ಲಕ್ಷ್ಮೇಶ್ವರ ಆದಿಕವಿ ಪಂಪ ವೇದಿಕೆ): ಕನ್ನಡ ನಾಡಿಗೆ ಕರ್ನಾಟಕ ಎಂದು ನಾಮಕರಣವಾಗಲು ಗದಗ ಜಿಲ್ಲೆಯ ಕೊಡುಗೆ ಅಪಾರವಾಗಿದ್ದು, ರೋಣ ತಾಲೂಕಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಅಂದಾನೆಪ್ಪ ದೊಡ್ಡಮೇಟಿಯವರ ಕರ್ನಾಟಕ ಎಂದು ನಾಮಕರಣ ಮಾಡುವ ನಿಟ್ಟಿನಲ್ಲಿ ಪ್ರಮುಖ ರೂವಾರಿಗಳಾಗಿದ್ದರು ಎಂದು ಶಿರಹಟ್ಟಿ-ಬಾಲೇಹೊಸೂರು ಸಂಸ್ಥಾನಪೀಠದ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ನುಡಿದರು.
ಇತ್ತೀಚಿನ ದಿನಗಳಲ್ಲಿ ಕನ್ನಡ ಮಾತನಾಡವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವುದು ವಿಷಾದದ ಸಂಗತಿಯಾಗಿದೆ. ಆಳುವ ಸರ್ಕಾರಗಳು ಕನ್ನಡ ಕಲಿತ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಪ್ರಥಮ ಆದ್ಯತೆ ನೀಡುವ ಕಾರ್ಯವಾಗಬೇಕು. ಅಂದಾಗ ಮಾತ್ರ ಕನ್ನಡ ಕಲಿಯುವವರ ಸಂಖ್ಯೆ ಹೆಚ್ಚುತ್ತದೆ. ನಾಡಿನಲ್ಲಿ ಕನ್ನಡ ನಾಶವಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಮೊದಲು ಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಸಂಸತ್ತಿನಲ್ಲಿ ಮೊದಲು ಕನ್ನಡದಲ್ಲಿ ಮಾತನಾಡಿದ ಕೀರ್ತಿ ಜೆ.ಎಚ್. ಪಟೇಲರಿಗೆ ಸಲ್ಲುತ್ತದೆ. ರಾಜ್ಯಕ್ಕೆ ಕನ್ನಡ, ದೇಶಕ್ಕೆ ಹಿಂದಿ ಹಾಗೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಇಂಗ್ಲಿಷ್ ಅವಶ್ಯ. ಕನ್ನಡ ಬಗ್ಗೆ ಅಭಿಮಾನವಿರಲಿ, ಆದರೆ ಬೇರೆ ಭಾಷೆಗಳ ಬಗ್ಗೆ ದುರಾಭಿಮಾನ ಬೆಳೆಸಿಕೊಳ್ಳಬೇಡಿ. ಕನ್ನಡ ಶಾಲೆಗಳನ್ನು ಮುಚ್ಚುವುದು ಬೇಡ. ಅವುಗಳನ್ನು ಬೆಳೆಸುವ ಕಾರ್ಯವಾಗಲಿ. ಹೆಸರಿಗಾಗಿ ಬಡಿದಾಡದೆ ಕನ್ನಡದ ಉಸಿರಿಗಾಗಿ ಬಡಿದಾಡಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಹಾಗೂ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಕನ್ನಡ ಉಳಿದಿರುವುದು ಗ್ರಾಮೀಣ ಭಾಗದಲ್ಲಿ ಮಾತ್ರ. ಸಾವಿರಾರು ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಕನ್ನಡ ಭಾಷೆಯ ಬಗ್ಗೆ ಜನರಲ್ಲಿ ಇರುವ ಕೀಳರಿಮೆ ಕಡಿಮೆಯಾಗಬೇಕು. ಕನ್ನಡ ಭಾಷೆ ಬಗ್ಗೆ ಅಭಿಮಾನವಿರಬೇಕು. ಸಮ್ಮೇಳನ ಮಾಡುವ ಉದ್ದೇಶ ಕನ್ನಡದ ಮಹತ್ವವನ್ನು ಪ್ರತಿಯೊಬ್ಬರಿಗೆ ತಿಳಿಯುವಂತೆ ಮಾಡುವುದು ಮುಖ್ಯವಾಗಿದ್ದು, ಪ್ರತಿವರ್ಷ ಸಮ್ಮೇಳನ ನಡೆಯುವಂತಾಗಬೇಕು. ಇದಕ್ಕೆ ಪ್ರತಿಯೊಬ್ಬ ಕನ್ನಡಿಗರು ಕೈಜೋಡಿಸಬೇಕಾಗಿದೆ. ತಾಲೂಕು ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಸಮ್ಮೇಳನಗಳು ಪ್ರತಿವರ್ಷ ನಡೆದು ಮಹತ್ವ ತಿಳಿಸುವ ಕಾರ್ಯವಾಗಲಿ. ಲಕ್ಷ್ಮೇಶ್ವರದಲ್ಲಿ ಕಸಾಪ ಭವನ ಅರ್ಧಕ್ಕೆ ನಿಂತಿದೆ. ಅದನ್ನು ಪೂರ್ಣಗೊಳಿಸಲು ಎಲ್ಲ ಪ್ರಯತ್ನ ಮಾಡಲಾಗುವುದು ಎಂದರು.ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ ಮಾತನಾಡಿ, ಎಲ್ಲಿ ಕನ್ನಡ ಉಳಿಯಬೇಕಾಗಿದೆಯೋ ಅಲ್ಲಿ ಕನ್ನಡ ಉಳಿಯುತ್ತಿಲ್ಲ. ಅಡುಗೆ ಮನೆಯಿಂದ ಆಡಳಿತ ವರೆಗೂ ಕನ್ನಡ ಉಳಿಸಿದವರು ಹೆಣ್ಣುಮಕ್ಕಳು. ಕನ್ನಡ ಭಾಷೆ ಉಳಿಯಬೇಕು. ನಮ್ಮ ಸಂಸ್ಕೃತಿ ಉಳಿಯಬೇಕಾಗಿದೆ. ಗದಗ ಜಿಲ್ಲೆಯು ಕನ್ನಡ ನಾಡಿಗೆ ನೀಡಿದ ಕೊಡುಗೆಯಲ್ಲಿ ಕುಮಾರವ್ಯಾಸ, ಪಂಪ, ಪಂ. ಭೀಮಸೇನ ಜೋಶಿ, ಪಂ. ಪುಟ್ಟರಾಜ ಕವಿಗವಾಯಿಗಳು ಹೀಗೆ ಜಿಲ್ಲೆಯ ಕೊಡುಗೆ ಕನ್ನಡಕ್ಕೆ ಅಪಾರವಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ ಮಾತನಾಡಿದರು.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಆಶಯ ನುಡಿ ನುಡಿದರು. ನಿಕಟಪೂರ್ವ ಅಧ್ಯಕ್ಷ ಡಾ. ನೀಲಗಿರಿ ತಳವಾರ, ಟಿ. ಈಶ್ವರ, ಪಕ್ಷಿಪ್ರೇಮಿ ಪ್ರಕಾಶ ಗೌಡರ, ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ ಮಾತನಾಡಿದರು. ಸರ್ವಾಧ್ಯಕ್ಷೆ ಲಲಿತಕ್ಕ ಕೆರಿಮನಿ ಮಾತನಾಡಿದರು. ಈ ವೇಳೆ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಗೀತಾ ಭೀರಣ್ಣವರ, ಎಸ್.ಪಿ. ಬಳಿಗಾರ, ಎಂ.ಎಸ್. ದೊಡ್ಡಗೌಡ್ರ, ರಾಜು ಕುರಡಗಿ, ಪ್ರೊ.ಎಸ್.ಬಿ. ಕರಿಭರಮಗೌಡರ, ಶಿವಪ್ರಕಾಶ ಲಿಂಬಯ್ಯಸ್ವಾಮಿಮಠ, ಬಸವೇಶ ಮಹಾಂತಶೆಟ್ಟರ, ಕೆ.ಎಸ್. ಕೊಡ್ಲಿವಾಡ, ಎಸ್.ಎಫ್. ಶಿಗ್ಲಿ, ಅಶೋಕ ಸೊರಟೂರ, ಎಸ್.ಪಿ. ಬಳಿಗಾರ, ಶರಣು ಗೋಡಿ, ಮಂಜುನಾಥ ಮಾಗಡಿ, ಪುಲಿಕೇಶಿ ಉಪನಾಳ, ಡಿ.ಬಿ. ಬಳಿಗಾರ, ಫಕ್ಕೀರೇಶ ರಟ್ಟೀಹಳ್ಳಿ, ಫಕ್ಕೀರಗೌಡ್ರ ಪಾಟೀಲ, ಬಿಇಒ ಎಚ್. ನಾಣಕಿ ನಾಯ್ಕ, ಸಿಡಿಪಿಒ ಮೃತ್ಯುಂಜಯ ಗುಡ್ಡದಾನ್ವೇರಿ, ಎಸ್.ಎಫ್. ಶಿಗ್ಲಿ, ಲೋಹಿತ ನೆಲವಿಗಿ ಮುಂತಾದವರಿದ್ದರು.
