ಗದಗ ಜಿಲ್ಲೆಯ ಗುತ್ತಿಗೆದಾರರ ₹ 245 ಕೋಟಿ ಬಾಕಿ!

KannadaprabhaNewsNetwork |  
Published : Jan 19, 2025, 02:15 AM IST
ಸಿದ್ದು ಪಾಟೀಲ (ಹುಲ್ಲೂರು). ಗದಗ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ. | Kannada Prabha

ಸಾರಾಂಶ

ಬೆಳಗಾವಿ ಅಧಿವೇಶನದ ವೇಳೆಯಲ್ಲಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಸರ್ಕಾರಕ್ಕೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ

ಶಿವಕುಮಾರ ಕುಷ್ಟಗಿ ಗದಗ

ಗುತ್ತಿಗೆದಾರರು ₹ 32 ಸಾವಿರ ಕೋಟಿ ಬಾಕಿ ಹಣ ಬಿಡುಗಡೆ ವಿಷಯವಾಗಿ 8 ಜನ ಸಚಿವರಿಗೆ ಪತ್ರ ಬರೆದು ನಮಗೆ ಬರಬೇಕಾದ ಹಣ ತಕ್ಷಣವೇ ನೀಡುವಂತೆ ಆಗ್ರಹಿಸಿದ್ದು ರಾಜ್ಯಾದ್ಯಂತ ತೀವ್ರ ಸಂಚಲನಕ್ಕೆ ಕಾರಣವಾಗಿದೆ. ಅದರ ಭಾಗ ಎನ್ನುವಂತೆ ಗದಗ ಜಿಲ್ಲೆಯಲ್ಲಿಯೂ ₹245 ಕೋಟಿ ಅಧಿಕ ಬಾಕಿ ಇದ್ದು, ಬಾಕಿ ಹಣಕ್ಕಾಗಿ ಜಿಲ್ಲೆಯ ಗುತ್ತಿಗೆದಾರರು ಪರದಾಡುತ್ತಿದ್ದಾರೆ.

ಬೆಳಗಾವಿ ಅಧಿವೇಶನದ ವೇಳೆಯಲ್ಲಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಸರ್ಕಾರಕ್ಕೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಹಿಂದಿನ ಸರ್ಕಾರದ ಅವಧಿಯಲ್ಲಿ ಮಾಡಿದ ಕಾಮಗಾರಿ ಹಣವೇ ಇದುವರೆಗೂ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಗುತ್ತಿಗೆದಾರರ ಕುಟುಂಬಗಳು ಕಂಗಾಲಾಗಿವೆ.

₹145 ಕೋಟಿ ಲೋಕೋಪಯೋಗಿ ಬಾಕಿ: ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆಯಡಿಯಲ್ಲಿ ಈಗಾಗಲೇ ಪೂರ್ಣಗೊಂಡಿರುವ ನೂರಕ್ಕೂ ಅಧಿಕ ಕಾಮಗಾರಿಗಳ ಬಾಕಿ ಹಣ ₹145 ಕೋಟಿ ಸರ್ಕಾರದಿಂದ ಬರಬೇಕಾಗಿದ್ದು, ಇದಕ್ಕಾಗಿ ನಿತ್ಯವೂ ಇಲಾಖೆಗೆ ಅಲೆಯುವಂತಹ ಸ್ಥಿತಿ ಗುತ್ತಿಗೆದಾರರಿಗೆ ನಿರ್ಮಾಣವಾಗಿದೆ. ಇದಕ್ಕೆ ಕೊನೆ ಇಲ್ಲವೇ ಎಂದು ಗುತ್ತಿಗೆದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನುಳಿದ ಇಲಾಖೆಯಲ್ಲಿಯೂ ಬಾಕಿ:ಕೇವಲ ಲೋಕೋಪಯೋಗಿ ಮಾತ್ರವಲ್ಲ, ಪಿಆರ್ ಇಡಿಯಲ್ಲಿ ₹70 ಕೋಟಿ ಹಾಗೂ ಸಣ್ಣ ನೀರಾವರಿ ಇಲಾಖೆಯಲ್ಲಿ ಅಂದಾಜು ₹30 ಕೋಟಿ ಬಾಕಿ ಇದ್ದು, ಈ ಹಣವೂ ಸಾಧ್ಯವಾದಷ್ಟು ಬೇಗನೇ ಬಿಡುಗಡೆಯಾಗಬೇಕಿದೆ. ಗುತ್ತಿಗೆದಾರರು ಈಗಾಗಲೇ ಕಾಮಗಾರಿ ಪೂರ್ಣಗೊಳಿಸಿ ವರ್ಷವೇ ಗತಿಸಿದೆ. ಕಾಮಗಾರಿ ಪೂರ್ಣಗೊಳಿಸಲು ಮನೆ ಬಂಗಾರ ಅಡವಿಡುವುದು, ಹಣ ಪಾವತಿ ವಿಳಂಬದಿಂದ ಅದರ ಬಡ್ಡಿ ಕಟ್ಟಲು ಸಾಧ್ಯವಾಗದೇ ಸಮಸ್ಯೆ ಸುಳಿಯಲ್ಲಿ ಗುತ್ತಿಗೆದಾರರು ಸಿಲುಕಿಕೊಂಡಿದ್ದಾರೆ.

