ಹೂವಿನಹಡಗಲಿ: ಉತ್ತರ ಹಾಗೂ ದಕ್ಷಿಣ ಕರ್ನಾಟಕದ ಸಂಪರ್ಕ ಕೊಂಡಿಯಾದ ಗದಗ-ಹರಪನಹಳ್ಳಿ ರೈಲು ಮಾರ್ಗ ಬೇಡಿಕೆಯನ್ನು ಈ ಬಾರಿಯಾದರೂ ಈಡೇರಿಸಬೇಕೆಂದು ರೈಲ್ವೆ ಸಮಿತಿಯು ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದೆ.
ಅಖಂಡ ಬಳ್ಳಾರಿ ಜಿಲ್ಲೆಯ ಪಶ್ಚಿಮ ಭಾಗದ ಕೊನೆ ತಾಲೂಕು ಕೇಂದ್ರ ಹೂವಿನಹಡಗಲಿ, ಸತತ ಬರಗಾಲದಿಂದ ತತ್ತರಿಸುತ್ತಿದೆ. ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಹಿಂದುಳಿದಿದೆ. ಡಾ. ನಂಜುಂಡಪ್ಪ ವರದಿ ಅನ್ವಯ ತೀರಾ ಹಿಂದುಳಿದ ತಾಲೂಕು ಕೇಂದ್ರವೆಂಬ ಹಣೆಪಟ್ಟಿ ಹೊತ್ತುಕೊಂಡಿರುವ ಈ ತಾಲೂಕಿಗೆ ರೈಲ್ವೆ ಮಾರ್ಗ ಅಗತ್ಯವಿದೆ. ಬೇಡಿಕೆ ಈಡೇರಿದರೆ ತಕ್ಕಮಟ್ಟಿಗೆ ಅಭಿವೃದ್ಧಿ ಸಮಾತೋಲನ ಕಾಣಲು ಸಾಧ್ಯವಿದೆ. ಈ ಭಾಗದಲ್ಲಿ ಸಾಕಷ್ಟು ರೈತರು ತೋಟಗಾರಿಕೆ ಹಾಗೂ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಾರೆ. ಭೌಗೋಳಿಕ ಸೂಚ್ಯಂಕದಡಿ ಹಡಗಲಿ ಮಲ್ಲಿಗೆ ಬೆಳೆ ಮಾನ್ಯತೆ ಪಡೆದಿದೆ. ಇವುಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ರೈತರು ಪ್ರತಿ ವರ್ಷ ನಷ್ಟಕ್ಕೀಡಾಗುತ್ತಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಈ ಭಾಗದಲ್ಲಿ ರಾಜ್ಯದ ಲಕ್ಷಾಂತರ ಭಕ್ತರ ಆರಾಧ್ಯದೈವ ಮೈಲಾರಲಿಂಗೇಶ್ವರ, ಕುರುವತ್ತಿ ಬಸವೇಶ್ವರ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಕಲ್ಯಾಣಿ ಚಾಲುಕ್ಯರ ಶಿಲ್ಪಕಲೆ ವೈಭವ ಹೊಂದಿರುವ ನೂರಾರು ದೇವಸ್ಥಾನಗಳು ಇವೆ. ರೈಲ್ವೆ ವ್ಯವಸ್ಥೆ ಇಲ್ಲದೇ ಈ ವರೆಗೂ ಶ್ರೀಮಂತ ಶಿಲ್ಪ ವೈಭವ ಪ್ರವಾಸಿಗರಿಂದ ದೂರ ಉಳಿದಿದೆ. ರೈಲ್ವೆ ಮಾರ್ಗದಿಂದ ಪ್ರವಾಸೋದ್ಯಮ ಕ್ಷೇತ್ರ ಉತ್ತೇಜನಕ್ಕೆ ಆದ್ಯತೆ ಸಿಗುವ ಸಾಧ್ಯತೆಗಳಿವೆ. ಪ್ರವಾಸಿಗರ ಸಂಖ್ಯೆ ಹೆಚ್ಚಾಗುವ ಜತೆಗೆ, ಈ ಭಾಗದಲ್ಲಿಯೂ ವ್ಯಾಪಾರ-ವಹಿವಾಟು ಹೆಚ್ಚಾಗುತ್ತದೆ. ಆದರಿಂದ ರೈಲ್ವೆ ಮಾರ್ಗ ರಚನೆಯಾಗಬೇಕಿದೆ ಎಂದರು.ಈ ಕುರಿತು ಮಾತನಾಡಿದ ಸಚಿವ ವಿ.ಸೋಮಣ್ಣ, ಬೆಂಗಳೂರು, ಮೈಸೂರು ಭಾಗದ ಪ್ರವಾಸಿಗರು ಮತ್ತು ಪ್ರಯಾಣಿಕರು ವಿಜಯಪುರ, ಸೊಲ್ಲಾಪುರ ಹಾಗೂ ಮಹಾರಾಷ್ಟ್ರದ ಕಡೆಗೆ ಹೋಗಲು ಗದಗ-ಹರಪನಹಳ್ಳಿ ರೈಲ್ವೆ ನೇರ ಮಾರ್ಗವಾಗಲಿದೆ. ಈ ರೈಲ್ವೆ ಮಾರ್ಗದಿಂದ ಬೆಂಗಳೂರು-ಸೊಲ್ಲಾಪುರಕ್ಕೆ 120ರಿಂದ 130 ಕಿಮೀ ಕಡಿಮೆಯಾಗಲಿದೆ. ಗದಗ-ಹರಪನಹಳ್ಳಿ ರೈಲ್ವೆ ಮಾರ್ಗ ಬಹು ವರ್ಷಗಳ ಬೇಡಿಕೆಯಾಗಿದೆ. ಅದಕ್ಕಾಗಿಯೇ ಹೋರಾಟಗಳು ನಡೆದಿವೆ. ಈ ಕುರಿತು ಪರಿಶೀಲನೆ ಮಾಡುತ್ತೇನೆ ಎಂದು ಹೇಳಿದರು.ಗದಗ-ಹರಪನಹಳ್ಳಿ ರೈಲ್ವೆ ಮಾರ್ಗ ವ್ಯಾಪ್ತಿಯ ಜನಪ್ರತಿನಿಧಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರ ಮೇಲೆ ಒತ್ತಡ ತಂದು, ಪ್ರಸಕ್ತ ವರ್ಷದ ರೈಲ್ವೆ ಬಜೆಟ್‌ನಲ್ಲಿ ಮಂಡನೆ ಮಾಡುವಂತೆ ಇಚ್ಛಾಸಕ್ತಿ ತೋರಬೇಕಿದೆ ಎಂದು ರೈಲ್ವೆ ಹೋರಾಟ ಸಮಿತಿ ಸಂಚಾಲಕ ಎಸ್.ಎಸ್. ಪಾಟೀಲ್ ಕೋರಿದ್ದಾರೆ.