ಶಾಮನೂರು, ಬಾಪೂಜಿ ಸಂಸ್ಥೆ ಬಗ್ಗೆ ಮಿಥ್ಯಾರೋಪ ಸಲ್ಲ

KannadaprabhaNewsNetwork |  
Published : Dec 11, 2025, 01:15 AM IST
10ಕೆಡಿವಿಜಿ4-ದಾವಣಗೆರೆಯಲ್ಲಿ ಬುಧವಾರ ಕಾಂಗ್ರೆಸ್ ಹಿರಿಯ ಮುಖಂಡ, ನಗರಸಭೆ ಮಾಜಿ ಅಧ್ಯಕ್ಷ ಎಚ್.ಆರ್.ನಾಗಭೂಷಣ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಶಾಮನೂರು ಕುಟುಂಬ ಹಾಗೂ ಬಾಪೂಜಿ ವಿದ್ಯಾಸಂಸ್ಥೆಯ ಬಗ್ಗೆ ಸುಳ್ಳು ಆರೋಪ ಮಾಡುವುದನ್ನು ಬಿಜೆಪಿ ಮುಖಂಡ ಯಶವಂತರಾವ್ ಜಾಧವ್ ಮೊದಲು ನಿಲ್ಲಿಸಲಿ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ನಗರಸಭೆ ಮಾಜಿ ಅಧ್ಯಕ್ಷ ಆರ್.ಎಚ್.ನಾಗಭೂಷಣ ತಾಕೀತು ಮಾಡಿದರು.

ದಾವಣಗೆರೆ: ಶಾಮನೂರು ಕುಟುಂಬ ಹಾಗೂ ಬಾಪೂಜಿ ವಿದ್ಯಾಸಂಸ್ಥೆಯ ಬಗ್ಗೆ ಸುಳ್ಳು ಆರೋಪ ಮಾಡುವುದನ್ನು ಬಿಜೆಪಿ ಮುಖಂಡ ಯಶವಂತರಾವ್ ಜಾಧವ್ ಮೊದಲು ನಿಲ್ಲಿಸಲಿ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ನಗರಸಭೆ ಮಾಜಿ ಅಧ್ಯಕ್ಷ ಆರ್.ಎಚ್.ನಾಗಭೂಷಣ ತಾಕೀತು ಮಾಡಿದರು.

ನಗರದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಶಾಸಕ ಶಾಮನೂರು ಶಿವಶಂಕರಪ್ಪ, ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಅವದಿಯಲ್ಲಿ ನಗರ, ಜಿಲ್ಲೆ ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಬಾಪೂಜಿ ವಿದ್ಯಾಸಂಸ್ಥೆ ಮೂಲಕ 18 ಸಾವಿರಕ್ಕೂ ಹೆಚ್ಚು ನೌಕರರು ಹಾಗೂ ಲಕ್ಷಾಂತರ ಕುಟುಂಬಕ್ಕೆ ಪ್ರತ್ಯಕ್ಷ-ಪರೋಕ್ಷವಾಗಿ ಆಧಾರವಾಗಿದ್ದಾರೆ ಎಂದರು.

ದಾವಣಗೆರೆ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುವ ಒಬ್ಬ ಪ್ರಾಮಾಣಿಕ ನಾಯಕ ಎಸ್ಸೆಸ್ ಮಲ್ಲಿಕಾರ್ಜುನ್‌. ಮುಂದಿನ 50 ವರ್ಷ ಗಮನದಲ್ಲಿಟ್ಟುಕೊಂಡು, ನಗರವನ್ನು ಅಭಿವೃದ್ಧಿಪಡಿಸುವ ಜತೆಗೆ 15 ಸಾವಿರಕ್ಕೂ ಅಧಿಕ ಆಶ್ರಯ ಮನೆಗಳನ್ನು ನಿರ್ಮಿಸುವ ಮೂಲಕ ಲಕ್ಷಾಂತರ ಜನರಿಗೆ ನೆಮ್ಮದಿಯ ಬದುಕನ್ನು ಕಟ್ಟಿಕೊಡ್ಡವರು. ಇಂತಹ ಕುಟುಂಬದ ಬಗ್ಗೆ ಯಶವಂತರಾವ್‌ ಜಾಧವ್ ಆರೋಪ ಮಾಡುವುದನ್ನು ಬಿಡಲಿ ಎಂದು ತಿಳಿಸಿದರು.

