ಡಿಜಿಟಲೀಕರಣಕ್ಕೆ ಗದಗ ಜಿಲ್ಲೆಯ ಸಹಕಾರ ಸಂಘಗಳ ನಿರಾಸಕ್ತಿ

KannadaprabhaNewsNetwork |  
Published : Feb 12, 2026, 02:45 AM IST
ಸಹಕಾರ ಇಲಾಖೆಯ ಲೋಗೋ.  | Kannada Prabha

ಸಾರಾಂಶ

ಪಾರದರ್ಶಕ ವ್ಯವಸ್ಥೆ ಜಾರಿಗೆ ಬಂದರೆ ತಮ್ಮ ಪ್ರಭಾವ ಕುಗ್ಗಬಹುದು ಮತ್ತು ಅಕ್ರಮಗಳಿಗೆ ಕಡಿವಾಣ ಬೀಳಬಹುದು ಎಂಬ ಕಾರಣಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಆಡಳಿತ ಮಂಡಳಿಗಳು ಡಿಜಿಟಲೀಕರಣಕ್ಕೆ ಒಳಗೊಳಗೆ ವಿರೋಧ ವ್ಯಕ್ತಪಡಿಸುತ್ತಿವೆ.

ಶಿವಕುಮಾರ ಕುಷ್ಟಗಿ

ಗದಗ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ಪ್ಯಾಕ್ಸ್)ಗಳು ಜಿಲ್ಲೆಯ ರೈತಾಪಿ ವರ್ಗದ ಹಣಕಾಸಿನ ಅಗತ್ಯತೆಯನ್ನು ಪೂರೈಕೆ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಿವೆ. ಆದರೆ ಇವುಗಳ ಡಿಜಿಟಲೀಕರಣದಲ್ಲಿ ತೀವ್ರ ವಿಳಂಬವಾಗುತ್ತಿದೆ.

ಗ್ರಾಮೀಣ ಭಾಗದಲ್ಲಿನ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಆಧುನೀಕರಿಸುವುದು ಹಾಗೂ ಅಪೆಕ್ಸ್ ಮತ್ತು ಡಿಸಿಸಿ ಬ್ಯಾಂಕ್‌ಗಳ ಮಾದರಿಯಲ್ಲಿ ಏಕೀಕೃತ ತಂತ್ರಾಂಶ ಅಳವಡಿಸುವುದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆಗಿದ್ದರೂ ಜಿಲ್ಲೆಯಲ್ಲಿ ಇದುವರೆಗೂ ಈ ಯೋಜನೆಯಲ್ಲಿ ಯಾವುದೇ ಪ್ರಗತಿಯನ್ನು ಕಂಡಿಲ್ಲ.ಯೋಜನೆ ಹಿನ್ನೆಲೆ: ಕೇಂದ್ರ ಸರ್ಕಾರವು ದೇಶಾದ್ಯಂತ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳನ್ನು ಗಣಕೀಕರಿಸಿ, ಪಾರದರ್ಶಕತೆ ತರುವ ಉದ್ದೇಶದಿಂದ ಇಂಟಲೆಕ್ಟ್ ಎಂಬ ಏಕೀಕೃತ ತಂತ್ರಾಂಶವನ್ನು ಪರಿಚಯಿಸಿದೆ. 2020ರಲ್ಲೇ ಈ ಯೋಜನೆ ಜಾರಿಯಾಗಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರ ₹2500 ಕೋಟಿ ಮೀಸಲಿಟ್ಟಿದೆ. ಆದರೆ ಈ ಯೋಜನೆ ಜಿಲ್ಲೆಯಲ್ಲಿ ಮಾತ್ರ ನೆಪಮಾತ್ರಕ್ಕೆ ಎನ್ನುವಂತಾಗಿದೆ.ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ಇರುವುದು ಒಟ್ಟು 182 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು. ಅವುಗಳಲ್ಲಿ ಈ ಯೋಜನೆ ಅನುಷ್ಠಾನಕ್ಕಾಗಿ ಆಯ್ಕೆಯಾಗಿರುವುದು 161 ಸಂಘಗಳು ಮಾತ್ರ. ಇವುಗಳಲ್ಲಿ ಸಧ್ಯ ಇಲಾಖೆಯ ಮಾಹಿತಿ ಆಧಾರದಲ್ಲಿ ಗಣಕೀಕರಣ ಪ್ರಕ್ರಿಯೆ ಚಾಲನೆಯಲ್ಲಿರುವುದು ಕೇವಲ 135 ಸಂಘಗಳಲ್ಲಿ. ಆದರೆ ಇದುವರೆಗೂ ಯಾವುದೇ ಸಂಘಗಳಲ್ಲಿಯೂ ಈ ಯೋಜನೆ ಪೂರ್ಣಗೊಂಡಿಲ್ಲ. ಜಿಲ್ಲೆಯಲ್ಲಿ ಶೇ. 40ಕ್ಕಿಂತಲೂ ಅಧಿಕ ಕೆಲಸ ಪ್ರಾರಂಭವೇ ಆಗಿಲ್ಲ. ಪ್ರಗತಿಗೆ ಹಲವು ತೊಡಕುಗಳು: ಯೋಜನೆಯ ಪ್ರಗತಿಯಾಗದೇ ಇರಲು ವಾಸ್ತವದಲ್ಲಿ ಹಲವಾರು ತೊಡಕಗಳು ಸಂಸ್ಥೆಗಳಿಂದಲೇ ಕಂಡುಬರುತ್ತಿವೆ. ಮುಖ್ಯವಾಗಿ ಆಡಳಿತ ಮಂಡಳಿಗಳ ವಿರೋಧ ಕೇಳಿ ಬರುತ್ತಿದೆ. ಪಾರದರ್ಶಕ ವ್ಯವಸ್ಥೆ ಜಾರಿಗೆ ಬಂದರೆ ತಮ್ಮ ಪ್ರಭಾವ ಕುಗ್ಗಬಹುದು ಮತ್ತು ಅಕ್ರಮಗಳಿಗೆ ಕಡಿವಾಣ ಬೀಳಬಹುದು ಎಂಬ ಕಾರಣಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಆಡಳಿತ ಮಂಡಳಿಗಳು ಡಿಜಿಟಲೀಕರಣಕ್ಕೆ ಒಳಗೊಳಗೆ ವಿರೋಧ ವ್ಯಕ್ತಪಡಿಸುತ್ತಿವೆ.