21 ತಿಂಗಳಿಂದ ಹಣ ಬಂದಿಲ್ಲ: ನಾವು ಕಾಮಗಾರಿ ಪೂರ್ಣಗೊಳಿಸಿ ಹಲವಾರು ತಿಂಗಳು ಕಳೆದಿದೆ. ಆದರೆ ಸರ್ಕಾರದಿಂದ ಗುತ್ತಿಗೆದಾರರಿಗೆ ಹಣ ಬರದೇ 21 ತಿಂಗಳೇ ಕಳೆದು ಹೋಗಿದೆ. ಕಳೆದ ತಿಂಗಳು ಅಲ್ಪ ಪ್ರಮಾಣದಲ್ಲಿ ಹಣ ಬಿಡುಗಡೆಯಾಗಿದ್ದರೂ ನಾವು ಮಾಡಿದ ಒಟ್ಟು ಕಾಮಗಾರಿಯ ಶೇ. 5ರಿಂದ 10ರಷ್ಟು ಹಣ ಮಾತ್ರವೇ ಬಿಡುಗಡೆ ಮಾಡಿದ್ದು, ಇದು ಕಾಮಗಾರಿ ಪೂರ್ಣಗೊಳಿಸಲು ಮಾಡಿದ ಸಾಲದ ಬಡ್ಡಿ ಭರ್ತಿ ಮಾಡಲು ಆಗುತ್ತಿಲ್ಲ ಎನ್ನುತ್ತಾರೆ ಗುತ್ತಿಗೆದಾರರು.

ಕಳೆದ 21 ತಿಂಗಳಿಂದ ಗುತ್ತಿಗೆದಾರರು ನಿರ್ವಹಿಸಿದ ಕಾಮಗಾರಿಗಳಿಗೆ ಹಣ ಪಾವತಿಯಾಗದೇ ಇರುವುದರಿಂದ ನಾವು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ. ಹಲವಾರು ಗುತ್ತಿಗೆದಾರರು ಆರ್ಥಿಕ ಸಂಕಷ್ಟದಿಂದ ಕುಟುಂಬ ತೊರೆದು ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ. ಇನ್ನು ಕೆಲವು ಗುತ್ತಿಗೆದಾರರು ಆತ್ಮಹತ್ಯೆಯಂತಹ ವಿಷಮ ದಾರಿ ತುಳಿದಿದ್ದಾರೆ. ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಕೊಟ್ಟ ಮಾತಿನಂತೆ ಜ. 15ರೊಳಗಾಗಿ ನಮ್ಮ ಬಾಕಿಯಲ್ಲಿನ ಶೇ. 50ರಷ್ಟಾದರೂ ಹಣ ಬಿಡುಗಡೆ ಮಾಡಬೇಕಿತ್ತು. ಆದರೆ ಇದುವರೆಗೂ ಯಾವುದೇ ಹಣ ಪಾವತಿಯಾಗಿಲ್ಲ. ಈ ತಿಂಗಳ ಅಂತ್ಯದೊಳಗಾಗಿ ಹಣ ಪಾವತಿಯಾಗದೇ ಇದ್ದಲ್ಲಿ ರಾಜ್ಯ ಸಂಘದ ನಿರ್ಧಾರದಂತೆ ತೀವ್ರ ಹೋರಾಟ ಮಾಡಲಾಗುವುದು ಎಂದು ಗದಗ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸಿದ್ದು ಪಾಟೀಲ (ಹುಲ್ಲೂರು) ತಿಳಿಸಿದ್ದಾರೆ.

ಲೋಕೋಪಯೋಗಿ ಇಲಾಖೆಯಲ್ಲಿ ಈಗಾಗಲೇ ₹165 ಕೋಟಿ ಬಾಕಿ ಹಣ ಗುತ್ತಿಗೆದಾರರಿಗೆ ಪಾವತಿ ಮಾಡಲಾಗಿದೆ. ಇನ್ನುಳಿದ ₹145 ಕೋಟಿ ಬಾಕಿ ಹಣ ಸರ್ಕಾರದಿಂದ ಬಂದ ತಕ್ಷಣವೇ ಪಾವತಿಯಾಗಲಿದೆ. ಇನ್ನುಳಿದ ಇಲಾಖೆಯ ಬಾಕಿ ಹಣದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಗದಗ ಲೋಕೋಪಯೋಗಿ ಇಲಾಖೆ ಇಇ ವಿ.ಎನ್. ಪಾಟೀಲ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