ಕುಕನೂರು: ತಾಲೂಕಿನ ಮದ್ಯ ಮಾರಾಟ ಹಾಗೂ ಜೂಜಾಟ ನಿಷೇಧದ ಮಹತ್ವದ ನಿರ್ಣಯ ತೆಗೆದುಕೊಂಡ ಬಿನ್ನಾಳ ಗ್ರಾಮಕ್ಕೆ ಕೊಪ್ಪಳದಿಂದ ಗಾಂಧಿ ಬಳಗ ಗುರುವಾರ ಪಾದಯಾತ್ರೆ ಮೂಲಕ ಆಗಮಿಸಿತು.
ಕೊಪ್ಪಳದಿಂದ ನಸುಕಿನ ಜಾವ ಹೊರಟು ಭಟಪನಹಳ್ಳಿಯಿಂದ ಚಿಕೇನಕೊಪ್ಪ ಮೂಲಕ ಪಾದಯಾತ್ರಿಗಳು ಗ್ರಾಮ ತಲುಪುತ್ತಿದ್ದಂತೆ ಪುಷ್ಪವೃಷ್ಟಿ ಮಾಡಿ ಸಂಗೀತ ವಾದ್ಯಗಳೊಂದಿಗೆ ಊರಿನ ಜನರು ಖುಷಿಯಿಂದ ಬರಮಾಡಿಕೊಂಡರು. ಗ್ರಾಮದ ಬೀದಿಗಳ ಮೂಲಕ ಯಾತ್ರೆಯು ದೇವಸ್ಥಾನ ತಲುಪಿತು. ಕೊಪ್ಪಳ ಅಶೋಕ ವೃತ್ತದಲ್ಲಿ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಪಾದಯಾತ್ರೆಗೆ ಚಾಲನೆ ನೀಡಿದರು.
ಆಶೀರ್ವಚನ ನೀಡಿದ ಕಪ್ಪತ್ತಗುಡ್ಡದ ನಂದಿವೇರಿ ಮಠದ ಶ್ರೀಶಿವಕುಮಾರ ಸ್ವಾಮೀಜಿ ಮಾತನಾಡಿ, ಸರಳ ಜೀವನವೇ ಗಾಂಧೀಜಿಯ ಧ್ಯೇಯ. ಪರಿಸರ ಶುದ್ಧವಾಗಿಟ್ಟುಕೊಳ್ಳುವ ನೀತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸುತ್ತಮುತ್ತಲಿನ ಪರಿಸರ ಉತ್ತಮವಾಗಿದ್ದರೆ ಬದುಕು ಸುಂದರವಾಗಿರುತ್ತದೆ. ಇಂಥ ಬದುಕಿಗೆ ಬಿನ್ನಾಳ ಗ್ರಾಮಸ್ಥರು ಮುಂದಾಗಿದ್ದು, ಇದು ಉಳಿದ ಹಳ್ಳಿಗಳಿಗೂ ವಿಸ್ತರಿಸಬೇಕು ಎಂದರು.ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಗಾಂಧೀಜಿಯ ಆದರ್ಶ ಬಿನ್ನಾಳ ಜನರು ಪಾಲಿಸಲು ನಿರ್ಧರಿಸಿದ್ದು ಸಂತಸದ ಸಂಗತಿ. ಈ ಗ್ರಾಮದ ಅಭಿವೃದ್ಧಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯ ಒದಗಿಸಲಾಗುವುದು ಎಂದರು.
ಪ್ರಾಸ್ತಾವಿಕ ಮಾತನಾಡಿದ ಪತ್ರಕರ್ತ ಆನಂದತೀರ್ಥ ಪ್ಯಾಟಿ ಮಾತನಾಡಿದರು. ಬಿನ್ನಾಳ ಗ್ರಾಮದ ಇತಿಹಾಸ ಕುರಿತು ಡಾ.ಸಿದ್ಧಲಿಂಗಪ್ಪ ಕೊಟ್ನೇಕಲ್ ಮಾತನಾಡಿದರು. ಗವಿಮಠ ಶ್ರೀಗಳು ಹಾಗೂ ಶಾಸಕ ಬಸವರಾಜ ರಾಯರಡ್ಡಿ ಸಂದೇಶಗಳನ್ನು ಬಸವರಾಜ ಸವಡಿ ಓದಿದರು.
ಪಂಡಿತ್ ಮಾರುತಿ ನಾವಲಗಿ ಅವರಿಂದ ಶಹನಾಯ್ ವಾದನ ನಡೆಯಿತು. ಶಂಕರ ಬಿನ್ನಾಳ ಹಾರ್ಮೋನಿಯಂ, ಪುಟ್ಟರಾಜ ಬಿನ್ನಾಳ ಕೀಪ್ಯಾಡ್ ಹಾಗೂ ಕುಮಾರ್ ಬಿನ್ನಾಳ ತಬಲಾ ಸಾಥ್ ನೀಡಿದರು. ಜತೆಯಲ್ಲೇ ಸಮನ್ವಿ, ಪ್ರತಿಭಾ, ಪೂಜಾ, ತೇಜಸ್ವಿನಿ, ಮಹಾಂತೇಶ ಹಾಗೂ ಯೋಗಣ್ಣ ಅವರಿಂದ ಗಾಂಧಿ ಭಜನೆ ಜರುಗಿತು.
ಜೀವನಸಾಬ್ ಬಿನ್ನಾಳ ಸ್ವಾಗತಿಸಿದರು. ಪ್ರಾಣೇಶ ಪೂಜಾರ ನಿರೂಪಿಸಿದರು. ನಾಗರಾಜ ನಾಯಕ ಡೊಳ್ಳಿನ ಪ್ರತಿಜ್ಞಾ ವಿಧಿ ಬೋಧಿಸಿದರು.
ವಾರ್ತಾ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಡೊಳ್ಳಿನ ಮಾತನಾಡಿ, ಮೌನತಪಸ್ವಿ ಚನ್ನವೀರ ಶರಣರು ಹಾಗೂ ಹಿರಿಯ ಸಾಹಿತಿ, ವಿದ್ವಾಂಸ ಡಾ. ದೇವೇಂದ್ರಕುಮಾರ ಹಕಾರಿ ಅವರಂತಹ ದಿಗ್ಗಜರನ್ನು ಕೊಟ್ಟ ಗ್ರಾಮವು ಸ್ವಾತಂತ್ರ್ಯ ಹೋರಾಟ ಹಾಗೂ ಹೈದರಾಬಾದ್ ವಿಮೋಚನೆಯಲ್ಲಿಯೂ ಭಾಗವಹಿಸಿದೆ ಎಂದು ಬಣ್ಣಿಸಿದರು.