ಸಹಕಾರ ಸಂಘಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಕಂಪ್ಯೂಟರ್ ನಿರ್ವಹಣೆ ಮತ್ತು ಹೊಸ ತಂತ್ರಾಂಶಗಳ ಬಳಕೆಯ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದಿರುವುದು ಯೋಜನೆ ವಿಳಂಬವಾಗಲು ಮತ್ತೊಂದು ಪ್ರಮುಖ ಕಾರಣವಾಗಿದೆ. ಡಿಜಿಟಲೀಕರಣ ಆಗದಿದ್ದರೆ ಹಳೆಯ ಪದ್ಧತಿಯಲ್ಲೇ ಲೆಕ್ಕಪತ್ರಗಳನ್ನು ತಿದ್ದಲು ಅವಕಾಶ ಸಿಗುತ್ತದೆ ಎನ್ನುವ ಮನೋಭಾವನೆಯಲ್ಲಿ ಸಹಕಾರ ಇಲಾಖೆಯಲ್ಲಿನ ಕೆಲ ಅಧಿಕಾರಿಗಳು ಇಂದಿಗೂ ವರ್ತಿಸುತ್ತಿದ್ದಾರೆ.

ವೈಫಲ್ಯಕ್ಕೆ ಹಿಡಿದ ಕನ್ನಡಿ: ಆರು ವರ್ಷಗಳ ಹಿಂದೆ ಆರಂಭವಾದ ಈ ಯೋಜನೆ ಜಿಲ್ಲೆಯಲ್ಲಿ ಇಂದಿಗೂ ಕುಂಟುತ್ತಿರುವುದು ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿ. ಕೇವಲ ಹಣ ಮೀಸಲಿಟ್ಟರೆ ಸಾಲದು. ಸ್ಥಳೀಯ ಹಿತಾಸಕ್ತಿಗಳನ್ನು ಬದಿಗೊತ್ತಿ ಕಟ್ಟುನಿಟ್ಟಾಗಿ ಏಕೀಕೃತ ವ್ಯವಸ್ಥೆ ಜಾರಿಗೆ ತಂದಾಗ ಮಾತ್ರ ರೈತರ ಬೆವರಿನ ಹಣಕ್ಕೆ ರಕ್ಷಣೆ ಸಿಗಲು ಸಾಧ್ಯ. ಈ ನಿಟ್ಟಿನಲ್ಲಿ ಜಿಲ್ಲೆಯ ಹಿರಿಯ ಅಧಿಕಾರಿಗಳು ಗಮನ ಹರಿಸಬೇಕು ಎಂದು ಜೆಡಿಎಸ್ ರಾಜ್ಯ ವಕ್ತಾರ ವಿ.ಆರ್. ಗೋವಿಂದಗೌಡ್ರ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಬಲೀಕರಣ ಆಸೆ ಬಿಜೆಪಿಯಿಂದ ಸಾಕಾರ
ಶೈಕ್ಷಣಿಕ ಹಿತದೃಷ್ಟಿಯಿಂದ ೧೨ ವಸತಿ ನಿಲಯಗಳು ಮಂಜೂರು