ಸರ್ವ ಜಾತಿ, ಧರ್ಮೀಯರನ್ನೂ ಒಗ್ಗೂಡಿಸಿಕೊಂಡು ರಾಜಕಾರಣ, ಜನಸೇವೆ, ಅಭಿವೃದ್ಧಿ ಕಾರ್ಯ ಕೈಗೊಂಡಿರುವ ಎಸ್ಸೆಸ್ ಮಲ್ಲಿಕಾರ್ಜುನರ ಬಗ್ಗೆ ಯಶವಂತರಾವ್ ಸುಳ್ಳು ಆರೋಪ ಮಾಡುತ್ತಿರುವುದು ಕಾಂಗ್ರೆಸ್ಸಿಗರಿಗೆ ಬೇಸರ ತಂದಿದೆ. ನಾಲ್ಕು ಸಲ ಶಾಸಕರಾಗಿ, ಮೂರು ಸಲ ಸಚಿವರಾಗಿ ಎಸ್ಸೆಸ್ ಮಲ್ಲಿಕಾರ್ಜುನ್ ತಮಗೆ ಮತ ನೀಡಿದ ಎಲ್ಲ ಜನರಿಗೆ ಎಲ್ಲವನ್ನೂ ನೀಡಿದರು. ದಾವಣಗೆರೆ ನಗರ, ಜಿಲ್ಲೆಯ ಸಮಸ್ತ ಅಭಿವೃದ್ಧಿಗೆ ಕಂಕಣಬದ್ಧರಾದ ಎಸ್ಸೆಸ್ ಮಲ್ಲಿಕಾರ್ಜುನ್‌ ಜಿಲ್ಲಾ ಕೇಂದ್ರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಿದ್ದಾರೆ. ಸ್ವತಃ ಬಿಜೆಪಿಯ ಅನೇಕ ನಾಯಕರು ಎಸ್ಸೆಸ್ ಮಲ್ಲಿಕಾರ್ಜುನ್‌ರ ಅಭಿವೃದ್ಧಿ ಕೆಲಸದ ಬಗ್ಗೆ ಶ್ಲಾಘಿಸುತ್ತಾರೆ. ಇಂತಹದ್ದನ್ನೆಲ್ಲಾ ಯಶವಂತರಾವ್ ಜಾಧವ್ ಅರಿಯಲಿ ಎಂದು ಸಲಹೆ ನೀಡಿದರು.

ಇಡೀ ರಾಜ್ಯದಲ್ಲಿ ಎಂ 40 ಸಿಸ್ಟಮ್ ಸಿಮೆಂಟ್ ರಸ್ತೆಗಳನ್ನು ಎಸ್ಸೆಸ್ ಮಲ್ಲಿಕಾರ್ಜುನ್‌ ಮೊಬಲ ಸಲ ನಿರ್ಮಿಸಿದರು. ಕರ್ನಾಟಕದಲ್ಲಿ ಮೊದಲ ಬಾರಿಗೆ ಎಂ 40 ಸಿಸ್ಟಮ್ ಸಿಮೆಂಟ್ ರಸ್ತೆಗಳ ನಿರ್ಮಾಣ ಮಾಡಿದ್ದು ಎಸ್ಸೆಸ್ ಮಲ್ಲಿಕಾರ್ಜುನ. ಹಾಗಾಗಿ ಬಿಜೆಪಿಯ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಸುಳ್ಳು ಆರೋಪಗಳನ್ನು ಮಾಡದೇ, ದ್ವೇಷ ರಾಜಕಾರಣವನ್ನು ಮಾಡದೇ, ನಗರದ ಅಭಿವೃದ್ಧಿ ಕೆಲಸ, ಕಾರ್ಯಕ್ಕೆ ಸಲಹೆ, ಸೂಚನೆ ನೀಡಲಿ ಎಂದು ಹೇಳಿದರು.

ಬಾಪೂಜಿ ವಿದ್ಯಾಸಂಸ್ಥೆಯಲ್ಲಿ 52 ವರ್ಷದಿಂದಲೂ ಕಾರ್ಯದರ್ಶಿಯಾಗಿ ಶಾಮನೂರು ಶಿವಶಂಕರಪ್ಪ ಕೇವಲ ಜೆಜೆಎಂ ವೈದ್ಯಕೀಯ ಕಾಲೇಜಿದ್ದ ಸಂಸ್ಥೆಯಲ್ಲಿ ಇಂದು 58 ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಈ ಪೈಕಿ 2 ವೈದ್ಯಕೀಯ ಕಾಲೇಜು, 2 ದಂತ ವೈದ್ಯ ಕಾಲೇಜು, ಒಂದು ಎಂಜಿನಿಯರಿಂಗ್ ಕಾಲೇಜು, ಆಸ್ಪತ್ರೆಗಳು, ಶಾಲಾ-ಕಾಲೇಜು-ಹಾಸ್ಟೆಲ್‌ಗಳನ್ನು ಸ್ಥಾಪಿಸಿದ್ದಾರೆ ಎಂದು ವಿವರಿಸಿದರು.

ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ಶಿವಕುಮಾರ, ಜಿಲ್ಲಾ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ, ಉತ್ತರ ಮಹಿಳಾ ಅಧ್ಯಕ್ಷೆ ಮಂಗಳಮ್ಮ, ಆನಗೋಡು ನಾಗರಾಜ, ಎಸ್.ಕೆ.ಪ್ರವೀಣಕುಮಾರ ಯಾದವ್‌, ನಿಟುವಳ್ಳಿ ಪ್ರವೀಣ, ಡಿ.ಎಸ್.ಕೆ.ಪರಶುರಾಮ, ಪಾಲಿಕೆ ಮಾಜಿ ಸದಸ್ಯ ನಾಗರಾಜ, ವಿಜಯಕುಮಾರ, ನೂರುಲ್ಲಾ, ಹನುಮಂತರಾಜ ಪಾಪಣ್ಣಿ ಇತರರು ಇದ್ದರು. 10ಕೆಡಿವಿಜಿ4: ದಾವಣಗೆರೆಯಲ್ಲಿ ಬುಧವಾರ ಕಾಂಗ್ರೆಸ್ ಹಿರಿಯ ಮುಖಂಡ, ನಗರಸಭೆ ಮಾಜಿ ಅಧ್ಯಕ್ಷ ಎಚ್.ಆರ್.ನಾಗಭೂಷಣ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ವಿಶ್ವನಾಥ ಆಯ್ಕೆ
ತುಮ್ಮರಗುದ್ದಿ ಮದ್ಯ ಮುಕ್ತ ಆಗಲಿ