ಗದಗ ಜಿಪಂಗೆ 28 ವರ್ಷಗಳ ಅಧಿಕಾರದ ಇತಿಹಾಸ!

KannadaprabhaNewsNetwork |  
Published : Oct 13, 2026, 02:15 AM IST
ಗದಗ ಜಿಲ್ಲಾಡಳಿತ ಭವನ.  | Kannada Prabha

ಸಾರಾಂಶ

ಜಿಪಂ, ತಾಪಂ ಕ್ಷೇತ್ರಗಳಿಗೆ ರಾಜ್ಯ ಸರ್ಕಾರ ಕ್ಷೇತ್ರವಾರು ಮೀಸಲಾತಿ ಘೋಷಣೆ ಮಾಡಿದ್ದು, ಮುಂಬರುವ ಡಿಸೆಂಬರ್ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದ್ದರೂ ಈಗಿನಿಂದಲೇ ಚುನಾವಣೆ ಕಾವು ಜೋರಾಗಿದೆ.

ಇದುವರೆಗೂ 5 ಚುನಾವಣಾ ಹಂತಗಳ ರಾಜಕೀಯ ಪಯಣ, ಕಾಂಗ್ರೆಸ್ ಬಿಜೆಪಿ ನಡುವೆ ಅಧಿಕಾರಕ್ಕಾಗಿ ನೇರ ಪೈಪೋಟಿ

ಶಿವಕುಮಾರ ಕುಷ್ಟಗಿ

ಕನ್ನಡಪ್ರಭ ವಾರ್ತೆ ಗದಗ

ಜಿಪಂ, ತಾಪಂ ಕ್ಷೇತ್ರಗಳಿಗೆ ರಾಜ್ಯ ಸರ್ಕಾರ ಕ್ಷೇತ್ರವಾರು ಮೀಸಲಾತಿ ಘೋಷಣೆ ಮಾಡಿದ್ದು, ಮುಂಬರುವ ಡಿಸೆಂಬರ್ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದ್ದರೂ ಈಗಿನಿಂದಲೇ ಚುನಾವಣೆ ಕಾವು ಜೋರಾಗಿದೆ. ಗದಗ ಜಿಪಂ ಅಸ್ತಿತ್ವಕ್ಕೆ ಬಂದು ಬರೋಬ್ಬರಿ 28 ವರ್ಷಗಳಾಗಿವೆ. 1997 ರಲ್ಲಿ ಗದಗ ಜಿಲ್ಲೆ ಅಸ್ತಿತ್ವಕ್ಕೆ ಬಂದ ಬಳಿಕ, ಹೊಸ ಜಿಲ್ಲಾ ಪಂಚಾಯಿತಿ 1998ರ ಏಪ್ರಿಲ್ 1ರಿಂದ ಅಸ್ತಿತ್ವಕ್ಕೆ ಬಂದಿತು. ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯಡಿ ಹೊಸದಾಗಿ ರಚನೆಯಾದ ಗದಗ ಸೇರಿದಂತೆ ಏಳು ಜಿಲ್ಲೆಗಳ ಜಿಪಂಗಳಿಗೆ 1998ರ ಏಪ್ರಿಲ್‌ನಲ್ಲಿ ಅಧ್ಯಕ್ಷ ಉಪಾಧ್ಯಕ್ಷರ ಮೊದಲ ಚುನಾವಣೆ ನಡೆದಿತ್ತು.

ಗದಗ ಜಿಪಂ ಅಸ್ತಿತ್ವಕ್ಕೆ ಬಂದ ನಂತರ ಏಪ್ರಿಲ್ 25, 1998ರಂದು ಅಧ್ಯಕ್ಷ-ಉಪಾಧ್ಯಕ್ಷರ ಮೊದಲ ಚುನಾವಣೆ ನಡೆದಿತ್ತು ವಿಶ್ವನಾಥ ಕಪ್ಪತ್ತನವರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇವರು ಜನತಾ ಪರಿವಾರದವರು ಎನ್ನುವುದು ಗಮನಾರ್ಹ, ಅಂದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ವೇಳೆಯಲ್ಲಿ ಅಡ್ಡ ಮತದಾನವಾಗಿ ವಿವಾದ ಹೈಕೋರ್ಟ್ ಮೆಟ್ಟಿಲೇರಿತ್ತು.

