ಮಂಜುನಾಥ ಕೆ.ಎಂ.
ಬಳ್ಳಾರಿ: ಒಂದೆಡೆ ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷಗಳ ಸಡಗರ ನಡೆದಿದ್ದರೆ, ಮತ್ತೊಂದೆಡೆ ಗಾಂಧೀಜಿಯವರ ವಿಚಾರಧಾರೆಗಳನ್ನು ಪ್ರಚುರಪಡಿಸುವ ಆಶಯದಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸುಮಾರು ₹3 ಕೋಟಿ ವೆಚ್ಚದಲ್ಲಿ ಎರಡೂವರೆ ವರ್ಷಗಳ ಹಿಂದೆ ನಿರ್ಮಿಸಲಾದ "ಗಾಂಧೀಭವನ " ನಿರುಪಯುಕ್ತವಾಗಿದೆ.ರಾಜ್ಯದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಗಾಂಧೀಭವನ ನಿರ್ಮಿಸಬೇಕು. ವಿದ್ಯಾರ್ಥಿ-ಯುವ ಸಮುದಾಯದಲ್ಲಿ ಗಾಂಧಿ ತತ್ವ ಆದರ್ಶಗಳು, ದೇಶಾಭಿಮಾನ ಚಿಂತನೆಗಳನ್ನು ಬಿತ್ತಲು ಈ ಗಾಂಧಿ ಭವನ ಪೂರಕವಾಗಿ ಕಾರ್ಯ ನಿರ್ವಹಿಸಬೇಕು. ಗಾಂಧೀಭವನ ಸಾಂಸ್ಕೃತಿಕ, ಶೈಕ್ಷಣಿಕ ಕೇಂದ್ರವಾಗಿ ಕಾರ್ಯ ನಿರ್ವಹಿಸಬೇಕು. ಈ ಮೂಲಕ ಇದೊಂದು ಕ್ರಿಯಾಶೀಲ ಚಟುವಟಿಕೆಗಳ ತಾಣವಾಗಬೇಕು ಎಂಬ ಉದ್ದೇಶದಿಂದ 2016-17ನೇ ಸಾಲಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದ ಆಯ-ವ್ಯಯ ಭಾಷಣದಲ್ಲಿ ಪ್ರಸ್ತಾಪಿಸಿದ್ದರು.
ಈ ಸಂಬಂಧ ಮುಖ್ಯಮಂತ್ರಿ ಸಮ್ಮುಖದಲ್ಲಿ ನಡೆದ ಚಿಂತಕರ ಸಭೆಯಲ್ಲಿ ಗಾಂಧಿ ಭವನದ ರೂಪುರೇಷೆ, ವಿನ್ಯಾಸಗಳನ್ನು ಸಿದ್ಧಪಡಿಸಲಾಯಿತು. ಅಂತೆಯೇ ಆಯಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕನಿಷ್ಠ ಒಂದರಿಂದ ಎರಡು ಎಕರೆ ಜಮೀನು ಗುರುತಿಸುವಂತೆ ಸೂಚಿಸಲಾಯಿತು. ಭವನ ನಿರ್ಮಾಣಕ್ಕೆ ಪ್ರಾರಂಭಿಕವಾಗಿ ಪ್ರತಿ ಜಿಲ್ಲೆಗೆ ₹20 ಲಕ್ಷ ಸಹ ಬಿಡುಗಡೆಗೊಳಿಸಲಾಯಿತು.ಬಳ್ಳಾರಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ಭವನ ನಿರ್ಮಾಣಕ್ಕೆ ಸೂಕ್ತ ಜಾಗ ಎಂದು ಗುರುತಿಸಿ 27,600 ಚ.ಅಡಿ ನಿವೇಶನದಲ್ಲಿ ₹2.80 ಕೋಟಿ ವೆಚ್ಚದಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದಿಂದ ಗಾಂಧಿಭವನ ನಿರ್ಮಿಸಲಾಯಿತು. ಕಳೆದ ಎರಡೂವರೆ ವರ್ಷಗಳ ಹಿಂದೆಯೇ ಭವನ ಪೂರ್ಣಗೊಂಡು ಉದ್ಘಾಟನೆಯೂ ಕಂಡಿತು. ಹಾಗೆ ನೋಡಿದರೆ ಭವನಕ್ಕೆ ಜಾಗ ಗುರುತಿಸಿದ್ದು ಹಾಗೂ ಭವನ ನಿರ್ಮಾಣ ಆಗಿದ್ದು ಸಹ ಬಳ್ಳಾರಿಯಲೇ ಮೊದಲು. ಆದರೆ, ಈವರೆಗೆ ಭವನದ ಉದ್ದೇಶದ ಚಟುವಟಿಕೆಗಳಿಗೆ ಮಾತ್ರ ಇನ್ನೂ ಚಾಲನೆ ಸಿಕ್ಕಿಲ್ಲ.
