ಬಳ್ಳಾರಿ: ಶ್ರೀ ರಾಮಕೃಷ್ಣಾಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರಿಂದ ವಿವೇಕ ಮಂಟಪ ಉಪನ್ಯಾಸ ಮಾಲಿಕೆಯ "ವಿವೇಕ ಲೀಲಾಮೃತ " ಇಲ್ಲಿನ ಡಾ. ರಾಜ್‌ಕುಮಾರ್ ರಸ್ತೆಯಲ್ಲಿರುವ ರಾಘವ ಕಲಾ ಮಂದಿರದಲ್ಲಿ ಆರಂಭವಾಯಿತು.
ಪ್ರಾಸ್ತಾವಿಕ ಮಾತನಾಡಿದ ಲೆಕ್ಕ ಪರಿಶೋಧಕ ಎರಿಸ್ವಾಮಿ ಚಿಲ್ಕರಾಗಿ ಅವರು, ಗದಗ ಮತ್ತು ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರು, ಪ್ರಖರ ವಾಗ್ಮಿಗಳೂ ಆಗಿರುವ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರು ಸಿಡಿಲ ಸನ್ಯಾಸಿ ಸ್ವಾಮಿ ವಿವೇಕಾನಂದರ ಲೀಲಾಮೃತ ಕುರಿತು 10 ದಿನಗಳ ಉಪನ್ಯಾಸ ನೀಡುವರು. ರಾಮಕೃಷ್ಣ ಮಿಷನ್‌ನ ಸ್ವಾಮಿ ಪುರುಷೋತ್ತಮನಾನಂದ ಅವರಿಂದ ಪ್ರಭಾವಿತರಾಗಿ 1993ರಲ್ಲಿ ಸನ್ಯಾಸ ಸ್ವೀಕರಿಸಿ, ಸ್ವಾಮಿ ನಿರ್ಭಯಾನಂದ ಸರಸ್ವತಿಗಳಾದರು. ಶಿವಮೊಗ್ಗದ ಶಾರದಾ ಅಂಧರ ವಿಕಾಸ ಕೇಂದ್ರ, ಅಖಿಲ ಕರ್ನಾಟಕ ವಿವೇಕಾನಂದ ಮಹಾಮಂಡಳ, ವಿಜಯಪುರದ ಮನಗೂಳಿಯಲ್ಲಿ ವಿವೇಕಾನಂದ ವಸತಿ ಶಾಲೆಗಳನ್ನು ಆರಂಭಿಸಿ, ಬಡ ಅನಾಥ ಮಕ್ಕಳು, ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರ ಮಕ್ಕಳು ಹಾಗೂ ಆತ್ಮಹತ್ಯೆ ಮಾಡಿಕೊಂಡಿರುವ ರೈತ ಮಕ್ಕಳನ್ನು ದತ್ತು ತೆಗೆದುಕೊಂಡು ಉಚಿತವಾಗಿ ವಸತಿ, ಊಟ ಹಾಗೂ ಶಿಕ್ಷಣ ನೀಡುತ್ತಿದ್ದಾರೆ. ಧಾರವಾಡ, ವಿಜಯಪುರ, ಗದಗ ಜಿಲ್ಲೆಗಳಲ್ಲಿ ರಾಮಕೃಷ್ಣ-ವಿವೇಕಾನಂದ ಆಶ್ರಮಗಳನ್ನು ಸ್ಥಾಪಿಸಿದ್ದಲ್ಲದೆ ಕಲಬುರಗಿ, ಬೀದರ್, ರಾಣಿಬೆನ್ನೂರು, ಚಿತ್ರದುರ್ಗ ಆಶ್ರಮಗಳನ್ನು ಆರಂಭಿಸಲು ಪ್ರೇರಕಶಕ್ತಿಯಾಗಿದ್ದಾರೆ ಎಂದು ಶ್ರೀಗಳ ಕುರಿತು ಪರಿಚಯಿಸಿದರು.
ಹಿರಿಯ ವೈದ್ಯೆ ಡಾ. ಅರುಣಾ ಕಾಮಿನೇನಿ, ಹೃದಯತಜ್ಞ ಡಾ. ನರೇಂದ್ರಗೌಡ, ಡಾ. ವಸ್ತ್ರದ ಹಾಗೂ ಡಾ. ಕೃಷ್ಣ ಉಪಸ್ಥಿತರಿದ್ದರು. ಉಪನ್ಯಾಸ ಮಾಲಿಕೆಯ ಸ್ವಾಗತ ಸಮಿತಿ ಸಂಚಾಲಕ ಕೆ. ರಾಜಶೇಖರ ಕಾರ್ಯಕ್ರಮ ನಿರ್ವಹಿಸಿದರು. ಹೊಸಪೇಟೆಯ ಸ್ವಾಮಿ ಸುಮೇದಾನಂದ ಹಾಗೂ ಹುಬ್ಬಳ್ಳಿಯ ಸ್ವಾಮಿ ಬುದ್ಧಿಯೋಗಾನಂದ ಅವರು ಭಕ್ತಿಸಂಗೀತ ಸೇವೆ ಸಮರ್ಪಿಸಿದರು.