ತಹಸೀಲ್ದಾರ್ ಕಾರ್ಯಾಲಯ ಸ್ಥಳಾಂತರಿಸಿದರೆ ಗಜೇಂದ್ರಗಡ ಬಂದ್‌ ಕರೆ

KannadaprabhaNewsNetwork |  
Published : Jun 23, 2025, 11:48 PM IST
ಗಜೇಂದ್ರಗಡ ತಹಸೀಲ್ದಾರ್ ಕಾರ್ಯಾಲಯವನ್ನು ಎಪಿಎಂಸಿಗೆ ಸ್ಥಳಾಂತರಿಸದಂತೆ ಆಗ್ರಹಿಸಿ ತಹಸೀಲ್ದಾರ್ ಕಿರಣಕುಮಾರ ಕಲುಕರ್ಣಿ ಅವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮನವಿ ನೀಡಿದರು. | Kannada Prabha

ಸಾರಾಂಶ

ಗಜೇಂದ್ರಗಡ ಪಟ್ಟಣದ ಕಾಲಕಾಲೇಶ್ವರ ವೃತ್ತದ ಬಳಿಯಿರುವ ತಹಸೀಲ್ದಾರ್ ಕಾರ್ಯಾಲಯವನ್ನು ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಿದರೆ ಗಜೇಂದ್ರಗಡ ಬಂದ್‌ಗೆ ಕರೆಕೊಟ್ಟು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಡಿ.ಜಿ. ಕಟ್ಟಿಮನಿ ಹೇಳಿದರು.

ಗಜೇಂದ್ರಗಡ: ಪಟ್ಟಣದ ಕಾಲಕಾಲೇಶ್ವರ ವೃತ್ತದ ಬಳಿಯಿರುವ ತಹಸೀಲ್ದಾರ್ ಕಾರ್ಯಾಲಯವನ್ನು ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಿದರೆ ಗಜೇಂದ್ರಗಡ ಬಂದ್‌ಗೆ ಕರೆಕೊಟ್ಟು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಡಿ.ಜಿ. ಕಟ್ಟಿಮನಿ ಹೇಳಿದರು.

ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿನ ತಹಸೀಲ್ದಾರ್ ಕಾರ್ಯಾಲಯವನ್ನು ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ತಾತ್ಕಾಲಿಕವಾಗಿ ಸ್ಥಳಾಂತರಿಸುವ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿ ಸೋಮವಾರ ಕರ್ನಾಟಕ ದಲಿತ ಸಂಘರ್ಷ (ದಾದಾಸಾಹೇಬ ಡಾ.ಎನ್. ಮೂರ್ತಿ ಸ್ಥಾಪಿತ) ಸಮಿತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಪಟ್ಟಣದ ಹೃದಯ ಭಾಗವಾಗಿರುವ ಕಾಲಕಾಲೇಶ್ವರ ವೃತ್ತದಲ್ಲಿರುವ ತಹಸೀಲ್ದಾರ್ ಕಾರ್ಯಾಲಯ ಸ್ಥಳೀಯ ಜನರು ಸೇರಿ ಸುತ್ತಲಿನ ಗ್ರಾಮದಿಂದ ಆಗಮಿಸುವ ಜನರಿಗೆ ಹತ್ತಿರುವಾಗುತ್ತದೆ. ಇಂತಹ ಸೂಕ್ತ ಸ್ಥಳದಲ್ಲಿರುವ ತಹಸೀಲ್ದಾರ್ ಕಾರ್ಯಾಲಯವನ್ನು ರೈತರು ಹಾಗೂ ವಾಹನಗಳ ದಟ್ಟನೆ ಹೆಚ್ಚಾಗಿರುವ ಎಪಿಎಂಸಿ ಆವರಣಕ್ಕೆ ವರ್ಗಾಯಿಸಿದರೆ ಜನರಿಗೆ ತೊಂದರೆಯಾಗುತ್ತದೆ ಎಂದ ಅವರು, ಪಟ್ಟಣದ ತಹಸೀಲ್ದಾರ್ ಕಾರ್ಯಾಲಯ ಸ್ಥಳಾಂತರಕ್ಕೆ ಶಿಥಿಲಾವಸ್ಥೆ ಹಾಗೂ ವಾಹನ ಪಾರ್ಕಿಂಗ್ ಸಮಸ್ಯೆ ಹೇಳುತ್ತಿರುವುದು ವಿಪರ್ಯಾಸ. ತಾಲೂಕಾಡಳಿತಕ್ಕೆ ಕಚೇರಿ ದುರಸ್ತಿ ಮಾಡಿಸಿಕೊಳ್ಳಲಾಗದಷ್ಟು ದುಸ್ಥಿತಿಯಲ್ಲಿದೆಯಾ? ಅಥವಾ ಪ್ರಭಾವಿಯೊಬ್ಬರು ತೆಗೆಯುತ್ತಿರುವ ಬಾರ್‌ಗೆ ಅನುಮತಿ ಕೊಡಿಸಲು ತೊಡಕಾಗಿದೆಯಾ? ಒತ್ತಡಕ್ಕೆ ಮಣಿದು ಕಾರ್ಯಾಲಯ ಸ್ಥಳಾಂತರಕ್ಕೆ ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದರು.

ಆದಿ ಜಾಂಬವ ಸಂಘಟನೆ ಜಿಲ್ಲಾಧ್ಯಕ್ಷ ಮಂಜುನಾಥ ಬುರಡಿ ಮಾತನಾಡಿ, ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿರುವ ತಹಸೀಲ್ದಾರ್ ಕಾರ್ಯಾಲಯ ಜನಸ್ನೇಹಿ ವಾತಾವರಣದಲ್ಲಿದೆ. ಹೀಗಾಗಿ ತಹಸೀಲ್ದಾರ್ ಕಾರ್ಯಾಲಯವನ್ನು ಸ್ಥಳಾಂತರದ ನಿರ್ಧಾರದಿಂದ ಅಧಿಕಾರಿಗಳು ಹಿಂದೆ ಸರಿಯದಿದ್ದರೆ ಗಜೇಂದ್ರಗಡ ಬಂದ್‌ಗೆ ಕರೆಕೊಟ್ಟು ಮತ್ತೊಂದು ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಸಿದರು.

ಸಂಘಟನೆಯ ತಾಲೂಕಾಧ್ಯಕ್ಷ ಯಮನೂರಪ್ಪ ಹರಿಜನ, ಡಿ.ಎಂ. ಸಂದಿಮನಿ, ರವಿ ಮಾದರ, ಯಮನಪ್ಪ ಪುರ್ತಗೇರಿ, ಶಿವಕುಮಾರ ಜಾಧವ, ಮಾರುತಿ ಹಾದಿಮನಿ, ಸಣ್ಣಪ್ಪ ಪೂಜಾರ, ಭೀಮಪ್ಪ ಹಿರೇಹಾಳ, ಯಲ್ಲಪ್ಪ ಶಾಂತಗೇರಿ, ರೋಣಪ್ಪ ಚಿಲಝರಿ, ಚನ್ನಪ್ಪ ಪೂಜಾರ, ದುರಗಪ್ಪ ಹಿರೇಮನಿ, ಶಿವು ಬೂಮದ, ಶರಣು ಅರಳಿಗಿಡ, ಬಸು ಗೋಗೇರಿ, ಯಮನೂರ ಅಬ್ಬಿಗೇರಿ, ರಮೇಶ ಬಿಡಿಮನಿ ಇತರರು ಇದ್ದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