ಸಿಲಿಂಡರ್‌ ಸೋರಿಕೆಯಾಗಿ ಬೆಂಕಿ: ಚಿಕಿತ್ಸೆ ಫಲಿಸದೆ ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ಸಾವು

KannadaprabhaNewsNetwork |  
Published : Dec 27, 2024, 12:47 AM ISTUpdated : Dec 27, 2024, 12:37 PM IST
ಹುಬ್ಬಳ್ಳಿಯ ಕೆಎಂಸಿಆರ್‌ಐನ ಶವಾಗಾರದ ಮುಂದೆ ಮೃತರ ಕುಟುಂಬಸ್ಥರ ಆಕ್ರಂದನ. | Kannada Prabha

ಸಾರಾಂಶ

ಕಳೆದ ಭಾನುವಾರ ತಡ ರಾತ್ರಿ ಅಯ್ಯಪ್ಪಸ್ವಾಮಿ ವ್ರತಾಧಾರಿ‌ಗಳು ಪೂಜೆ ಸಲ್ಲಿಸಿ ನಿದ್ರೆಗೆ ಜಾರಿದಾಗ ಸಿಲಿಂಡರ್‌ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಬೆಂಕಿಯ ಜ್ಚಾಲೆ ಆವರಿಸಿದ್ದರಿಂದ ಬಾಲಕ ಸೇರಿದಂತೆ 9 ಮಾಲಾಧಾರಿಗಳು ತೀವ್ರವಾಗಿ ಗಾಯಗೊಂಡಿದ್ದರು.

ಹುಬ್ಬಳ್ಳಿ:  ಸಿಲಿಂಡರ್‌ ಸೋರಿಕೆಯಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ ತೀವ್ರ ಗಾಯಗೊಂಡು ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 9 ಜನ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಲ್ಲಿ ಇಬ್ಬರು ಗುರುವಾರ ಬೆಳಗ್ಗೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಇನ್ನುಳಿದ ಏಳು ಜನರಿಗೆ ಚಿಕಿತ್ಸೆ ಮುಂದುವರಿದಿದೆ.

ನಿಜಲಿಂಗಪ್ಪ ಬೇಪುರಿ (58) ಹಾಗೂ ಸಂಜಯ ಸವದತ್ತಿ (18) ಮೃತರು.

ಕಳೆದ ಭಾನುವಾರ ತಡ ರಾತ್ರಿ ಅಯ್ಯಪ್ಪಸ್ವಾಮಿ ವ್ರತಾಧಾರಿ‌ಗಳು ಪೂಜೆ ಸಲ್ಲಿಸಿ ನಿದ್ರೆಗೆ ಜಾರಿದಾಗ ಸಿಲಿಂಡರ್‌ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಬೆಂಕಿಯ ಜ್ಚಾಲೆ ಆವರಿಸಿದ್ದರಿಂದ ಬಾಲಕ ಸೇರಿದಂತೆ 9 ಮಾಲಾಧಾರಿಗಳು ತೀವ್ರವಾಗಿ ಗಾಯಗೊಂಡಿದ್ದರು. ಇವರಲ್ಲಿ ಬಾಲಕ ಹೊರತುಪಡಿಸಿ ಉಳಿದವರೆಲ್ಲರೂ ಶೇ.‌ 80ರಷ್ಟು ಪ್ರಮಾಣದಲ್ಲಿ ಸುಟ್ಟು ಗಾಯಗೊಂಡಿದ್ದರು.

ಅವರೆಲ್ಲರೂ ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ ಬೆಳಗಿನ ಜಾವ ಚಿಕಿತ್ಸೆಗೆ ಸ್ಪಂದಿಸದೆ ನಿಜಲಿಂಗಪ್ಪ ಮತ್ತು ಸಂಜಯ ಮೃತಪಟ್ಟಿದ್ದಾರೆ. ಇನ್ನುಳಿದ 6 ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಟುಂಬಸ್ಥರ ಆಕ್ರಂದನ:

