆಪಿ ಸದಸ್ಯರು ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದರು. ಸುದೀರ್ಘ ಕಾನೂನು ಹೋರಾಟದ ನಂತರ, ಚುನಾವಣಾಧಿಕಾರಿ ಗಂಗಪ್ಪ ಎಂ. ಮತ್ತು ಜಿಲ್ಲಾಡಳಿತಕ್ಕೆ ತಮ್ಮ ತಪ್ಪಿನ ಅರಿವಾಗಿ ಹಲವಾರು ದಿನಗಳ ಹಿಂದೆಯೇ ಹೈಕೋರ್ಟ್‌ಗೆ ಸಲ್ಲಿಸಿದ ಅಫಿಡಿವಿಟ್‌ನಲ್ಲಿ, ಈ ಹಿಂದೆ ನಡೆದ ಚುನಾವಣೆಯನ್ನು ರದ್ದುಗೊಳಿಸಲಾಗಿದೆ ಮತ್ತು ಹೊಸ ಚುನಾವಣೆಗೆ ಅವಕಾಶ ಮಾಡಿಕೊಡಲಾಗಿದೆ. ಈ ವಿಷಯದಲ್ಲಿ ನಮ್ಮಿಂದ ಆಗಿರುವ ಲೋಪಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ, ನ್ಯಾಯಾಲಯ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೈಬಿಡಬೇಕು ಎಂದು ಅಫಿಡವಿಟ್ ಸಲ್ಲಿಸಿದ್ದರು. ಅದರ ವಿಚಾರಣೆಯನ್ನು ಮಾ. 2ರಂದು ನಡೆಸಿದ ನ್ಯಾಯಾಧೀಶರು ಅದನ್ನು ಪರಿಗಣಿಸಿ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೈಬಿಟ್ಟಿದ್ದಾರೆ.

ಮುಖಭಂಗ: ಕೋರ್ಟ್ ಆದೇಶದ ನಂತರವೂ ಯಾರದ್ದೋ ಮುಲಾಜಿಗೆ ಬಿದ್ದು ಚುನಾವಣೆ ನಡೆಸಿದ್ದ ಚುನಾವಣಾಧಿಕಾರಿಗಳ ಮೇಲೆ ನಾವು ಹೂಡಿದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿ ಅವರಿಗೆ ಸೂಕ್ತ ತಿಳಿವಳಿಕೆ ನೀಡಿತ್ತು. ಈಗ ಕೋರ್ಟ್‌ಗೆ ತಪ್ಪೊಪ್ಪಿಗೆ ಪತ್ರ ನೀಡಿದ್ದರಿಂದ ಪ್ರಕರಣ ಇತ್ಯರ್ಥಗೊಂಡಿದೆ. ಕಾನೂನು ನ್ಯಾಯದ ಪರವಾಗಿರುತ್ತದೆ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ. ಕಾನೂನು ಸಮರದಲ್ಲಿ ನಮಗೆ ಗೆಲವು ಸಿಕ್ಕಿದೆ. ಜಿಲ್ಲಾಡಳಿತಕ್ಕೆ ಮುಖಭಂಗವಾಗಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷರಾದ ಉಷಾ ದಾಸರ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಡಿನ ಅಭ್ಯುದಯಕ್ಕಾಗಿ ವಾಲ್ಮೀಕಿ ಸಮಾಜ ಹೋರಾಟ-ಸಚಿವ ಜಾರಕಿಹೊಳಿ
ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ: ಸಂಜೀವರೆಡ್ಡಿ