2000ರಲ್ಲಿ ಕಾಂಗ್ರೆಸ್‌ನ ಪ್ರಾಬಲ್ಯ:

2000ರ ಜಿಪಂ ಚುನಾವಣೆಯಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಭರ್ಜರಿ ಪ್ರದರ್ಶನ ನೀಡಿತ್ತು. 27 ಜಿಪಂ ಪೈಕಿ 25ರಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿತ್ತು. ಗದಗ ಕೂಡ ಕಾಂಗ್ರೆಸ್ ಪ್ರಾಬಲ್ಯದ ಜಿಲ್ಲೆಗಳಲ್ಲೊಂದಾಗಿತ್ತು. ಇಲ್ಲಿಯೂ ಕಾಂಗ್ರೆಸ್ ಸ್ಪಷ್ಟ ಬಹುಮತದಿಂದ ಅಧಿಕಾರ ಹಿಡಿದಿತ್ತು. 2005 ರ ಜಿಪಂ ಚುನಾವಣೆಯಲ್ಲೂ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯುವ ಮೂಲಕ ಗದಗ ಜಿಪಂನ ಮೊದಲ ದಶಕದಲ್ಲಿ ಕಾಂಗ್ರೆಸ್‌ನ ಪ್ರಾಬಲ್ಯ ಗಮನಾರ್ಹವಾಗಿತ್ತು.

ಗದಗ ಜಿಪಂ ರಾಜಕೀಯದಲ್ಲಿ ಪ್ರಮುಖ ತಿರುವಾಗಿದ್ದು 2010ರ ಚುನಾವಣೆಯಾಗಿದೆ. ವರ್ಷದ ಅಂತ್ಯದಲ್ಲಿ ನಡೆದ ಜಿಪಂ ಚುನಾವಣೆಯ ಫಲಿತಾಂಶ 2011ರ ಜನವರಿಯಲ್ಲಿ ಹೊರಬಂದಿದ್ದು, ಗದಗ ಜಿಪಂನಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿತ್ತು. 2010ರ ಚುನಾವಣೆಯಲ್ಲಿ ಗದಗ ಜಿಲ್ಲೆಯ 19 ಕ್ಷೇತ್ರಗಳ ಪೈಕಿ ಬಿಜೆಪಿ 12, ಕಾಂಗ್ರೆಸ್ 7 ಸ್ಥಾನಗಳನ್ನು ಮಾತ್ರ ಗೆದಿತ್ತು. ಜಿಲ್ಲೆಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಅಧಿಕಾರದ ಗದ್ದುಗೆಯನ್ನು ಹಿಡಿದಿತ್ತು.

2016ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ:

2016ರ ಜಿಪಂ ಚುನಾವಣೆ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡು ಕಾಂಗ್ರೆಸ್ ಮತ್ತೊಮ್ಮೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಒಟ್ಟು 19 ಜಿಪಂ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 11 ಮತ್ತು ಬಿಜೆಪಿ 8 ಸ್ಥಾನಗಳನ್ನು ಗೆದ್ದಿತು. ಜೆಡಿಎಸ್ ಅಥವಾ ಇತರರಿಗೆ ಸ್ಥಾನ ಸಿಗದೇ ಎರಡೂ ರಾಷ್ಟೀಯ ಪಕ್ಷಗಳ ನಡುವೆ ಚುನಾವಣೆಯಲ್ಲಿ ನೇರ ಸ್ಪರ್ಧೆ ಏರ್ಪಟ್ಟಂತೆ ನಂತರವೂ ಅದೇ ಮುಂದುವರಿಯಿತು.

2016ರ ನಂತರ ಚುನಾವಣೆಯ ನಂತರ ಇದುವರೆಗೂ ಜಿಪಂ ತಾಪಂಗಳಿಗೆ ಚುನಾವಣೆಯೇ ನಡೆದಿಲ್ಲ. 2016 ಚುನಾಯಿತರಾದವರ ಅವಧಿ 2020ರ ಮಧ್ಯಭಾಗದಲ್ಲಿ ಪೂರ್ಣಗೊಂಡಿದ್ದು, ಅಲ್ಲಿಂದ ಇಲ್ಲಿಯವರೆಗೂ ಒಂದು ಅವಧಿ (5 ವರ್ಷಗಳ ಕಾಲ) ಜಿಪಂ ತಾಪಂ ಸದಸ್ಯರಿಲ್ಲದೇ ಆಡಳಿತವನ್ನು ನಡೆಸಿದ ಕೀರ್ತಿ ರಾಜ್ಯವನ್ನಾಳಿದ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳಿಗೆ ಸಲ್ಲುತ್ತದೆ. ನಂತರ ಮೀಸಲಾತಿ ಬದಲಾವಣೆ, ಕ್ಷೇತ್ರ ಪುನರ್‌ವಿಂಗಡಣೆ ಸೇರಿದಂತೆ ವಿವಿಧ ಕಾರಣಗಳಿಂದ ಜಿಪಂ, ತಾಪಂ ಚುನಾವಣೆಗಳು ಮುಂದೂಡಲ್ಪಡುತ್ತಲೇ ಬಂದಿದ್ದು ಈಗ 2025-26 ರಲ್ಲಿ ರಾಜ್ಯ ಸರ್ಕಾರ ಚುನಾವಣೆ ನಡೆಸುವ ಸಿದ್ಧತೆ ಕುರಿತು ಹೇಳಿಕೆ ನೀಡಿರುವುದು ಸಮಾಧಾನದ ಸಂಗತಿಯಾಗಿದೆ. ಅಧಿಕಾರದ ಪೈಪೋಟಿ

1998ರಲ್ಲಿ ಜನತಾ ದಳದ ಪ್ರಭಾವದಿಂದ ಆರಂಭವಾದ ಗದಗ ಜಿಪಂ ಪಯಣ, 2000 ಮತ್ತು 2005ರಲ್ಲಿ ಕಾಂಗ್ರೆಸ್ ಪ್ರಾಬಲ್ಯ, 2010-11ರಲ್ಲಿ ಬಿಜೆಪಿಯ ಬಹುಮತ, 2016ರಲ್ಲಿ ಮತ್ತೆ ಕಾಂಗ್ರೆಸ್ ಮೇಲುಗೈ, 2016ರ ನಂತರ ಚುನಾವಣೆಯೇ ಇಲ್ಲ. ಒಟ್ಟಾರೆಯಾಗಿ ಗದಗ ಜಿಪಂನ ಸುಮಾರು ಮೂರು ದಶಕಗಳ ರಾಜಕೀಯ ಇತಿಹಾಸದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಗ್ರಾಮೀಣ ಅಧಿಕಾರದ ಪೈಪೋಟಿಯೇ ಪ್ರಮುಖ ಅಧ್ಯಾಯವಾಗಿ ದಾಖಲಾಗಿದೆ.ಗದಗ ಜಿಪಂ ಇತಿಹಾಸ ಪ್ರಾರಂಭವಾಗುವುದೇ ಜನತಾ ಪರಿವಾರದ ಆಡಳಿತದಿಂದ, ಅದನ್ನು ಮತ್ತೊಮ್ಮೆ ಪುನರಾವರ್ತನೆ ಮಾಡುವ ನಿಟ್ಟಿನಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ವರಿಷ್ಠರು ಚರ್ಚಿಸಿ ಚುನಾವಣೆ ಎದುರಿಸುತ್ತೇವೆ ಎನ್ನುತ್ತಾರೆ ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೈಗಾರಿಕಾ ವಸಾಹತು ಸ್ಥಾಪನೆಯಿಂದ ನಿರುದ್ಯೋಗ ಸಮಸ್ಯೆ ನಿವಾರಣೆ
ಪೌಷ್ಟಿಕ ಆಹಾರವೇ ಮನುಷ್ಯನ ಆರೋಗ್ಯಕ್ಕೆ ಮನೆ ಮದ್ದು; ಲಲಿತಾ