ದೇವಾಲಯಗಳು ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಮೇಲೆ ಬೆಳಕು ಚೆಲ್ಲುವ ಜೀವಂತ ಸ್ಮಾರಕಗಳಾಗಿವೆ. ಇಂದಿನ ದಿನಮಾನದಲ್ಲಿ ವಿಘ್ನ ವಿನಾಶಕನಾದ ಗಣೇಶನು ಹಿಂದು-ಮುಸ್ಲಿಂ ಎಂಬ ಭೇದ ಭಾವ ಇಲ್ಲದಂತೆ ಎಲ್ಲಾ ಜಾತಿ ವರ್ಗಗಳ ಜನರು ಭಕ್ತಿಯಿಂದ ಪೂಜಿಸಿ ಆರಾಧಿಸುವ ದೇವರಾಗಿದ್ದಾನೆ.
ಕೆ.ಆರ್.ಪೇಟೆ:
ಗಣೇಶ ನಾಡಿನ ಭಾವೈಕ್ಯತೆಯ ಸಂಕೇತ. ನಾವು ಯಾವುದೇ ಶುಭ ಕಾರ್ಯದ ಆರಂಭಕ್ಕೆ ಮುನ್ನ ಗಣೇಶನನ್ನು ಪೂಜಿಸುತ್ತೇವೆ ಎಂದು ರಾಜ್ಯ ಆರ್‌ಟಿಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.
ಪಟ್ಟಣದ ಹೇಮಾವತಿ ಬಡಾವಣೆ ಉದ್ಯಾನವನದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಸಂಕಷ್ಟಹರ ಗಣಪತಿ ದೇವಾಲಯ ಲೋಕಾರ್ಪಣೆ ಮಾಡಿ ಮಾತನಾಡಿ, ಇಂದಿನ ಒತ್ತಡದ ಬದುಕಿನಿಂದ ಮುಕ್ತರಾಗಲು ನಮ್ಮ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ಪಡೆಯಬೇಕಾದರೆ ದೇವರು ಮತ್ತು ಧರ್ಮದ ಮೊರೆ ಹೋಗುವುದು ಅನಿವಾರ್ಯ ಎಂದರು.
ದೇವಾಲಯಗಳು ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಮೇಲೆ ಬೆಳಕು ಚೆಲ್ಲುವ ಜೀವಂತ ಸ್ಮಾರಕಗಳಾಗಿವೆ. ಇಂದಿನ ದಿನಮಾನದಲ್ಲಿ ವಿಘ್ನ ವಿನಾಶಕನಾದ ಗಣೇಶನು ಹಿಂದು-ಮುಸ್ಲಿಂ ಎಂಬ ಭೇದ ಭಾವ ಇಲ್ಲದಂತೆ ಎಲ್ಲಾ ಜಾತಿ ವರ್ಗಗಳ ಜನರು ಭಕ್ತಿಯಿಂದ ಪೂಜಿಸಿ ಆರಾಧಿಸುವ ದೇವರಾಗಿದ್ದಾನೆ ಎಂದರು.
ಭಕ್ತರ ನೈಜ ಭಕ್ತಿಗೆ ಒಲಿದು ಆಶೀರ್ವದಿಸುವ ಭಗವಂತ ಗಣಪತಿಗೆ ಅಪಾರವಾದ ಶಕ್ತಿ ಇದೆ. ಹೇಮಾವತಿ ಬಡಾವಣೆ ಉದ್ಯಾನವನದಲ್ಲಿ ಸಂಕಷ್ಟ ಹರ ಗಣಪತಿಯ ನೂತನ ದೇವಾಲಯವನ್ನು ವಾಸ್ತು ಬದ್ಧವಾಗಿ ಹೊಯ್ಸಳ ಶಿಲ್ಪಕಲಾ ಮಾದರಿಯಲ್ಲಿ ಸಂಪೂರ್ಣವಾಗಿ ಕಲ್ಲಿನಿಂದಲೇ ನಿರ್ಮಿಸಿ ಲೋಕಾರ್ಪಣೆ ಮಾಡಿರುವುದು ಶ್ಲಾಘನೀಯ ಎಂದರು.
ಈ ವೇಳೆ ಸಂಕಷ್ಟಹರ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಬಾಲಸುಬ್ರಮಣ್ಯ, ಆಸರೆ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಎಚ್.ಬಿ. ಮಂಜುನಾಥ್, ಪುರಸಭೆ ಮಾಜಿ ಅಧ್ಯಕ್ಷರಾದ ನಟರಾಜ್, ಮಹಾದೇವಿ ನಂಜುಂಡ, ಕೆ.ಸಿ.ವಾಸು, ಕೆ.ಎಚ್.ರಾಮಕೃಷ್ಣ, ಪ್ರಥಮ ದರ್ಜೆ ಗುತ್ತಿಗೆದಾರ ಬಸವರಾಜು, ಸ್ನೇಹಿತ ರಮೇಶ್, ಅಂಬೇಡ್ಕರ್ ನಗರ ನಾಗರಾಜು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಬಜರಂಗದಳ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರತಿನಿಧಿಗಳು ಭಾಗವಹಿಸಿದ್ದರು. ದೇವಾಲಯದ ಲೋಕಾರ್ಪಣೆ ನಂತರ ನಡೆದ ಅನ್ನಪ್ರಸಾದ ವಿತರಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.