ಕಸಾಪ ತಾಲೂಕು ಅಧ್ಯಕ್ಷ ಈಶ್ವರ ಮೆಡ್ಲೇರಿ ಸ್ವಾಗತಿಸಿದರು. ರತ್ನಾ ಕುಂಬಾರ, ಸೋಮಶೇಖರ ಪಾಟೀಲ, ಆರ್.ಎಸ್. ಗಾಣಗೇರ ಕಾರ್ಯಕ್ರಮ ನಿರೂಪಿಸಿದರು.ಸಾಹಿತ್ಯ ಸಮ್ಮೇಳನಾಧ್ಯಕ್ಷರ ಅದ್ಧೂರಿ ಮೆರವಣಿಗೆ
ಲಕ್ಷ್ಮೇಶ್ವರ: ತಾಲೂಕಿನ ಯಳವತ್ತಿಯಲ್ಲಿ ಶನಿವಾರ ಲಕ್ಷ್ಮೇಶ್ವರ ತಾಲೂಕು ೨ನೇ ಕನ್ನಡ ಸಾಹಿತ್ಯ ಸಮ್ಮೇಳನ ನಿಮಿತ್ತ ಬೆಳಗ್ಗೆ ತಾಯಿ ಭುವನೇಶ್ವರಿ ಭಾವಚಿತ್ರ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಅದ್ಧೂರಿಯಾಗಿ ನೆರವೇರಿತು.ಗ್ರಾಮದ ಹಿರಿಯರಾದ ಮೃತ್ಯುಂಜಯ ಶಿದ್ರಾಮಯ್ಯ ಹಿರೇಮಠ ಹಾಗೂ ಶಾಸಕ ಡಾ. ಚಂದ್ರು ಲಮಾಣಿ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಿದರು.ಅಲಂಕೃತ ಸಾರೋಟದಲ್ಲಿ ಸಮ್ಮೇಳನಾಧ್ಯಕ್ಷೆ ಲಲಿತಾ ಸಿ. ಕೆರಿಮನಿ ಅವರ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಗ್ರಾಮದ ಸರ್ಕಾರಿ ಪ್ರಾಥಮಿಕ ಅರೋಗ್ಯ ಕೇಂದ್ರದಿಂದ ಪ್ರಾರಂಭಗೊಂಡ ಮೆರವಣಿಗೆಯು ಬಸ್ ನಿಲ್ದಾಣ, ಪೇಟೆ ಆವರಣ, ಗುಡ್ಡಳ್ಳಿ ಓಣಿ, ಗೋಣಿಸ್ವಾಮಿ ಓಣಿ, ವಾಲ್ಮೀಕಿ ಓಣಿ, ಅಂಬೇಡ್ಕರ್ ನಗರ, ಉಡಚಮ್ಮ ದೇವಸ್ಥಾನ, ಮೈಲಾರಲಿಂಗೇಶ್ವರ ದೇವಸ್ಥಾನ, ಕನ್ನಡ ಗಂಡು ಮಕ್ಕಳ ಶಾಲೆ ಮೂಲಕ ಕೋಟೆ ಆವರಣದಲ್ಲಿನ ಗುಂಡೇಶ್ವರ ಮಹಾವೇದಿಕೆ ತಲುಪಿ ಸಂಪನ್ನಗೊಂಡಿತು.ಮೆರವಣಿಗೆಯಲ್ಲಿ ಗ್ರಾಮದ ಎಲ್ಲ ಶಾಲಾ ಮಕ್ಕಳು ಪಾಲ್ಗೊಂಡಿದ್ದರು ಮತ್ತು ಕನ್ನಡದ ಸಾಹಿತಿಗಳು, ಕವಿಗಳು, ವಚನಕಾರರು, ದಾಸಶ್ರೇಷ್ಠರು, ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣಗಳನ್ನು ಧರಿಸಿ ಮೆರವಣಗೆಯ ರಂಗು ಹೆಚ್ಚಿಸಿದ್ದರು. ಪೂರ್ಣಕುಂಭ, ಡೊಳ್ಳು, ಜಾಂಜ್ ವಾದ್ಯ ಮೇಳ ಪಾಲ್ಗೊಂಡಿದ್ದ ಕನ್ನಡ ಸಾಹಿತ್ಯಾಭಿಮಾನಿಗಳು ಹೆಜ್ಜೆ ಹಾಕಿದರು. ಮೆರವಣಿಗೆ ಮಾರ್ಗದಲ್ಲಿ ರಂಗೋಲಿ ಹಾಕಿ ಬ್ಯಾನರ್, ತಳಿರು ತೋರಣ ಕಟ್ಟಿ ಸ್ವಾಗತಿಸಲಾಗಿತ್ತು. ಲಕ್ಷ್ಮೇಶ್ವರ ಸ್ಕೂಲ್ ಚಂದನ ಬ್ಯಾಂಡ್ ವಿದ್ಯಾರ್ಥಿಗಳು ಮೆರವಣಿಗೆಗೆ ಕಳೆ ತಂದಿದ್ದರು. ಮೆರವಣಿಗೆಯುದ್ದಕ್ಕೂ ಕನ್ನಡದ ಘೋಷಣೆಗಳು ಮೊಳಗಿದವು.ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಕಸಾಪ ತಾಲೂಕು ಅಧ್ಯಕ್ಷ ಈಶ್ವರ ಮೆಡ್ಲೇರಿ, ತಾಪಂ ಇಒ ಧರ್ಮರ ಕೃಷ್ಣಪ್ಪ, ಬಿಇಒ ನಾಣಕಿ ನಾಯ್ಕ, ವಿರೂಪಾಕ್ಷಪ್ಪ ಮೇಟಿ, ಡಾ. ಎಸ್.ಕೆ. ಪಾಟೀಲ, ಅಶೋಕಗೌಡ ಪಾಟೀಲ, ಶಿವಣ್ಣ ಗಾಣಗೇರ, ಬಾಪುಗೌಡ ಭರಮಗೌಡ್ರ, ಫಕ್ಕೀರಗೌಡ ಪಾಟೀಲ, ವಸಂತ ಬಾಗೇವಾಡಿ, ಮುತ್ತಣ್ಣ ನವಲಗುಂದ, ಶಿವಯೋಗಿ ಹೊಸಕೇರಿ, ಗೀತಾ ಸುರೇಶ ಬೀರಣ್ಣವರ, ಮೈನು ಗಮ್ಮಣ್ಣವರ, ಗಿರೀಶ ಸಜ್ಜನ, ಬಿ.ಕೆ. ಗಡೆಪ್ಪನವರ, ಅಶೋಕ ಬಿಸೆರೊಟ್ಟಿ, ಎಚ್.ಎಸ್. ರಾಮನಗೌಡ್ರ, ಮಂಜುನಾಥ ಕರೆಗೌಡ್ರ, ಸತೀಶ ಪತ್ತಾರ, ಜಿ.ಎಫ್. ಡೊಂಬರ, ಶಂಕರ ಮಿಸ್ಕಿನ್, ಡಿ.ಎನ್ ಶಿರುಂಜ ಇದ್ದರು.ಯಳವತ್ತಿಯ ಅರವಿಂದೋ ವಿದ್ಯಾಮಂದಿರ ಶಾಲೆ, ಜನನಿ ಶಾಲೆ, ಸರಕಾರಿ ಹಿರಿಯ ಕನ್ನಡ ಹೆಣ್ಣುಮಕ್ಕಳು ಶಾಲೆ, ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ, ಜಗದ್ಗುರು ಫಕ್ಕೀರ ಚನ್ನವೀರೇಶ್ವರ ಪ್ರೌಡಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ರಾಜರಾಜೇಶ್ವರಿ ಮಹಿಳಾ ಸಾಹಿತ್ಯ ಮತ್ತು ಸಂಸ್ಕೃತ ವೇದಿಕೆ, ಕದಳಿ ವೇದಿಕೆ, ಅಕ್ಕನ ಬಳಗದ ಸದಸ್ಯರು, ಗ್ರಾಮದ ಹಿರಿಯರು, ಯುವಕರು ಪಾಲ್ಗೊಂಡಿದ್ದರು.