ಏನೇನಿದೆ ಗಾಂಧಿ ಭವನದಲ್ಲಿ?: ಬಳ್ಳಾರಿಯ ಡಿಸಿ ಕಚೇರಿ ಆವರಣದಲ್ಲಿ ನಿರ್ಮಾಣವಾದ ಗಾಂಧಿ ಭವನದಲ್ಲಿ ರಾಷ್ಟ್ರಪತಿ ಮಹಾತ್ಮ ಗಾಂಧೀಜಿಯವರ ಭವ್ಯ ಮೂರ್ತಿಯಿದೆ. ವಿಶಾಲ ಸಭಾಂಗಣ, ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್, ಗಣ್ಯರ ವಿಶ್ರಾಂತಿ ಕೊಠಡಿ, ಅಧಿಕಾರಿಗಳ ಕೊಠಡಿಗಳಿವೆ. ಗಾಂಧೀಜಿಯವರ ಛಾಯಾಚಿತ್ರಗಳ ಪ್ರದರ್ಶನಕ್ಕೆ ಅಗತ್ಯ ವ್ಯವಸ್ಥೆಯಿದೆ. ಸಾಕ್ಷ್ಯಚಿತ್ರಗಳ ಪ್ರದರ್ಶನಕ್ಕೆ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಗಾಂಧೀಜಿಯವರ ವಿಚಾರ ಕುರಿತು ತರಬೇತಿ ಶಿಬಿರಗಳನ್ನು ನೀಡಲು ಪೂರಕ ವ್ಯವಸ್ಥೆಗಳಿವೆ. ಆದರೆ, ವಿದ್ಯಾರ್ಥಿ-ಯುವ ಸಮುದಾಯವನ್ನು ಚೈತನ್ಯಗೊಳಿಸಲು ಕಾರ್ಯ ನಿರ್ವಹಿಸಬೇಕಾಗಿದ್ದ ಭವನ ನಿರುಪಯುಕ್ತವಾಗಿದೆ.ಭವನದ ಸದ್ಯದ ಸ್ಥಿತಿ ನೋಡಿದರೆ ಸರ್ಕಾರದ ಜಾಗ ಹಾಗೂ ಜನರ ತೆರಿಗೆ ಹಣವನ್ನು ಪೋಲು ಮಾಡಲು ಜಿಲ್ಲಾಡಳಿತ ಹಾಗೂ ಈ ಊರ ಜನಪ್ರತಿನಿಧಿಗಳೇ ಟೊಂಕಕಟ್ಟಿ ನಿಂತಂತೆ ಭಾಸವಾಗುತ್ತದೆ.
ಕೂಡಲೇ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚಿಸಿ, ಪೂರಕ ಕ್ರಮ ಕೈಗೊಳ್ಳಲಾಗುವುದು. ಗಾಂಧಿ ಭವನ ನಿರ್ಮಾಣದ ಉದ್ದೇಶ ಪರಿಪೂರ್ಣಗೊಳಿಸಲಾಗುವುದು ಎನ್ನುತ್ತಾರೆ ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ.