ಧಾರವಾಡ:
ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಿದ್ದ ಕನ್ನಡ ಕಾದಂಬರಿ ಪಿತಾಮಹ ಗಳಗನಾಥರ ಹಾಗೂ ನಾ.ಶ್ರೀ. ರಾಜಪುರೋಹಿತ ಸ್ಮರಣಾರ್ಥ ಉಪನ್ಯಾಸ ನೀಡಿದ ಅವರು, ಮರಾಠಿ ಪ್ರಭಾವವಿದ್ದ ಆ ಕಾಲದಲ್ಲಿ ಕನ್ನಡಿಗರು ಮರಾಠಿ ಪತ್ರಿಕೆಯನ್ನು ಅನಿವಾರ್ಯವಾಗಿ ಓದಬೇಕಿತ್ತು. ಲೋಕಮಾನ್ಯ ಟಿಳಕ ಹಾಗೂ ಹರಿನಾರಾಯಣ ಆಪ್ಟೆಯವರ ಚಿಂತನೆಗಳಿಂದ ಪ್ರಭಾವಿತರಾದ ಗಳಗನಾಥರು ಮರಾಠಿಯಿಂದ ಆಪ್ಟೆಯವರ ಕಾದಂಬರಿ ಯಥಾವತ್ತಾಗಿ ಕನ್ನಡಕ್ಕೆ ಅನುವಾದ ಮಾಡಿ ಕನ್ನಡಿಗರಲ್ಲಿ ಓದುವ ಆಸಕ್ತಿ ಮೂಡಿಸಿದರು ಎಂದರು.
ಶಿಕ್ಷಕರಾಗಿದ್ದ ಗಳಗನಾಥರು ‘ಸದ್ಭೋದ ಚಂದ್ರಿಕೆ’ ಪತ್ರಿಕೆ ಪಾರಂಭಿಸಿದರು. ಆ ಕಾಲದಲ್ಲಿ ಆ ಪತ್ರಿಕೆಗೆ 7000 ಓದುಗರು ಚಂದಾದಾರಿದ್ದರು. ಬಡತನದಲ್ಲಿ ಬೆಂದ ಅವರು ಆರ್ಥಿಕ ಸಾಲದ ಹೊರೆಯಿಂದ ಕಾದಂಬರಿ ಬರೆಯಲಾರಂಭಿಸಿದರು. ಸಾಲದ ಹೊರೆ ಹೆಚ್ಚಾಗಿ ಈ ಸಾಲ ತೀರಿಸಲು ಸಂಚಾರಿ ಪುಸ್ತಕ ಮಾರಾಟಗಾರರಾಗಿ ಹಳ್ಳಿಯಿಂದ ಹಳ್ಳಿಗೆ, ಓಣಿಯಿಂದ ಓಣಿಗೆ ಸಂಚರಿಸಿ ಕಾದಂಬರಿ ಮಾರಾಟ ಮಾಡಿದರು. ಕೆಲವೊಮ್ಮೆ ಅವಮಾನವನ್ನೂ ಅನುಭವಿಸಿದರು ಎಂದು ಹೇಳಿದರು.ನಾ. ಶ್ರೀ ರಾಜಪುರೋಹಿತ ಅವರು ಮರಾಠಿ ಪ್ರಭಾವದ ನಡುವೆ ಕನ್ನಡ ಉಳಿಸಲು ಕನ್ನಡ ಸಾಹಿತ್ಯ ಇತಿಹಾಸ ಸಂಶೋಧನಾ ಕಾರ್ಯ ಪ್ರಾರಂಭಿಸಿದರು. ಶಿಕ್ಷಕ ವೃತ್ತಿ ಕಳೆದುಕೊಂಡ ಅವರು, ಆಲೂರ ವೆಂಕಟರಾಯರು ಪ್ರಾರಂಭಿಸಿದ ರಾಷ್ಟ್ರೀಯ ಶಾಲೆಯಲ್ಲಿ ಕೆಲಕಾಲ ಶಿಕ್ಷಕರಾಗಿ ದುಡಿದರು. ಮುಂದೆ ಕರ್ನಾಟಕ ಇತಿಹಾಸ ಸಂಶೋಧನಾ ಮಂಡಳಿ ಸ್ಥಾಪಿಸಿದರು. ಇಡೀ ಕರ್ನಾಟಕದಲ್ಲಿ ಸಂಚರಿಸಿ ಶಾಸನ, ವೀರಗಲ್ಲು, ಮಾಸ್ತಿಗಲ್ಲುಗಳ ವ್ಯಾಪಕ ಸಂಶೋಧನೆ ಮಾಡಿ ಇತಿಹಾಸ ಕಟ್ಟಿಕೊಟ್ಟರು ಎಂದು ಸಿ.ಆರ್. ಜೋಶಿ ಇಬ್ಬರು ಮಹನೀಯರ ಇತಿಹಾಸ ಬಿಚ್ಚಿಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಗೌರವ ಉಪಾಧ್ಯಕ್ಷ ಶ್ರೀನಿವಾಸ ವಾಡಪ್ಪಿ ಅಧ್ಯಕ್ಷತೆ ವಹಿಸಿ, ಇಂದಿನ ವಿದ್ಯಾರ್ಥಿಗಳು ಈ ಇಬ್ಬರೂ ಪ್ರಾತಃಸ್ಮರಣಿಯರ ಬದುಕು-ಬರಹ ಓದಬೇಕು ಎಂದರು.ಹಾವೇರಿಯ ಗಳಗನಾಥ ಹಾಗೂ ನಾ. ಶ್ರೀ. ರಾಜಪುರೋಹಿತ ಟ್ರಸ್ಟ್ ಸದಸ್ಯರಾದ ವೆಂಕಟೇಶ ಗಳಗನಾಥ ಹಾಗೂ ಹನಮಂತಗೌಡ ಗೊಲ್ಲರ, ವೀರಣ್ಣ ಒಡ್ಡೀನ, ಶಂಕರ ಹಲಗತ್ತಿ, ಶಿವಾನಂದ ಭಾವಿಕಟ್ಟಿ, ಡಾ. ಧನವಂತ ಹಾಜವಗೋಳ ಮತ್ತಿತರರು ಇದ್ದರು.