- ಶೆಟ್ಟಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಮವಸ್ತ್ರಕ್ಕಾಗಿ 50 ಸಾವಿರ ರು. ವಿತರಣೆ
ಸರ್ಕಾರಿ ಶಾಲೆಗಳು ಉಳಿಯಬೇಕು ಎಂದು ಉದ್ಯಮಿ, ದಾನಿ ಗದ್ದೇಮನೆ ವಿಶ್ವನಾಥ್ ತಾಲೂಕಿನ 10 ಶಾಲೆಗಳ ಮಕ್ಕಳ ಸಮವಸ್ತ್ರ ಹಾಗೂ ಇತರ ವಸ್ತುಗಳ ಖರೀದಿಗೆ ₹3 ಲಕ್ಷ ನೆರವು ನೀಡಿದ್ದಾರೆ ಎಂದು ಲಯನ್ಸ್ ಕ್ಲಬ್ ನ ನಿಯೋಜಿತ ಅಧ್ಯಕ್ಷ ಪಿ.ಜೆ.ಆಂಟೋನಿ ತಿಳಿಸಿದರು.
ಮಂಗಳವಾರ ಶೆಟ್ಟಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 50 ವಿದ್ಯಾರ್ಥಿಗಳಿಗೆ ಬೆಂಗಳೂರಿನ ಉದ್ಯಮಿ ಗದ್ದೇಮನೆ ವಿಶ್ವನಾಥ್ ಸಮವಸ್ತ್ರಕ್ಕಾಗಿ ನೀಡಿದ ₹50 ಸಾವಿರ ರು.ಗಳನ್ನು ಶಾಲೆ ಎಸ್.ಡಿ.ಎಂ.ಸಿ.ಅಧ್ಯಕ್ಷ ಜಗದೀಶ್ ಅವರಿಗೆ ಹಸ್ತಾಂತರಿಸಿದರು.ಕನ್ನಡ ಶಾಲೆಗಳು ಉಳಿಯಬೇಕು ಎಂಬುದು ಗದ್ದೇಮನೆ ವಿಶ್ವನಾಥ್ ಅವರ ಕನಸಾಗಿದೆ. ಈ ಬಗ್ಗೆ ಲಯನ್ಸ್ ನೇತೃತ್ವದಲ್ಲಿ ತಾಲೂಕಿನ ಕುಗ್ರಾಮದಲ್ಲಿರುವ 10 ಸರ್ಕಾರಿ ಶಾಲೆಗಳನ್ನು ಗುರುತಿಸಿ ಪ್ರತಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ತಲಾ 1 ಸಾವಿರ ರು. ಸಮವಸ್ತ್ರ ಹಾಗೂ ಮಕ್ಕಳ ಅಗತ್ಯತೆಗನುಗುಣವಾಗಿ ವಸ್ತುಗಳನ್ನು ಖರೀದಿಸಲು ಹಣ ನೀಡುವ ಯೋಜನೆ ರೂಪಿಸಲಾಗಿದೆ. ಗುರುತಿಸಿರುವ ಶಾಲೆಯ ಎಸ್.ಡಿ.ಎಂ.ಸಿ. ಹಾಗೂ ಪೋಷಕರೊಂದಿಗೆ ಚರ್ಚೆ ನಡೆಸಲಾಗಿದೆ. ಪೋಷಕರು, ಮಕ್ಕಳು ಸರ್ಕಾರಿ ಶಾಲೆಗಳತ್ತ ಬರಬೇಕು ಎಂಬುದೇ ಅವರ ಆಶಯವಾಗಿದೆ ಎಂದರು.
ಸಭೆಯಲ್ಲಿ ಲಯನ್ಸ್ ಕ್ಲಬ್ ನ ನಿಯೋಜಿತ ರೀಜನಲ್ ಚೇರ್ಮನ್ ಸಿಜು, ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ಕೆ.ಜಿ.ಎಲ್ದೋ, ಖಜಾಂಚಿ ಈಶ್ವರಾಚಾರ್, ಲಯನ್ಸ್ ಕ್ಲಬ್ ಸದಸ್ಯರಾದ ಡಿ.ಸಜಿ, ಎಲ್ದೋ ಕರುಗುಂದ, ಹಿರೇಬಿಸು ಸುಭಿ, ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಎಂ.ಜಗದೀಶ್, ಶಿಕ್ಷಕರಾದ ರಾಧಾ ಮಣಿ, ಅರುಣಕುಮಾರ್, ಗಾಯಿತ್ರಿ, ಮಲ್ಲಿಕಾರ್ಜುನ ಉಪಸ್ಥಿತರಿದ್ದರು.