ವಿಷಯ ತಿಳಿದು ಕುಟುಂಬಸ್ಥರು ದಿಗ್ಭಾಂತರಾಗಿದ್ದು, ಕೆಎಂಸಿಆರ್‌ಐನ ಶವಾಗಾರದ ಮುಂದೆ ಆಕ್ರಂದನ ಮುಗಿಲು ಮುಟ್ಟಿತ್ತು. ಸಂಜಯ ಖಾಸಗಿ ಕಾಲೇಜಿನಲ್ಲಿ ಬಿಎ ಓದುತ್ತಿದ್ದ. ಇದೇ ಮೊದಲ ಬಾರಿ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ್ದನು. ನಿಜಲಿಂಗಪ್ಪ 3ನೇ ಬಾರಿ ಮಾಲೆ ಧರಿಸಿದ್ದರು. ಡಿ. 23ರಂದು ಬೆಳಗ್ಗೆ ನಡೆದಿದ್ದ ಘಟನೆಯಿಂದಾಗಿ ಶೇ. 70ರಷ್ಟು ದೇಹದ ಭಾಗ ಸುಟ್ಟಿತ್ತು. ಬುಧವಾರ ಊಟ ಮಾಡುವುದಾಗಿಯೂ ಇಬ್ಬರು ತಿಳಿಸಿದ್ದರು. ನಿಯಮಿತವಾಗಿ ಆಹಾರವನ್ನೂ ಪೂರೈಸಲಾಗಿತ್ತು. ರಾತ್ರಿಯಿಡಿ ಗಾಯಾಳು ಅಯ್ಯಪ್ಪನ ನಾಮಸ್ಮರಣೆ ಮಾಡುತ್ತಿದ್ದರು ಎಂದು ಕೆಲ ಅಯ್ಯಪ್ಪ ಮಾಲಾಧಾರಿಗಳು ತಿಳಿಸಿದರು.

ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಜಿಲ್ಲಾಧಿಕಾರಿ ದಿವ್ಯಪ್ರಭು, ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಡಿಸಿಪಿ ಮಹಾನಿಂಗ ನಂದಗಾವಿ, ಕೆಎಂಸಿಆರ್‌ಐ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ, ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ, ತಹಸೀಲ್ದಾರ್ ಕಲಗೌಡ ಪಾಟೀಲ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಅನಿಲಕುಮಾರ ಪಾಟೀಲ ಇತರರು ಆಗಮಿಸಿದ್ದರು. ಇವರೆಲ್ಲರ ಸೂಚನೆ ಮೇರೆಗೆ ಶವಾಗಾರದಿಂದ ಮಾಲಾಧಾರಿಗಳ ಶವವನ್ನು ಅಂತ್ಯ ಸಂಸ್ಕಾರಕ್ಕೆ ಆ್ಯಂಬುಲೆನ್ಸ್‌ನಲ್ಲಿ ಕಳುಹಿಸಿಕೊಡಲಾಯಿತು.

ದೇಶಸೇವೆಯ ಕನಸು ಕಂಡಿದ್ದ ಸಂಜಯ

ಮೃತ ಸಂಜಯ ಸವದತ್ತಿ ದೇಶ ಸೇವೆ ಕನಸು ಕಂಡಿದ್ದನು. ಈ ಕುರಿತು ತನ್ನ ಸ್ನೇಹಿತರು ಹಾಗೂ ಪಾಲಕರಲ್ಲಿ ಹೇಳಿಕೊಂಡಿದ್ದನು. ಕಳೆದ 30 ದಿನಗಳಿಂದ ಮಾಲೆ ಧರಿಸಿ ಅಯ್ಯಪ್ಪನ ಸೇವೆ ಮಾಡುತ್ತಿದ್ದ. ಬುಧವಾರ ರಾತ್ರಿ ನಮ್ಮ ಜತೆ ಮಾತನಾಡಿದ್ದ. ಕೋವಿಡ್ ವೇಳೆ ತರಕಾರಿ ಮಾರಿ ಇಡೀ ಕುಟುಂಬ ಸಲುಹಿದ್ದ. ಇರುವ ಒಬ್ಬ ಮಗನನ್ನು ಕಳೆದುಕೊಂಡಿದ್ದೇವೆ ಎಂದು ಸಂಜಯ ತಂದೆ ಪ್ರಕಾಶ ಸವದತ್ತಿ ಕಣ್ಣೀರು ಹಾಕಿದರು.

ಇನ್ನೆಂದೂ ಮಾಲೆ ಹಾಕಲ್ಲ

ತಮ್ಮೊಂದಿಗೆ ಅಯ್ಯಪ್ಪ ಮಾಲಾಧಾರಿಗಳಾಗಿದ್ದವರು ತಮ್ಮ ಮುಂದೆಯೇ ಅವಘಡದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಐವರು ಮಲಾಧಾರಿಗಳು ಇನ್ಮುಂದೆ ಮಾಲೆ ಧರಿಸುವುದಿಲ್ಲ ಎಂದು ಶಪಥ ಮಾಡಿದರು. ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಮೃತರಾಗಿರುವ ಮಾಹಿತಿ ತಿಳಿಯುತ್ತಿದ್ದಂತೆ ಶವಾಗಾರದ ಮುಂದೆ ಆಗಮಿಸಿದ ಅಯ್ಯಪ್ಪ ಮಾಲಾಧಾರಿಗಳಾದ ಮಂಜುನಾಥ, ಅಕ್ಷಯ, ಆಕಾಶ, ಸಂಜು, ಕಲ್ಮೇಶ ತಾವು ಧರಿಸಿದ್ದ ಅಯ್ಯಪ್ಪ ಮಾಲೆ ತೆಗೆದು ನಾವು ಇನ್ನುಮುಂದೆ ಮಾಲೆ ಧರಿಸುವುದಿಲ್ಲ ಎಂದು ಶಪಥ ಮಾಡಿದರು.

ಪೂಜೆಗಾಗಿ ವಾಗ್ವಾದ

ಮೃತ ಮಾಲಾಧಾರಿ ನಿಜಲಿಂಗಪ್ಪ ಅವರಿಗೆ ಇಬ್ಬರು ಪತ್ನಿಯರು. ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸುವ ಸಂಬಂಧ ಕೆಲಕಾಲ ವಾಗ್ವಾದ ನಡೆದು ಅರ್ಧರಸ್ತೆಗೆ ಹೋಗಿದ್ದ ಆ್ಯಂಬುಲೆನ್ಸ್‌ ಮರಳಿ ಕೆಎಂಸಿಆರ್‌ಐನ ಶವಾಗಾರದ ಬಳಿ ಬಂದ ಘಟನೆ ನಡೆಯಿತು. ಮೊದಲ ಪತ್ನಿ ನಿರ್ಮಲಾ ಮೃತಪಟ್ಟಿದ್ದು, ಅವರ ಪುತ್ರ ಹಾಗೂ ಸಂಬಂಧಿಕರು ಪಾರ್ಥಿವ ಶರೀರವನ್ನು ಇಂಗಳಹಳ್ಳಿಗೆ ತೆಗೆದುಕೊಂಡು ಹೋಗುವುದಾಗಿ ತಿಳಿಸಿದರೆ, ಎರಡನೇ ಪತ್ನಿ ಶಾಂತಾ ನಮ್ಮ ಮನೆಯ ಮುಂದೆ ಪೂಜೆ ಸಲ್ಲಿಸಿ ಬೀಳ್ಕೊಡುವುದಾಗಿ ಹೇಳಿದರು. ಇದೇ ವಿಷಯಕ್ಕೆ ಜಗಳ ನಡೆದಾಗ ಪೊಲೀಸರು ಮಧ್ಯೆ ಪ್ರವೇಶಿಸಿದರು. ಬಳಿಕ ಶಾಂತಾ ಮನೆಗೆ ಮೃತದೇಹ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸಿದ ಬಳಿಕ ಇಂಗಳಹಳ್ಳಿಗೆ ತೆಗೆದುಕೊಂಡು ಹೋಗಲಾಯಿತು.

ಇನ್ನೂ 6 ಜನರ ಸ್ಥಿತಿ ಗಂಭೀರ

ಚಿಕಿತ್ಸೆಯ ಕುರಿತು ಮಾಹಿತಿ ನೀಡಿದ ಕಿಮ್ಸ್‌ ನಿರ್ದೇಶಕ ಡಾ. ಎಸ್‌.ಎಫ್‌. ಕಮ್ಮಾರ, ಮಾಲಾಧಾರಿಗಳ ಜೀವ ಉಳಿಸಲು ಶ್ರಮವಹಿಸಲಾಗುತ್ತಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು, ಧಾರವಾಡ ಎಸ್‌ಡಿಎಂನ ತಜ್ಞ ವೈದ್ಯರನ್ನು ಕರೆಯಿಸಲಾಗಿತ್ತು. ಬದುಕುಳಿಸಲು ಎಲ್ಲ ಪ್ರಯತ್ನ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಇಬ್ಬರು ಮೃತಪಟ್ಟಿದ್ದಾರೆ. ಇನ್ನುಳಿದ 6 ಜನರ ಸ್ಥಿತಿ ಗಂಭೀರವಾಗಿದೆ. ಓರ್ವ ಬಾಲಕ ಚೇತರಿಸಿಕೊಂಡಿದ್ದಾನೆ. ಉಳಿದವರಿಗೂ ಚಿಕಿತ್ಸೆ ಮುಂದುವರಿಸಲಾಗಿದೆ ಎಂದರು.

ಮೃತರಿಗೆ ₹ 5 ಲಕ್ಷ ಪರಿಹಾರ

ಈ ದುರ್ಘಟನೆ ನಡೆಯಬಾರದಿತ್ತು. ತೀವ್ರವಾಗಿ ಗಾಯಗೊಂಡಿದ್ದ 9 ಜನರಲ್ಲಿ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಮೃತಪಟ್ಟಿರುವುದು ತುಂಬ ದುಃಖ ತರಿಸಿದೆ. ದೇವರು ಕುಟುಂಬದವರಿಗೆ ಧೈರ್ಯ ನೀಡಲಿ, ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಮುಖ್ಯಮಂತ್ರಿಗಳು ಸಹ ಮೃತರಿಗೆ ಸಾಂತ್ವನ ತಿಳಿಸಿದ್ದಾರೆ. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ ₹ 5 ಲಕ್ಷ ಪರಿಹಾರ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಕನ್ನಡಪ್ರಭಕ್ಕೆ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